ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಮೂರು ದಿನ ಮಾಂಸ ಮಾರಾಟ ನಿಷೇಧಿಸಿ ಗ್ರಾಪಂ ಆದೇಶ

author img

By ETV Bharat Karnataka Desk

Published : Jan 20, 2024, 6:12 PM IST

ಮಾಂಸ ಮಾರಾಟ ನಿಷೇಧಿಸಿ ಗ್ರಾಪಂ ಆದೇಶ

ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಗ್ರಾಮದಲ್ಲಿ ಮೂರು ದಿನ ಮಾಂಸ ಮಾರಾಟ ನಿಷೇಧಿಸಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಆದೇಶಿಸಿದೆ.

ಚಾಮರಾಜನಗರ: ಅಯೋಧ್ಯೆ ರಾಮ ಮಂದಿರದಲ್ಲಿ ಸೋಮವಾರ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ವಿಶೇಷ ಸಭೆ ನಡೆಸಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧಿಸುವ ಬಗ್ಗೆ ತೀರ್ಮಾನಿಸಿದ್ದಾರೆ. ಅಂತೆಯೇ ಈ ಬಗ್ಗೆ ಪಿಡಿಓ ಅವರು ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಮೂರು ದಿನ ಮಾಂಸ ಮಾರಾಟ ನಿಷೇಧಿಸಿ ಗ್ರಾಪಂ ಆದೇಶ
ಮೂರು ದಿನ ಮಾಂಸ ಮಾರಾಟ ನಿಷೇಧಿಸಿ ಗ್ರಾಪಂ ಆದೇಶ

ತೆರಕಣಾಂಬಿ ಗ್ರಾಪಂ ವ್ಯಾಪ್ತಿಯಲ್ಲಿ ಜನವರಿ 20 ರಿಂದ 22 ರವರೆಗೆ ಎಲ್ಲ ಮಾಂಸದ ಅಂಗಡಿಗಳು ಮತ್ತು ಹೋಟೆಲ್​​ಗಳಲ್ಲಿ ಮಾಂಸ ಮಾರಾಟ ನಿಷೇಧಿಸಿ ಗ್ರಾಪಂ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ. ಮೂರು ದಿನಗಳವರೆಗೆ ಮಾಂಸ ಮಾರಾಟ ಸ್ಥಗಿತಗೊಳಿಸಬೇಕು ಎಂದು ಮಾಂಸಾಹಾರ ಹೋಟೆಲ್ ಸೇರಿದಂತೆ ಮಾಂಸ ಮಾರಾಟ ಮಳಿಗೆಗಳಿಗೂ ನೊಟೀಸ್ ನೀಡಲಾಗಿದೆ. ಒಂದು ವೇಳೆ ಮಾಂಸ ಮಾರಾಟ ಕಂಡುಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೊಟೀಸ್​​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಶಬರಿ ನೋಡಲು ಓಡೋಡಿ ಬಂದಿದ್ದ ಶ್ರೀರಾಮ: ಸುರೇಬಾನದಲ್ಲಿನ ಶಬರಿಕೊಳ್ಳದ ವಿಶೇಷತೆ ಏನು?

ಪ್ರಾಣ ಪ್ರತಿಷ್ಠಾಪನೆ ಸಕಲ ಸಿದ್ಧತೆ: ಅಯೋಧ್ಯೆ ರಾಮ ಮಂದಿರದಲ್ಲಿ ಸೋಮವಾರ (ಜ.22) ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾಗಲಿದ್ದು, ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇನ್ನು ಗುರುವಾರವಷ್ಟೇ ದೇವಾಲಯದ ಗರ್ಭಗುಡಿಯಲ್ಲಿ ಬಾಲ ಶ್ರೀರಾಮನ ವಿಗ್ರಹ ತಂದು ನಿಲ್ಲಿಸಲಾಯಿತು. ರಾಮಲಲ್ಲಾ ವಿಗ್ರಹವನ್ನು ಮೈಸೂರು ಮೂಲದ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ಈ ವಿಗ್ರಹ 51 ಇಂಚು ಎತ್ತರ ಮತ್ತು ಅಂದಾಜು 1.5 ಟನ್ ತೂಕವಿದೆ. ಕಮಲದ ಮೇಲೆ ಐದು ವರ್ಷದ ಮಗು ನಿಂತಿರುವಂತೆ ಕಲ್ಲಿನಲ್ಲಿ ಆಕರ್ಷಕವಾಗಿ ಕೆತ್ತಲಾಗಿದೆ.

ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಯೋಧ್ಯೆ ನಗರ ಹೂವುಗಳಿಂದ ಅಲಂಕೃತಗೊಂಡಿದ್ದು, ಭಕ್ತರನ್ನು ಸೆಳೆಯುತ್ತಿದೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಪ್ರಾಣ ಪ್ರತಿಷ್ಠೆಯ ವಿಧಿ-ವಿಧಾನಗಳನ್ನು ನೆರವೇರಿಸಲಿದ್ದಾರೆ. ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಪುರೋಹಿತರ ತಂಡವು ಪ್ರಮುಖ ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸಲಿದ್ದಾರೆ.

ಪ್ರಾಣ ಪ್ರತಿಷ್ಠಾಪನಾ ಕಾರ್ಯವು ಮಂಗಳಕರ, ಪೌಶ್ ಶುಕ್ಲ ಕೂರ್ಮ ದ್ವಾದಶಿ, ವಿಕ್ರಮ ಸಂವತ್ 2080 ಅಂದರೆ ಸೋಮವಾರ ಜರುಗಲಿದೆ. ಈ ನಿಟ್ಟಿನಲ್ಲಿ ಕಳೆದ ಮಂಗಳವಾರದಿಂದಲೇ ಆರು ದಿನಗಳ ವಿವಿಧ ಧಾರ್ಮಿಕ ಆಚರಣೆಗೆ ಚಾಲನೆ ನೀಡಲಾಗಿದೆ.

ಸೋಮವಾರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: ರಾಮ ಮಂದಿರದ ಕಲ್ಲು, ರಾಮಲಲ್ಲಾ ವಿಗ್ರಹದ ಶಿಲೆ ಆಯ್ಕೆ ಮಾಡಿದ್ದೇ ಕೋಲಾರ ವಿಜ್ಞಾನಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.