ETV Bharat / state

ಮಂಗಳೂರು: ವೈದ್ಯಾಧಿಕಾರಿಯಿಂದ ಹಲ್ಲೆ ಆರೋಪ: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಸಾವು - man died

author img

By ETV Bharat Karnataka Team

Published : May 14, 2024, 5:17 PM IST

ಪಶು ವೈದ್ಯಾಧಿಕಾರಿಯೊಬ್ಬರು ಹಲ್ಲೆ ನಡೆಸಿದ ಕಾರಣ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂಬ ಆರೋಪ ಬೆಳ್ತಂಗಡಿಯಲ್ಲಿ ಕೇಳಿ ಬಂದಿದೆ.

ವೈದ್ಯಾಧಿಕಾರಿಯಿಂದ ಹಲ್ಲೆ, ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಸಾವು
ವೈದ್ಯಾಧಿಕಾರಿಯಿಂದ ಹಲ್ಲೆ, ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಸಾವು (ETV Bharat)

ಮಂಗಳೂರು: ಪಶು ವೈದ್ಯಾಧಿಕಾರಿಯೊಬ್ಬರು ಹಲ್ಲೆ ಮಾಡಿದ್ದಕ್ಕೆ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ಆರೋಪ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಜೋಡುಮಾರ್ಗ ಸರ್ಕಲ್​ನಲ್ಲಿ ಕೇಳಿ ಬಂದಿದೆ. ಕೊಕ್ಕಡ ಗ್ರಾಮದ ನಿವಾಸಿ ಕೃಷ್ಣ ಯಾನೆ ಕಿಟ್ಟ (58) ಹಲ್ಲೆಯಿಂದ ಮೃತಪಟ್ಟ ವ್ಯಕ್ತಿ ಆಗಿದ್ದಾರೆ. ಘಟನೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಧರ್ಮಸ್ಥಳ ಠಾಣೆ ಪೊಲೀಸರು ಆರೋಪಿ ಪಶು ವೈದ್ಯರನ್ನು ಬಂಧಿಸಿದ್ದಾರೆ.

ಏನಿದು ಘಟನೆ?: ವಿಪರೀತ ಜ್ವರವಿದ್ದ ಹಿನ್ನೆಲೆಯಲ್ಲಿ ಕೃಷ್ಣ ಅವರು ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದರು‌‌. ಚೇತರಿಕೆಯಾದ ಬಳಿಕ ಕೊಕ್ಕಡಕ್ಕೆ ವಾಪಸ್​ ಆಗಿದ್ದರು. ಈ ವೇಳೆ ಅವರಿಗೆ ಆಪ್ತರಾಗಿದ್ದ ಪಶು ವೈದ್ಯಾಧಿಕಾರಿ ಡಾ‌.ಕುಮಾರ್ ಸಿಕ್ಕಿದ್ದಾರೆ‌. ಅವರು ಕೃಷ್ಣರೊಂದಿಗೆ ಮಾತನಾಡುತ್ತ ಇಷ್ಟು ಬೇಗ ಯಾಕೆ ಡಿಸ್ಚಾರ್ಜ್ ಆಗಿ‌ ಬಂದೆ. ಆರೋಗ್ಯ ಸುಧಾರಿಸುವವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿತ್ತು ಎಂದು ಬುದ್ಧಿ ಮಾತು ಹೇಳಿ ಒಂದು ಏಟು ಹೊಡೆದಿದ್ದಾರೆ ಎನ್ನಲಾಗಿದೆ.

ಹೊಡೆದ ರಭಸಕ್ಕೆ ಕೃಷ್ಣ ಅವರು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಮೃತ ಕೃಷ್ಣ ಅವರ ಪತ್ನಿ ಭಾರತಿ ಪಶು ವೈದ್ಯಾಧಿಕಾರಿ ಮೇಲೆ ದೂರು ನೀಡಿದ್ದಾರೆ. ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಡಾ‌.ಕುಮಾರ್ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 30 ವರ್ಷದ ಹಿಂದೆ ಸಾವನ್ನಪ್ಪಿದ ಪ್ರೇತದ ಮದುವೆಗೆ ಬೇಕಂತೆ 'ಪ್ರೇತವರ'! - Ghost Marriage Advertisement

ETV Bharat Logo

Copyright © 2024 Ushodaya Enterprises Pvt. Ltd., All Rights Reserved.