ETV Bharat / state

ಸಕಾಲದಲ್ಲಿ ಕಾರ್ಯಕ್ರಮಕ್ಕೆ ಬಂದು ಜನರ ಸಮಸ್ಯೆ ಆಲಿಸಿ: ಸುಳ್ಯ ಶಾಸಕಿಗೆ ಸಚಿವ ಗುಂಡೂರಾವ್ ಸಲಹೆ

author img

By ETV Bharat Karnataka Team

Published : Jan 24, 2024, 7:06 AM IST

Updated : Jan 24, 2024, 7:22 AM IST

ಸರಿಯಾದ ಸಮಯಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿ ಜನರ ಸಮಸ್ಯೆ ಆಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಯೂ ಆಗಿರುವ ಸಚಿವ ದಿನೇಶ್ ಗುಂಡೂರಾವ್ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಲಹೆ ನೀಡಿದರು.

Minister Dinesh Gundurao  ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ  ಸಚಿವ ದೀನೇಶ್ ಗುಂಡೂರಾವ್  ಜನತಾದರ್ಶನ ಕಾರ್ಯಕ್ರಮ
ಸರಿಯಾದ ಸಮಯಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿ ಜನರ ಸಮಸ್ಯೆ ಆಲಿಸಬೇಕು: ಸಚಿವ ದೀನೇಶ್ ಗುಂಡೂರಾವ್ ಸುಳ್ಯ ಶಾಸಕಿಗೆ ಟಾಂಗ್

ಸಕಾಲದಲ್ಲಿ ಕಾರ್ಯಕ್ರಮಕ್ಕೆ ಬಂದು ಜನರ ಸಮಸ್ಯೆ ಆಲಿಸಿ: ಸುಳ್ಯ ಶಾಸಕಿಗೆ ಸಚಿವ ಗುಂಡೂರಾವ್ ಸಲಹೆ

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಆಗಮನಕ್ಕೂ ಮುನ್ನವೇ ಜನತಾದರ್ಶನ ಕಾರ್ಯಕ್ರಮ ಆರಂಭಿಸಿದ್ದಕ್ಕೆ ಕ್ಷೇತ್ರದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರಿಯಾದ ಸಮಯಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿ ಜನರ ಸಮಸ್ಯೆ ಆಲಿಸಬೇಕು ಎಂದು ಸಲಹೆ ನೀಡಿದ ಪ್ರಸಂಗ ಮಂಗಳವಾರ ನಡೆಯಿತು.

ಸಚಿವ ಗುಂಡೂರಾವ್‌ ಬೆಳಿಗ್ಗೆ 11 ಗಂಟೆಗೆ ಕೆವಿಜಿ ಪುರಭವನಕ್ಕೆ ಆಗಮಿಸಿದ ಬಳಿಕ ಜನತಾದರ್ಶನ ಕಾರ್ಯಕ್ರಮ ಆರಂಭವಾಗಿತ್ತು. ಈ ವೇಳೆ ಶಾಸಕಿ ಆಗಮಿಸಿರಲಿಲ್ಲ. ಪುತ್ತೂರು ಎ.ಸಿ. ಸ್ವಾಗತಿಸುತ್ತಿದ್ದಾಗ ಕಾರ್ಯಕ್ರಮಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಆಗಮಿಸಿದರು. ಈ ಸಂದರ್ಭದಲ್ಲಿ ಎಸಿಯವರ ಬಳಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

