ETV Bharat / state

ಶೇ.60ರಷ್ಟು ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕಲು 3,044 ವ್ಯಾಪಾರಿಗಳ ನಿರ್ಲಕ್ಷ್ಯ

author img

By ETV Bharat Karnataka Team

Published : Feb 28, 2024, 9:59 PM IST

Updated : Feb 29, 2024, 8:04 AM IST

ಬೆಂಗಳೂರಿನಲ್ಲಿ 3 ಸಾವಿರಕ್ಕೂ ಹೆಚ್ಚಿನ ವಾಣಿಜ್ಯ ಕಟ್ಟಡಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕಾರ್ಯ ಪೂರ್ಣವಾಗಿಲ್ಲ.

ಶೇ.60ರಷ್ಟು ಕನ್ನಡವಿರುವ ಬೋರ್ಡ್ ಹಾಕದಿರುವ 3385 ವ್ಯಾಪಾರಿಗಳು
ಶೇ.60ರಷ್ಟು ಕನ್ನಡವಿರುವ ಬೋರ್ಡ್ ಹಾಕದಿರುವ 3385 ವ್ಯಾಪಾರಿಗಳು

ಬೆಂಗಳೂರು: ಕನ್ನಡ ನಾಮಫಲಕ ಅಳವಡಿಕೆಗೆ ಸಂಬಂಧಿಸಿದಂತೆ ಗಡುವು ಮುಗಿಯುತ್ತಾ ಬಂದರೂ, ರಾಜಧಾನಿ ಬೆಂಗಳೂರಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ವ್ಯಾಪಾರದ ಸ್ಥಳಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ನಾಮಫಲಕ ಅಳವಡಿಕೆಯಾಗಿಲ್ಲ.

ಬೆಂಗಳೂರಿನಲ್ಲಿ ಹಲವು ಮಾಲ್, ಅಂಗಡಿ ಹಾಗೂ ಕಂಪನಿಗಳು ಕನ್ನಡ ನಾಮಫಲಕ ಅಳವಡಿಸಿಲ್ಲ ಎಂದು ಆರೋಪಿಸಿ ಕನ್ನಡಪರ ಸಂಘಟನೆಗಳ ಪ್ರತಿಭಟನೆಯ ಬೆನ್ನಲ್ಲೇ ಫೆ.28ರೊಳಗೆ ರಾಜಧಾನಿ ಬೆಂಗಳೂರಿನ ಖಾಸಗಿ ಸಂಸ್ಥೆ, ಅಂಗಡಿ ಹಾಗೂ ಮಾಲ್‌ಗಳಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕು ಎಂಬ ಆದೇಶವನ್ನು ಸರಕಾರ ಹೊರಡಿಸಿತ್ತು. ಇದಕ್ಕೆ ಪೂರಕವಾಗಿ ಶೇ.60ರಷ್ಟು ಕನ್ನಡ ನಾಮಫಲಕ ಅಳವಡಿಸಬೇಕೆಂದು ಕಾಯಿದೆಯನ್ನೂ ಜಾರಿಗೆ ತರಲಾಗಿತ್ತು. ಆದರೆ ಸರ್ಕಾರ ನೀಡಿರುವ ಗಡುವು ಮುಗಿಯುತ್ತಾ ಬಂದರೂ, ರಾಜಧಾನಿಯಲ್ಲಿ 3,044 ವಾಣಿಜ್ಯ ಕಟ್ಟಡಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕಾರ್ಯ ಪೂರ್ಣವಾಗಿಲ್ಲ.

ವಾಣಿಜ್ಯ ಕಟ್ಟಡದಲ್ಲಿ ಕನ್ನಡ ನಾಮಫಲಕ ಕಡ್ಡಾಯ ಎನ್ನುವ ಆದೇಶದ ಬೆನ್ನಲ್ಲೇ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 55 ಸಾವಿರಕ್ಕೂ ಹೆಚ್ಚು ಕಟ್ಟಡದಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಬಹಿರಂಗವಾಗಿತ್ತು. ಅದರಂತೆ 55,178 ಮಂದಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಆ ಪೈಕಿ ಈಗಲೂ 3,044 ಅಂಗಡಿ, ಮಳಿಗೆಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವ ಕಾರ್ಯ ಬಾಕಿ ಉಳಿದಿದೆ.

