ETV Bharat / state

ಫೈವ್ ಸ್ಟಾರ್ ಹೋಟೆಲ್​ ಬಿಲ್ ಕೊಡಲು ನಕಲಿ‌ ಪೇಮೆಂಟ್ ಸ್ಕ್ರೀನ್​​ ಶಾಟ್ ತೋರಿಸಿದ್ದ ವ್ಯಕ್ತಿ ಬಂಧನ - Fraud Case

author img

By ETV Bharat Karnataka Team

Published : Apr 4, 2024, 11:04 AM IST

ಫೈವ್ ಸ್ಟಾರ್​​​ನಲ್ಲಿ ಉಳಿದು ಬಿಲ್ ಪೇ ಮಾಡಲು ನಕಲಿ‌ ಫೇಮೆಂಟ್ ಸ್ಕ್ರೀನ್​​ ಶಾಟ್ ತೋರಿಸಿ ವಂಚಿಸಿದ್ದ ವ್ಯಕ್ತಿ ಅರೆಸ್ಟ್

man-arrested-for-showing-fake-payment-screen-shot-to-pay-five-star-hotel-bill
ಫೈವ್ ಸ್ಟಾರ್ ಹೋಟೆಲ್​ ಬಿಲ್ ನೀಡಲು ನಕಲಿ‌ ಪೇಮೆಂಟ್ ಸ್ಕ್ರಿನ್ ಶಾಟ್ ತೋರಿಸಿದ್ದ ವ್ಯಕ್ತಿ ಬಂಧನ

ಬೆಂಗಳೂರು: ನಗರದ ಪಂಚತಾರಾ ಹೋಟೆಲ್​ವೊಂದರಲ್ಲಿ ಉಳಿದುಕೊಂಡು ಬಿಲ್ ಪೇ ಮಾಡಲು ನಕಲಿ ಪೇಮೆಂಟ್ ಸ್ಕ್ರೀನ್ ಶಾಟ್ ತೋರಿಸಿ, ಯಾಮಾರಿಸಲು ಮುಂದಾಗಿದ್ದ ವಂಚಕನನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗಾಲ್ಫ್ ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್​ನ ಮ್ಯಾನೇಜರ್ ಶಮೀರ್ ದೇಸಾಯಿ ಎಂಬುವರು ನೀಡಿದ ದೂರಿನ ಮೇರೆಗೆ ಕೋಲ್ಕತ್ತಾ ಮೂಲದ ಬೊರಡ ಸುನೀಲ್ ಎಂಬಾತನನ್ನು ಬಂಧಿಸಲಾಗಿದೆ.

ಆರೋಪಿ ಮಾರ್ಚ್ 31ರಂದು ಆನ್​ಲೈನ್ ಮೂಲಕ ಹೋಟೆಲ್ ರೂಮ್ ಬುಕ್ ಮಾಡಿದ್ದ. ಅಲ್ಲದೇ, ಏರ್​​ಪೋರ್ಟ್​​​ನಿಂದ ಕರೆತರಲು ಬಿಎಂಡಬ್ಲ್ಯೂ ಕಾರು ಬೇಕು ಎಂದು ಸೂಚಿಸಿದ್ದ. ಈತನ ಮನವಿ ಮೇರೆಗೆ ಏರ್​​ಪೋರ್ಟ್​​ನಿಂದ ಹೋಟೆಲ್​ನವರು ಕರೆತಂದಿದ್ದರು. ರೂಮಿನಲ್ಲಿ ಉಳಿದುಕೊಂಡ ಆರೋಪಿ 17,346 ರೂ. ಪಾವತಿಸಿರುವುದಾಗಿ ಹೋಟೆಲ್ ಸಿಬ್ಬಂದಿಗೆ ಪೇಮೆಂಟ್ ಮಾಡಿದ ನಕಲಿ ಸ್ಕ್ರಿನ್ ಶಾಟ್ ತೋರಿಸಿದ್ದಾನೆ. ಆದರೆ, ಹಣ ಸಂದಾಯ ಆಗದಿರುವ ಬಗ್ಗೆ ಸಿಬ್ಬಂದಿ ಪ್ರಶ್ನಿಸಿದಾಗ ತನ್ನ ಕಡೆಯಿಂದ ಹಣ ಪಾವತಿಯಾಗಿದೆ. ನಿಮ್ಮ‌ ಕಡೆಯಿಂದ ಟೆಕ್ನಿಕಲ್ ಸಮಸ್ಯೆ ಇರಬಹುದು ಎಂದು ತಿಳಿಸಿದ್ದನಂತೆ.

