ETV Bharat / state

ಬೆಂಗಳೂರಿನ ಐಟಿ ಕಂಪನಿಗಳನ್ನು ಕೇರಳ ಆಹ್ವಾನಿಸುತ್ತಿರುವುದಕ್ಕೆ ಎಂ.ಬಿ ಪಾಟೀಲ್ ಖಂಡನೆ - IT companies

author img

By ETV Bharat Karnataka Team

Published : Mar 31, 2024, 4:32 PM IST

ಬೆಂಗಳೂರಿನಲ್ಲಿ ನೀರಿಲ್ಲವೆಂದು ಕೇರಳಕ್ಕೆ ಬರುವಂತೆ ಇಲ್ಲಿನ ಐ.ಟಿ ಕಂಪನಿಗಳಿಗೆ ಆಹ್ವಾನ ನೀಡುತ್ತಿರುವುದು ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ವಿರುದ್ಧವಾದುದು ಎಂದು ಸಚಿವ ಎಂ.ಬಿ ಪಾಟೀಲ್​ ಖಂಡಿಸಿದ್ದಾರೆ.

ಎಂ.ಬಿ ಪಾಟೀಲ್
ಎಂ.ಬಿ ಪಾಟೀಲ್

ಬೆಂಗಳೂರು : ಬರಗಾಲ ಮತ್ತು ಬೇಸಿಗೆ ಎರಡೂ ಸೇರಿಕೊಂಡು ನಮ್ಮ ದೇಶವೂ ಸೇರಿದಂತೆ ಜಗತ್ತಿನ ಎಲ್ಲೆಡೆಯೂ ನೀರಿನ ಕೊರತೆ ಉಂಟಾಗಿರುವುದು ನಿಸರ್ಗ ಸಹಜ ವಿದ್ಯಮಾನದ ಪರಿಣಾಮವಾಗಿದೆ. ಇದಕ್ಕೆ ಕೇರಳವೂ ಹೊರತಲ್ಲ. ಇಂತಹ ಸಂದರ್ಭದಲ್ಲಿ ಅಲ್ಲಿನ ಕೈಗಾರಿಕಾ ಸಚಿವ ಬೆಂಗಳೂರಿನಲ್ಲಿ ನೀರಿಲ್ಲವೆಂದು ತಮ್ಮ ರಾಜ್ಯಕ್ಕೆ ಬರುವಂತೆ ಇಲ್ಲಿನ ಐ.ಟಿ ಕಂಪನಿಗಳಿಗೆ ಆಹ್ವಾನ ನೀಡುತ್ತಿರುವುದು ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ವಿರುದ್ಧವಾಗಿದೆ. ಅವರ ಈ ನಡವಳಿಕೆ ಆರೋಗ್ಯಕರವಲ್ಲ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಭಾನುವಾರ ಪತ್ರಿಕಾ ಹೇಳಿಕೆಯನ್ನು ಎಂ.ಬಿ ಪಾಟೀಲ್​ ಬಿಡುಗಡೆ ಮಾಡಿದ್ದಾರೆ. ಕೇರಳದ ಕೈಗಾರಿಕಾ ಸಚಿವ ಪಿ.ರಾಜೀವ್ ಅವರು ನೀರಿನ ಕೊರತೆಯ ಹಿನ್ನೆಲೆಯಲ್ಲಿ ಬೆಂಗಳೂರನ್ನು ಬಿಟ್ಟು ತಮ್ಮ ರಾಜ್ಯಕ್ಕೆ ಬಂದು ನೆಲೆಯೂರುವಂತೆ ಐಟಿ ಕಂಪನಿಗಳಿಗೆ ಆಹ್ವಾನಿಸಿರುವ ಸಂಗತಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಇದು ಒಂದು ರೀತಿ ಕುಚೋದ್ಯದ ನಡೆ. ನಾವೆಲ್ಲರೂ ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಅಂದ ಮೇಲೆ, ಪರಸ್ಪರ ಕೊಡು-ಕೊಳ್ಳುವಿಕೆ ಇರಬೇಕೇ ವಿನಾ ಪರಿಸ್ಥಿತಿಯ ದುರ್ಲಾಭ ಪಡೆಯಲು ನೋಡಬಾರದು. ಇದರಿಂದ ಕೊನೆಗೆ ಯಾರಿಗೂ ಒಳ್ಳೆಯದಾಗುವುದಿಲ್ಲ. ಈ ಪ್ರಾಥಮಿಕ ಸತ್ಯವನ್ನು ಕೇರಳದ ಸಚಿವರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಈ ವರ್ಷ ಜಗತ್ತಿನ ಬಹುತೇಕ ಕಡೆ ನೀರಿನ ಕೊರತೆ ಕಾಣಿಸಿಕೊಂಡಿದೆ. ಇದಕ್ಕೆ ಕೇರಳವೂ ಹೊರತಲ್ಲ. ಬೆಂಗಳೂರಿನಲ್ಲಿ ಐ.ಟಿ ಕಂಪನಿಗಳು ನೆಲೆಯೂರಿರುವ ಪ್ರದೇಶಗಳಲ್ಲಿ ಕೂಡ ಗಂಭೀರ ಸ್ವರೂಪದಲ್ಲೇನೂ ನೀರಿನ ಕೊರತೆ ಕಾಣಿಸಿಕೊಂಡಿಲ್ಲ. ಜತೆಗೆ ನಮ್ಮಲ್ಲಿ ಕೇರಳ ಮೂಲದ ಲಕ್ಷಾಂತರ ಯುವಕ- ಯುವತಿಯರು ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಅವರು ಮರೆಯಬಾರದು.‌ ಕೇರಳ ಒಂದು ರಾಜ್ಯವಾಗಿ ಎಷ್ಟು ಬೇಕಾದರೂ ಬಂಡವಾಳ ಆಕರ್ಷಿಸಲಿ. ಆ ಸ್ವಾತಂತ್ರ್ಯ ಅವರಿಗಿದೆ. ಅದು ಬಿಟ್ಟು ಕ್ಷುಲ್ಲಕ ರಾಜಕಾರಣ ಸರಿಯಲ್ಲ ಎಂದು ಎಂ.ಬಿ ಪಾಟೀಲ್​ ಹೇಳಿದ್ದಾರೆ.

