ETV Bharat / state

ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸಮೀಪಿಸುತ್ತಿದೆ ಗಡುವು; ತಪ್ಪಿದ್ರೆ ದಂಡ ಗ್ಯಾರಂಟಿ! - Deadline for HSRP

author img

By ETV Bharat Karnataka Team

Published : May 16, 2024, 5:44 PM IST

Updated : May 16, 2024, 6:00 PM IST

ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಮೇ 31 ಅಂತಿಮ ಗಡುವಾಗಿದೆ. ಇದರ ನಂತರ ದಂಡ ವಿಧಿಸಲು ಇಲಾಖೆ ನಿರ್ಧರಿಸಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

Representative Image
ಸಾಂದರ್ಭಿಕ ಚಿತ್ರ (IANS)

ಬೆಂಗಳೂರು: ವಾಹನಗಳಿಗೆ ಹಳೆಯ ನಂಬರ್‌ ಪ್ಲೇಟ್‌ ಬದಲು ಹೈಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಅಳವಡಿಕೆಗೆ ಮೇ 31 ಕಡೆಯ ದಿನವಾಗಿದೆ. ನಂತರ ದಂಡ ವಿಧಿಸಲು ಸಾರಿಗೆ ಇಲಾಖೆ ಸಿದ್ಧವಾಗಿದೆ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಬಗ್ಗೆ ಈ ಹಿಂದೆ ಸಾರಿಗೆ ಇಲಾಖೆ ನೀಡಿದ್ದ ಗಡುವು ವಿಸ್ತರಣೆ ಮಾಡುವಂತೆ ವಾಹನಗಳ ಮಾಲೀಕರಿಂದ ಒತ್ತಾಯ ಕೇಳಿ ಬಂದಿತ್ತು. ಕೆಲ ಹಳೆಯ ವಾಹನಗಳ ಕಂಪನಿಯ ಶೋರೂಮ್​ಗಳ ಅಲಭ್ಯತೆ, ವೆಬ್‌ ಪೋರ್ಟಲ್‌ನ ಸರ್ವರ್ ಸಮಸ್ಯೆ ಹಾಗೂ ಪ್ರೀ ಬುಕ್ಕಿಂಗ್ ಸ್ಲಾಟ್​ಗಳು ನಿಗದಿ ಆಗಿರುವುದರಿಂದ ನಿಗದಿತ ಸಮಯದಲ್ಲಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು‌ ವಾಹನ ಸವಾರರು ತಮ್ಮ ಅಳಲು ತೋಡಿಕೊಂಡಿದ್ದರು. ಇದರಿಂದ ಹೆಚ್ಎಸ್ಆರ್‌ಪಿ ಅಳವಡಿಕೆಗೆ ಮೇ 31ರವರೆಗೂ ಗಡುವು ನೀಡಿದೆ.

ಅವಧಿ ವಿಸ್ತರಣೆಯ ಬಳಿಕವೂ ಸಾಕಷ್ಟು ವಾಹನಗಳ ಮಾಲೀಕರು ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುತ್ತಿಲ್ಲ. ಆದ್ದರಿಂದ ಮೇ 31ರ ನಂತರವೂ ಹೆಚ್‌ಎಸ್‌ಆರ್‌ಪಿ ಪ್ಲೇಟ್‌ ಅಳವಡಿಸದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದವರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಆನಂತರದಲ್ಲಿ ಪ್ರತಿ ಬಾರಿಯೂ 1,000 ರೂ. ದಂಡ ವಿಧಿಸಲು ಚಿಂತಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸಾರಿಗೆ ಇಲಾಖೆ ಆದೇಶದ ಅನುಸಾರ 2019ರ ಏಪ್ರಿಲ್ 1ಕ್ಕೂ ಮುನ್ನ ಖರೀದಿಸಿದ/ನೊಂದಾಯಿಸಲ್ಪಟ್ಟ ವಾಹನಗಳು ಕಡ್ಡಾಯವಾಗಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವಂತೆ ಸೂಚಿಸಲಾಗಿದೆ. ರಾಜ್ಯದಲ್ಲೇ 2019ರ ಏಪ್ರಿಲ್ 1ಕ್ಕೂ ಮುನ್ನ ನೋಂದಣಿಯಾಗಿರುವ ವಾಹನಗಳ ಸಂಖ್ಯೆ ಸುಮಾರು 2 ಕೋಟಿಯಷ್ಟಿದ್ದು, ಹಳೆಯ ನಂಬರ್ ಪ್ಲೇಟ್ ಬದಲಾವಣೆಗೆ ಮೊದಲಿಗೆ 2023ರ ನವೆಂಬರ್ 17ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಸಾಕಷ್ಟು ವಾಹನಗಳ ಮಾಲೀಕರಿಗೆ ಮಾಹಿತಿಯ ಕೊರತೆ ಹಾಗೂ ಗೊಂದಲದ ಕಾರಣದಿಂದ ಸರಿಯಾದ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಆದ್ದರಿಂದ 2024ರ ಫೆಬ್ರವರಿ 17ರವರೆಗೆ ಗಡುವು ವಿಸ್ತರಿಸಲಾಗಿತ್ತು. ನಂತರವೂ ಸಹ ಮೂರನೇ ಬಾರಿಗೆ ಮೇ 31ರ ವರೆಗೂ ಗಡುವು ವಿಸ್ತರಿಸಲಾಗಿದೆ.