''ನಾನು ಈ ಕ್ಷೇತ್ರದ ಶಾಸಕಿ ಅಲ್ವಾ? ನಾನು ಬರುವವರೆಗೆ ಕಾಯಬಹುದಿತ್ತಲ್ವಾ? ಬಾಳಿಲದಲ್ಲಿ ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ದೀರಿ, ನಾನು ಅಲ್ಲಿ ಕಾಯುತ್ತಿದ್ದೆ. ಸರಿಯಾದ ಮಾಹಿತಿಯನ್ನೂ ನೀಡಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸುತ್ತಾ, ವೇದಿಕೆಯಲ್ಲಿ ಬಂದು ಕುಳಿತರು. ಉದ್ಘಾಟನೆ ಬಳಿಕ ಶಾಸಕಿಗೆ ಮಾತನಾಡುವ ಅವಕಾಶ ನೀಡಲಾಯಿತು. ಈ ವೇಳೆಯೂ ಅಸಮಾಧಾನ ತೋಡಿಕೊಂಡರು. ಈ ಹಿಂದೆ ಇದ್ದ ಶಾಸಕ ಅಂಗಾರ ಅವರು ಬಾಳಿಲದಲ್ಲಿ ಒಮ್ಮೆ ಉದ್ಘಾಟನೆ ಮಾಡಿದ ಹಾಸ್ಟೆಲ್‌ ಕಟ್ಟಡ ಮತ್ತೆ ಉದ್ಘಾಟನೆ ಇಟ್ಟುಕೊಂಡಿದ್ದೀರಿ. ಆ ಕಾರ್ಯಕ್ರಮದಲ್ಲೂ ನಾನು ಪಾಲ್ಗೊಂಡಿದ್ದೆ. ತಾನು ಈ ಕ್ಷೇತ್ರದ ಶಾಸಕಿ. ಮಾತ್ರವಲ್ಲದೇ ಓರ್ವ ಮಹಿಳೆ. ಈ ಕಾರಣಕ್ಕಾದರೂ ಸ್ವಲ್ಪ ಹೊತ್ತು ಕಾಯಬಹುದಿತ್ತಲ್ಲವೇ'' ಎಂದು ಪ್ರಶ್ನಿಸಿದರು.

ನಂತರ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ''ಶಾಸಕಿಯವರು ಗಮನಹರಿಸಬೇಕು. ಸರಿಯಾದ ಸಮಯಕ್ಕೆ ಜನತಾದರ್ಶನ ಆರಂಭಿಸಬೇಕೆಂದು ಬೆಳಗಿನ ಉಪಹಾರವನ್ನು ಮಂಗಳೂರಿನಲ್ಲಿ ಮಾಡದೇ ಇಲ್ಲಿಗೆ ಬಂದಿದ್ದೇವೆ. ದಾರಿಯಲ್ಲಿ ಒಂದೆರಡು ಕಡೆ ನಿಲ್ಲಿಸಿದಾಗಲೂ ಉಸ್ತುವಾರಿ ಸಚಿವರು ಜನರನ್ನು ಕಾಯಿಸಬಾರದು, ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭವಾಗಬೇಕೆಂದು ಹೇಳಿ ಬಂದಿದ್ದೇವೆ'' ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌, ತಮ್ಮ ಭಾಷಣದ ಕೊನೆಗೆ ಈ ಬಗ್ಗೆ ಪ್ರಸ್ತಾಪಿಸಿ, "ಶಾಸಕರಿಗೆ ಏನೋ ಗೊಂದಲವಾಗಿದೆ. ನಾವೇನೂ ಗೊಂದಲ ಮಾಡಿಲ್ಲ. ಜನರನ್ನು ತುಂಬಾ ಸಮಯ ಕಾಯಿಸಬಾರದು, ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭಿಸಬೇಕೆಂಬ ಕಾರಣಕ್ಕೆ ಬಂದು ಕಾರ್ಯಕ್ರಮ ಆರಂಭಿಸಿದ್ದೇವೆ. ಎಲ್ಲರ ಸಹಕಾರದಿಂದ ತಾಲೂಕಿನ ಅಭಿವೃದ್ಧಿ ಆಗಬೇಕು'' ಎಂದರು.

ಸುಳ್ಯ ಶಾಸಕಿ ಇದ್ದರೂ ಪುತ್ತೂರು ಶಾಸಕರಿಗೆ ಅಹವಾಲು ನೀಡಿದ ಜನರು: ಆಯಾಯ ಕ್ಷೇತ್ರದ ಶಾಸಕ ಸ್ಥಾನದಲ್ಲಿರುವವರ ಬಳಿಗೆ ಜನರು ತೆರಳಿ ತಮ್ಮ ಅಹವಾಲು ಸಲ್ಲಿಸುವುದು ಸಹಜ. ಆದರೆ, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಹಲವರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಬಳಿ ತಮ್ಮ ಅಹವಾಲು ಸಲ್ಲಿಸಿದ ವಿದ್ಯಮಾನವೂ ನಡೆಯಿತು.

ವಿವಿಧ ಇಲಾಖಾ ಮಟ್ಟದ ಎಲ್ಲಾ ಅಧಿಕಾರಿಗಳು ಜನತಾ ದರ್ಶನದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಶ್ರೀರಾಮನ ವಿಚಾರದಲ್ಲಿ ರಾಜಕಾರಣ ಮಾಡುವ ದರಿದ್ರ ಕಾಂಗ್ರೆಸ್​ಗೆ ಬಂದಿಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Last Updated : Jan 24, 2024, 7:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.