ಕನ್ನಡ ನಾಮಫಲಕಕ್ಕೆ ಸಂಬಂಧಿಸಿದಂತೆ ಪಾಲಿಕೆ ಜಾರಿಗೊಳಿಸಿದ್ದ 55,178 ಪ್ರಕರಣಗಳಲ್ಲಿ 52,134 ಅಂಗಡಿಗಳು ಮತ್ತು ವ್ಯಾಪಾರಿಗಳು ಸರಕಾರದ ಆದೇಶ ಪಾಲಿಸಿ, ಶೇ.60ರಷ್ಟು ಕನ್ನಡ ಕಾಣಿಸುವಂತೆ ನಾಮಫಲಕವನ್ನು ಅಳವಡಿಸಿದ್ದಾರೆ. ಇನ್ನುಳಿದ 3,044 ಮಂದಿ ನೋಟಿಸ್‌ಗೆ ಪ್ರತಿಕ್ರಿಯಿಸಿಲ್ಲ.

ಈ ಬಗ್ಗೆೆ ಬಿಬಿಎಂಪಿ ಅಧಿಕಾರಿಗಳು ಮಾತನಾಡಿ, "ವಲಯ ಮಟ್ಟದಲ್ಲಿ ನೋಟಿಸ್‌ಗಳನ್ನು ನೀಡಲಾಗಿದೆ. ಬಹುತೇಕ ವ್ಯಾಪಾರಸ್ಥರು ಬಿಬಿಎಂಪಿ ಸೂಚನೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿ, ಅಗತ್ಯ ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ ಬಾಕಿಯಿರುವ ವಾಣಿಜ್ಯ ಕಟ್ಟಡ ಮಾಲೀಕರು ಕೊನೆ ದಿನಾಂಕ ಹತ್ತಿರವಾದರೂ ಕ್ರಮವಹಿಸಿಲ್ಲ. ಆದ್ದರಿಂದ ಶೇ. 60ರಷ್ಟು ಕನ್ನಡ ನಾಮಫಲಕ ಅಳವಡಿಸದವರಿಗೆ ಯಾವ ರೀತಿಯ ಕ್ರಮವಹಿಸಬೇಕು ಎನ್ನುವ ಬಗ್ಗೆೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.

ಗಡುವು ವಿಸ್ತರಣೆ : "ಶೇ.60ರಷ್ಟು ಕನ್ನಡ ನಾಮಫಲಕ ಅಳವಡಿಸಿಕೊಳ್ಳಲು ಸಾಧ್ಯವಾಗದವರು ಇನ್ನಷ್ಟು ದಿನ ಸಮಯಾವಕಾಶ ಕೇಳಿದ್ದಾರೆ. ಹೀಗಾಗಿ ಈಗಾಗಲೇ ನಾಮಫಲಕ ಅಳವಡಿಕೆಯ ಕುರಿತಂತೆ ಆದೇಶ ಹೊರಡಿಸಲಾಗಿಸಿದ್ದರೂ ಸಹ ಕಾಲಾವಕಾಶದ ವಿಸ್ತರಣೆ ಮಾಡಲಾಗಿದೆ. ನಿಯಮ ಪಾಲಿಸದ ವಾಣಿಜ್ಯ ಕಟ್ಟಡಗಳು ಹಾಗೂ ಅಂಗಡಿಗಳಿಗೆ ನೋಟಿಸ್ ನೀಡಲಾಗಿದ್ದು, ನಿಯಮ ಪಾಲಿಸುವಲ್ಲಿ ವಿಫಲವಾದರೆ ಬಿಬಿಎಂಪಿ ವ್ಯಾಪಾರ ಪರವಾನಗಿಯನ್ನು ಅಮಾನತುಗೊಳಿಸಿ ಮತ್ತು ದಂಡವನ್ನು ವಿಧಿಸಲಿದೆ" ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಇದನ್ನೂ ಓದಿ: 'ಕನ್ನಡ ನಾಮಫಲಕ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಬೀದಿಗಿಳಿದು ಹೋರಾಟ'

Last Updated : Feb 29, 2024, 8:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.