ಹೆಚ್ಎಸ್ಆರ್‌ಪಿ ನಂಬರ್‌ ಪ್ಲೇಟ್‌ ಎಂದರೇನು?: ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಸಾಮಾನ್ಯ ನಂಬರ್ ಪ್ಲೇಟ್ ಗಳಿಗಿಂತಲೂ ಭಿನ್ನವಾಗಿದ್ದು, ಅಲ್ಯೂಮಿನಿಯಂ ಲೋಹದಿಂದ ಇವುಗಳನ್ನ ತಯಾರಿಸಲಾಗಿರುತ್ತದೆ. ಈ ಪ್ಲೇಟ್‌ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರದ ಮುದ್ರೆಯ 20X20 ಮಿ.ಮೀ ಅಳತೆಯ ಕ್ರೋಮಿಯಂ ಹೋಲೋಗ್ರಾಮ್‌ ಇರುತ್ತದೆ. ಇಂಗ್ಲಿಷ್ ಅಕ್ಷರದೊಂದಿಗೆ ಉಬ್ಬಿಕೊಂಡಿರುವ ರೀತಿ ನಂಬರ್​ಗಳು ಅಚ್ಚಾಗಿರುತ್ತವೆ. ಇದರ ಕೆಳಗಡೆ 10 ನಂಬರಿನ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಅಂಕಿಗಳ ಮೇಲೆ ಇಂಗ್ಲಿಷ್‌ನಲ್ಲಿ ಇಂಡಿಯಾ ಎಂಬ ಪದ ಹಲವೆಡೆ ಇರುತ್ತದೆ.

ಈ ನಂಬರ್‌ ಪ್ಲೇಟ್‌ಗಳನ್ನು ಎರಡು ಲಾಕ್‌ ಪಿನ್‌ಗಳನ್ನು ಬಳಸಿ ಅಳವಡಿಸುತ್ತಾರೆ. ವಾಹನಗಳ ಕಳವು, ಅವುಗಳನ್ನು ಬಳಸಿ ಅಪರಾಧ ಚಟುವಟಿಕೆ ಮಾಡಿದಾಗ ಪರಿಶೀಲಿಸಲು ಹೆಚ್‌ಎಸ್‌ಆರ್‌ಪಿ ಸಹಕಾರಿಯಾಗಲಿದೆ. ಇದರಿಂದಾಗಿ ಅಸಲಿ ಹಾಗೂ ನಕಲಿ ನಂಬರ್ ಪ್ಲೇಟ್​ಗಳನ್ನು ಗುರುತಿಸಲು ಸುಲಭವಾಗಿರುತ್ತದೆ. ಇವುಗಳನ್ನು ಬದಲಿಸುವುದು, ವಿರೂಪಗೊಳಿಸುವುದು ಸಾಧ್ಯವಿರುವುದಿಲ್ಲ.

ಹೆಚ್ಎಸ್ಆರ್‌ಪಿ ಪಡೆಯುವ ವಿಧಾನ: ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್‌ https://transport.karnataka.gov.in/english ಅಥವಾ ಸೊಸೈಟಿ ಆಫ್‌ ಇಂಡಿಯನ್‌ ಆಟೋಮೊಬೈಲ್‌ ಮ್ಯಾನುಫ್ಯಾಕ್ಚರರ್ಸ್‌ https://www.siam.in/ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅದರಲ್ಲಿ ಬುಕ್ ಹೆಚ್ಎಸ್ಆರ್‌ಪಿ ಆಯ್ಕೆಯನ್ನು ಕ್ಲಿಕ್‌ ಮಾಡಬೇಕು.

ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ, ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ ನಂತರ ಹೆಚ್ಎಸ್ಆರ್‌ಪಿ ಅಳವಡಿಸಲು ನಿಮ್ಮ ಅನುಕೂಲಕ್ಕೆ ತಕ್ಕಂತೆ ಹತ್ತಿರದ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ, ಶುಲ್ಕವನ್ನು ಅನ್‌ಲೈನ್‌ನಲ್ಲಿ ಪಾವತಿಸಬೇಕು (ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡಲು ಅವಕಾಶವಿಲ್ಲ).

ನಂತರ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೆಚ್ಎಸ್ಆರ್‌ಪಿ ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ, ಆ ದಿನ ನಿಮ್ಮ ವಾಹನದ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಬೇಕು.

ಸೂಚನೆಗಳು: ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್‌ ಅಥವಾ ಎಸ್‌ಐಎಎಂ ವೆಬ್‌ಸೈಟ್‌ ಮೂಲಕ ಮಾತ್ರವೇ ಹೆಚ್ಎಸ್ಆರ್‌ಪಿ ಬುಕ್ ಮಾಡಬೇಕು. ಮಾರುಕಟ್ಟೆಯಲ್ಲಿ ಮಾರಾಟಗಾರರಿಂದ ನಕಲಿ ಹೊಲೋಗ್ರಾಮ್ ಅಥವಾ ಇಂಡಿಯಾ ಎಂದು ಮುದ್ರಿಸಲ್ಪಟ್ಟ/ಅನುಕರಣೆಯ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ. ಹೆಚ್ಎಸ್ಆರ್‌ಪಿ ಅಳವಡಿಸದ ವಾಹನಗಳ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು, ನಮೂದು, ರದ್ದತಿ, ಅರ್ಹತಾಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳಿಗೆ ಅನುಮತಿ ಇರುವುದಿಲ್ಲ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಸಲು ದ್ವಿಚಕ್ರ ವಾಹನಕ್ಕೆ 450 ರೂ., ತ್ರಿಚಕ್ರ ವಾಹನಗಳಿಗೆ 550 ರೂ., ಕಾರುಗಳಿಗೆ 650 ರೂ., ಇತರೆ ನಾಲ್ಕು ಚಕ್ರದ ವಾಹನಗಳಿಗೆ 780 ರೂ. ಹಾಗೂ ಭಾರೀ ವಾಹನಗಳು ಹಾಗೂ 10 ಚಕ್ರದ ವಾಹನಗಳಿಗೆ 650 ರಿಂದ 800 ರೂ. ಶುಲ್ಕ ನಿಗದಿ ಮಾಡಲಾಗಿದೆ.

ಶುಲ್ಕ ಪಾವತಿಸಿರುವ ಬಳಿಕ ಹೆಚ್ಎಸ್ಆರ್‌ಪಿ: ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ ಎಚ್‌ಎಸ್‌ಆರ್‌ಪಿ ರಸೀದಿಯನ್ನು ಪ್ರಸ್ತುತಪಡಿಸುವ ವಾಹನಗಳಿಗೆ ಯಾವುದೇ ದಂಡವಿರುವುದಿಲ್ಲ. ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ಮಾತ್ರ ಆನ್‌ಲೈನ್ ಮೂಲಕ ಪಡೆಯಬೇಕು ಮತ್ತು ಇದು ಅಳವಡಿಕೆ ಶುಲ್ಕವನ್ನೊಳಗೊಂಡಿರುತ್ತದೆ. ಹೊರತಾಗಿ ಹೆಚ್ಚುವರಿಯಾಗಿ ಶುಲ್ಕವನ್ನು ವಾಹನ ನಿರ್ಮಾಣ ಕಂಪನಿಗಳು ಅಥವಾ ಏಜೆನ್ಸಿಗಳು ಪಡೆಯುವಂತಿಲ್ಲ.

ಇದನ್ನೂ ಓದಿ: ನಕಲಿ HSRP ಲಿಂಕ್ ಕಳಿಸಿ ಸೈಬರ್ ಖದೀಮರಿಂದ ವಂಚನೆ; ಎಚ್ಚರಿಕೆ ವಹಿಸುವಂತೆ ಪೊಲೀಸ್​ ಇಲಾಖೆ ಸೂಚನೆ

Last Updated :May 16, 2024, 6:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.