ತಾಂತ್ರಿಕವಾಗಿ ತೊಂದರೆಯಾಗಿರಬಹುದು ಎಂದು ಭಾವಿಸಿದ ಸಿಬ್ಬಂದಿ ಸುಧೀರ್​​ಗೆ ರೂಮಿಗೆ ಹೋಗಲು ಅನುವು ಮಾಡಿದ್ದರು. ಮಾರನೇ ದಿನ ಸ್ಥಳೀಯವಾಗಿ ಓಡಾಡಲು ಬಿಎಂಡಬ್ಲ್ಯೂ ಕಾರು ಬೇಕು ಎಂದೂ ಕೂಡಾ ಸೂಚಿಸಿದ ಮೇರೆಗೆ ಹೋಟೆಲ್​​ನವರು ವ್ಯವಸ್ಥೆ ಮಾಡಿದ್ದರು. ಏಪ್ರಿಲ್‌ 1 ರಂದು ಓಡಾಡಿದ ಬಳಿಕ ಸಂಜೆ‌ ನೇರವಾಗಿ ಏರ್​​ಪೋರ್ಟ್​​​ಗೆ ಡ್ರಾಪ್ ಮಾಡುವಂತೆ ಕಾರು ಚಾಲಕನಿಗೆ ಸೂಚಿಸಿದ್ದ.‌ ಆದರೆ, ಹೋಟೆಲ್​ನಿಂದ ತನಗೆ ಅನುಮತಿ ನೀಡಿಲ್ಲ‌ ಎಂದು ನಿರಾಕರಿಸಿದ ಚಾಲಕ ಆರೋಪಿಯನ್ನು ಮರಳಿ ಹೋಟೆಲ್ ಬಳಿ ಕರೆತಂದಿದ್ದ‌. ಬಳಿಕ ಕಾರು ಹಾಗೂ ರೂಮ್ ಬಾಡಿಗೆ ಸೇರಿ 80 ಸಾವಿರ ರೂ. ಪಾವತಿಸುವಂತೆ ಹೊಟೇಲ್ ಸಿಬ್ಬಂದಿ ಸೂಚಿಸಿದ್ದರು.

ಆಗ ಸುನೀಲ್ ಕ್ರೆಡಿಟ್ ಕಾರ್ಡ್ ನೀಡಿದ್ದ, ಆದರೆ ಹಣ ಸಂದಾಯವಾಗಿರಲಿಲ್ಲ. ಇದೇ ವಿಚಾರವಾಗಿ ಮಾತನಾಡಿ, 10,750 ರೂಪಾಯಿ ಮಾತ್ರ ಹಣವಿದೆ. ಉಳಿದ ಹಣವನ್ನು ನಂತರ ಪಾವತಿಸುತ್ತೇನೆ ಎಂದು ಹೇಳಿದ್ದಾನೆ. ಅದೇ ದಿನ ರಾತ್ರಿ 8 ಗಂಟೆವರೆಗೂ ಕಾಯ್ದು ಬಳಿಕ ಬಿಲ್ ಭರಿಸುವಂತೆ ಹೇಳಿದ್ದಕ್ಕೆ, ರಾತ್ರಿ ಪೂರ್ಣ ಹಣ ಪಾವತಿಸಿರುವುದಾಗಿ ಆರೋಪಿಯು ವಾದ ನಡೆಸಿದ್ದಾನೆ. ಇದರಿಂದ ಈತನ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಲಾಗಿತ್ತು.

ಆರೋಪಿಗೆ ಬರುತ್ತಿದ್ದ ಕರೆಗಳ ಬಗ್ಗೆ ಪರಿಶೀಲಿಸಿದಾಗ ಸಿಕ್ಕಿಂ ಸ್ಪಾದಲ್ಲಿ ಉಳಿದುಕೊಳ್ಳಲು ನಕಲಿ ಐಡಿ ಕ್ರಿಯೇಟ್ ಮಾಡಿ ಹಣ ಕಟ್ಟದೇ ವಂಚಿಸಿರುವುದು ಗೊತ್ತಾಗಿದೆ.‌ ಅಲ್ಲದೇ, ಸೇನಾ ಅಧಿಕಾರಿ ಹೆಸರಿನಲ್ಲಿಯೂ ವಂಚಿರುವ ಬಗ್ಗೆ ಕೋಲ್ಕತ್ತಾದ ಪ್ರಗತಿ ಮೈದಾನ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿರುವುದಾಗಿ ಕಂಡುಕೊಂಡ ಹೈಗ್ರೌಂಡ್ಸ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮಗನ ಬಾಳಿನಲ್ಲಿ ಬಂದಿರುವುದಕ್ಕೆ ದೋಷ ಎಂದು ಮಹಿಳೆಗೆ ಬ್ಲ್ಯಾಕ್​ಮೇಲ್​: ಅಮ್ಮ- ಮಗನ ವಿರುದ್ಧ ಪ್ರಕರಣ - Blackmail Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.