ETV Bharat / state

ಕಾಡಾನೆ ದಾಳಿಗೆ ಮತ್ತೊಂದು ಬಲಿ: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ, ಗ್ರಾಮಸ್ಥರ ಆಕ್ರೋಶ - Man dies in elephant attack

author img

By ETV Bharat Karnataka Team

Published : Mar 26, 2024, 7:15 PM IST

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ತಣಿಗೆಬೈಲ್ ಸಮೀಪದ ವರ್ತೆಗುಂಡಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಟಿಂಬರ್ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

Akbar
ಅಕ್ಬರ್

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ತೋಟಕ್ಕೆ ಬಂದಿದ್ದ ಆನೆ ಓಡಿಸುವಾಗ ರೊಚ್ಚಿಗೆದ್ದು ಮನುಷ್ಯನಿಗೆ ತಿವಿದಿದೆ. ಇದರಿಂದಾಗಿ ಆನೆಯ ಕೊಂಬು ತುಂಡಾಗಿ ನೆಲದಲ್ಲಿ ಬಿದ್ದಿದೆ. ಆನೆ ದಾಳಿಗೆ ಸಿಲುಕಿ ಟಿಂಬರ್ ಕಾರ್ಮಿಕನ ದೇಹ ಛಿದ್ರ ಛಿದ್ರವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ತಣಿಗೆಬೈಲ್ ಸಮೀಪದ ವರ್ತೆಗುಂಡಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಅಕ್ಬರ್ (35) ಎಂಬುವವರು ಮೃತ ದುರ್ದೈವಿಯಾಗಿದ್ದಾರೆ. ತೋಟದಲ್ಲಿ ಆನೆ ಓಡಿಸುವಾಗ ಈ ದುರಂತ ಸಂಭವಿಸಿದೆ.

ತೋಟದ ಸುತ್ತ ನಿಂತು ಆನೆ ಓಡಿಸುತ್ತಿದ್ದ ಸ್ಥಳೀಯರ ಮೇಲೆ ರೊಚ್ಚಿಗೆದ್ದು ಏಕಾಏಕಿ ಕಾಡಾನೆ ನುಗ್ಗಿದೆ. ಈ ವೇಳೆ, ಅಕ್ಬರ್ ಮೇಲೆ ದಾಳಿ ಮಾಡಿದ್ದು, ಕಾಲಿನಿಂದ ಹೊಸಕಿ ಕೋರೆಯಿಂದ ತಿವಿದಿದೆ. ಇದರಿಂದಾಗಿ ಕಾರ್ಮಿಕರ ದೇಹದ ಅಂಗಾಗಗಳು ಛಿದ್ರವಾಗಿದ್ದು, ಕರುಳು ಹೊರಕ್ಕೆ ಬಂದಿದೆ. ಆನೆಯ ಆಕ್ರೋಶ ಯಾವ ಮಟ್ಟಿಗೆ ಇತ್ತು ಎಂದರೆ, ತಿವಿದ ರಭಸಕ್ಕೆ ದಂತ ಮುರಿದು ನೆಲದಲ್ಲಿ ಹೂತುಕೊಂಡಿದೆ.

ಆನೆಯ ದಂತ ಮೃತ ದೇಹದ ಪಕ್ಕದಲ್ಲೇ ಬಿದ್ದಿದೆ. ಮೃತ ಅಕ್ಬರ್ ಟಿಂಬರ್ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದರು. ಈ ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡಿದ್ದು, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಎರಡು ಜೀವಗಳು ಕಾಡಾನೆಗೆ ಬಲಿಯಾಗಿವೆ.

ಕಾಡಾನೆ ಹಾವಳಿ ವಿಪರೀತ : ಈಗ ಮೂರು ದಿನದ ಹಿಂದೆ ಚಿಕ್ಕಮಗಳೂರು ಸಮೀಪದಲ್ಲಿ ತೋಟದ ಕಾರ್ಮಿಕರೊಬ್ಬರು ಕಾಡಾನೆಗೆ ಬಲಿಯಾಗಿದ್ದರು. ಇದೀಗ ಟಿಂಬರ್ ಕಾರ್ಮಿಕರೊಬ್ಬರು ಬಲಿಯಾಗಿದ್ದಾರೆ. ಕಾಡಾನೆ ಹಾವಳಿ ವಿಪರೀತವಾಗಿದ್ದು, ಜನರು ನಿರಂತರವಾಗಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ದೊರಕಿಸಬೇಕು ಎಂದು ಜನರು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಚಿಕ್ಕಮಗಳೂರು: ತೋಟಕ್ಕೆ ಹೋಗುತ್ತಿದ್ದ ಕಾರ್ಮಿಕನನ್ನು ಬಲಿ ಪಡೆದ ಕಾಡಾನೆ - Elephant Attack

ETV Bharat Logo

Copyright © 2024 Ushodaya Enterprises Pvt. Ltd., All Rights Reserved.