ಐ.ಟಿ ವರಮಾನ ಮತ್ತು ರಫ್ತು ವಹಿವಾಟಿನಲ್ಲಿ ಕರ್ನಾಟಕವು ದೇಶಕ್ಕೇ ಮೊದಲ ಸ್ಥಾನದಲ್ಲಿದ್ದು, ನಮ್ಮಲ್ಲಿ ಕೈಗಾರಿಕಾ ಸ್ನೇಹಿ ನೀತಿಗಳಿವೆ. ಇಲ್ಲಿರುವಷ್ಟು ಜಾಗತಿಕ ಮಟ್ಟದ ಕಂಪನಿಗಳು ಬೇರೆಲ್ಲೂ ಇಲ್ಲ. ಹೀಗಾಗಿ ಬೆಂಗಳೂರು ಕಳೆದ ಎರಡೂವರೆ ದಶಕಗಳಲ್ಲಿ ದೇಶದ ಹೊಸ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಆದರೆ ಕೇರಳಕ್ಕೆ ಇಂತಹ ಸಾಧನೆ ಸಾಧ್ಯವಾಗಿಲ್ಲ. ನೀರಿನ ಕೊರತೆಯನ್ನೇ ಮುಂದಿಟ್ಟುಕೊಂಡು ಇನ್ನೊಬ್ಬರ ಅವಕಾಶಗಳನ್ನು ಕಸಿದುಕೊಳ್ಳುತ್ತೇವೆ ಎನ್ನುವ ಚಿಂತನೆ ಅತ್ಯಂತ ಅಪಾಯಕಾರಿಯಾದುದು ಎಂದು ಎಂ.ಬಿ ಪಾಟೀಲ್​ ಉತ್ತರಿಸಿದ್ದಾರೆ.

