ETV Bharat / state

ಮಾ.21 ಅಂತಾರಾಷ್ಟ್ರೀಯ ಅರಣ್ಯ ದಿನ: ವನ್ಯಜೀವಿ ಸಂರಕ್ಷಣೆಗೆ ನಾವೀನ್ಯ ತಂತ್ರಜ್ಞಾನ ಬಳಕೆ ಅನಿವಾರ್ಯ

author img

By ETV Bharat Karnataka Team

Published : Mar 20, 2024, 9:42 PM IST

ಪ್ರಕೃತಿ, ಪರಿಸರ, ವನ, ವನ್ಯಜೀವಿ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಸಲಹೆ ನೀಡಿದ್ದಾರೆ.

Forest Minister Ishwar Khandre
ಅರಣ್ಯ ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು: ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆಯಂತಹ ಜಾಗತಿಕ ಸಮಸ್ಯೆಗೆ ಮಾಲಿನ್ಯ ಹೆಚ್ಚಳ, ಅರಣ್ಯ ನಾಶವೇ ಕಾರಣವಾಗಿದೆ. ಪ್ರಕೃತಿ, ಪರಿಸರ, ವನ, ವನ್ಯಜೀವಿ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸಲಹೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಅರಣ್ಯ ದಿನ (ಮಾ.21) ನಿಮಿತ್ತ ಸಂದೇಶ ನೀಡಿದ ಅವರು, ಈ ಬಾರಿಯ ಅರಣ್ಯ ದಿನದ ಧ್ಯೇಯವಾಕ್ಯ ಅರಣ್ಯ ಮತ್ತು ನಾವೀನ್ಯತೆ, ಉತ್ತಮ ವಿಶ್ವಕ್ಕಾಗಿ ಹೊಸ ಪರಿಹಾರಗಳು’ (Forests and innovation: New Solutions for a better world) ಎಂಬುದಾಗಿದೆ. ಪರಿಸರ, ಅರಣ್ಯ ಪ್ರದೇಶ, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಪಕ್ಷಿ ಸಂಕುಲ ಹಾಗೂ ಜೀವವೈವಿಧ್ಯದ ಸಂರಕ್ಷಣೆಗೆ ಸಮರ್ಥವಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನಾವೀನ್ಯ ಪೂರ್ಣ ವಿಧಾನಗಳ ಅಳವಡಿಕೆ ಅತ್ಯಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಅರಣ್ಯ ಒತ್ತುವರಿ: ಅರಣ್ಯ ಒತ್ತುವರಿ ಪತ್ತೆಯಲ್ಲಿ ಉಪಗ್ರಹ ಚಿತ್ರಗಳು ಮಹತ್ವದ ಪಾತ್ರ ವಹಿಸುತ್ತವೆ. ಹಿಂದಿನ 5-10 ವರ್ಷಗಳಲ್ಲಿ ಅರಣ್ಯ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಈ ಚಿತ್ರಗಳಿಂದ ತಿಳಿಯಲು ಸಾಧ್ಯವಾಗುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಉಪಗ್ರಹ ಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರೆ ಹೊಸ ಒತ್ತುವರಿ ತಡೆಯಲು ಸಾಧ್ಯ, ಈ ವಿಧಾನವನ್ನು ಅರಣ್ಯ ಇಲಾಖೆ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದಿದ್ದಾರೆ.

ದೂರ ಸಂವೇದಿ ತಂತ್ರಜ್ಞಾನ:ಕಾಳ್ಗಿಚ್ಚಿನಿಂದ ಅರಣ್ಯ ಮತ್ತು ವನ್ಯಜೀವಿಗಳಿಗೆ ಹೆಚ್ಚಿನ ಹಾನಿ ಆಗದಂತೆ ತಡೆಯುವಲ್ಲಿ ಉಪಗ್ರಹ ಚಿತ್ರದ ನೆರವಿನಿಂದ ಮಾಹಿತಿ ನೀಡುವ ದೂರ ಸಂವೇದಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ. ಕಾಳ್ಗಿಚ್ಚಿನ ಮಾಹಿತಿ ಇಸ್ರೋದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ (ಎನ್.ಆರ್.ಎಸ್.ಸಿ.)ಗೆ ಬಂದು ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆ (ಎನ್.ಆರ್.ಎಸ್.ಸಿ.)ಗೆ ಬರುತ್ತದೆ. ಅಲ್ಲಿಂದ ಸಂಬಂಧಿತ ಅರಣ್ಯ ವಲಯದ ಸಿಬ್ಬಂದಿಗೆ ರವಾನೆ ಆಗುತ್ತಿದೆ. ಹೀಗಾಗಿ ತಕ್ಷಣ ಬೆಂಕಿ ನಂದಿಸಲು ಹಾಗೂ ಅರಣ್ಯ ರಕ್ಷಿಸಲು ಸಹಕಾರಿ ಆಗುತ್ತಿದೆ. ನಾವೀನ್ಯಪೂರ್ಣ ವಿಧಾನಗಳ ಬಳಕೆ ಅರಣ್ಯ ಸಂರಕ್ಷಣೆಗೆ ಅತ್ಯಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಪರಿಸರ, ಪ್ರಕೃತಿ ಪ್ರೇಮಿಗಳಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಈಶ್ವರ್ ಖಂಡ್ರೆ ಅಂತಾರಾಷ್ಟ್ರೀಯ ಅರಣ್ಯ ದಿನದ ಶುಭ ಕೋರಿದ್ದಾರೆ.

ಇದನ್ನೂ ಓದಿ:ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಗೆ ಗೂಡು ಕಟ್ಟಿ ಕಾಳು, ನೀರು ನೀಡುವ ರಾಮನಗರದ ಮರಸಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.