ಕೇರಳದಲ್ಲಿ 40 ನದಿಗಳಿವೆ ಎಂದು ಅಲ್ಲಿನ ಸಚಿವರು ಹೇಳಿದ್ದಾರೆ. ಆದರೆ ಅಲ್ಲಿ ಎಷ್ಟು ಅಣೆಕಟ್ಟುಗಳಿವೆ?. ಎಷ್ಟರಲ್ಲಿ ಈಗ ನೀರಿದೆ?. ಮುಂತಾದ ಪ್ರಶ್ನೆಗಳು ಇಲ್ಲಿ ಏಳುತ್ತವೆ. ಕೇವಲ ನದಿಗಳಿದ್ದ ಮಾತ್ರಕ್ಕೆ ಕಂಪನಿಗಳನ್ನು ಕಟ್ಟುವುದು ಸಾಧ್ಯವಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಮುಂಗಾರುಪೂರ್ವ ಮಳೆ ಬರಲಿದ್ದು, ಬೆಂಗಳೂರು ಸೇರಿದಂತೆ ಎಲ್ಲೆಡೆಯೂ ಪರಿಸ್ಥಿತಿ ಸುಧಾರಿಸಲಿದೆ ಎಂದು ಎಂ.ಬಿ ಪಾಟೀಲ್ ವಿವರಿಸಿದ್ದಾರೆ.

ಪ್ರತ್ಯೇಕ ನೀರು ಸರಬರಾಜು ವ್ಯವಸ್ಥೆ : ಕರ್ನಾಟಕದ ಎಲ್ಲ ಕೈಗಾರಿಕಾ ಪ್ರದೇಶಗಳಿಗೆ ಸಮೀಪದ ನದಿ ಮೂಲಗಳಿಂದ‌ ನೀರು ಸರಬರಾಜಿಗೆ ಪ್ರತ್ಯೇಕ ವ್ಯವಸ್ಥೆ ಮಾಡುತ್ತಿದ್ದು, ಈ ಕುರಿತು ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಹಾಗೆಯೇ ಬೆಂಗಳೂರಿನ ಕೈಗಾರಿಕಾ ಪ್ರದೇಶಗಳಿಗೆ ಕಾವೇರಿ ನದಿಯಿಂದ ನೀರು ತರುವ ಪ್ರತ್ಯೇಕ ಯೋಜನೆ ಜಾರಿ ಸಂಬಂಧ ಹಲವು ಸಭೆಗಳನ್ನು‌ ನಡೆಸಿ, ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.

ವಿಜಯಪುರದ ಮುಳವಾಡ ಕೈಗಾರಿಕಾ ಪ್ರದೇಶಕ್ಕೆ ಆಲಮಟ್ಟಿ, ಧಾರವಾಡ, ಕಿತ್ತೂರು, ದುರ್ಗದಕೇರಿ ಕೈಗಾರಿಕಾ ಪ್ರದೇಶಗಳಿಗೆ ಮಲಪ್ರಭಾ ನದಿಯಿಂದ ನೀರು ಸರಬರಾಜು ಮಾಡುವ ಯೋಜನೆಗೆ ಟೆಂಡರ್ ಕರೆದಿದ್ದು, ಅನುಷ್ಠಾನದ ಹಂತದಲ್ಲಿ ಇದೆ. ಹೀಗೆ ರಾಜ್ಯದ ಎಲ್ಲ ಕಡೆಗೂ ಈ ರೀತಿಯ ಯೋಜನೆಗಳನ್ನು ರೂಪಿಸುತ್ತಿದೆ. ಕೈಗಾರಿಕಾ ಪ್ರದೇಶಗಳಿಗೆ ಪ್ರತ್ಯೇಕ ನೀರು ಸರಬರಾಜಿಗೆ ಕ್ರಮ ವಹಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಚುನಾವಣಾ ಬಾಂಡ್‌ನಿಂದ ಮೋದಿ ಮುಖವಾಡ ಕಳಚಿ ಬಿದ್ದಿದೆ: ಎಂ.ಬಿ.ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.