ETV Bharat / state

ಕೈಗಾರಿಕೆಗಳು, ಜನದಟ್ಟಣೆ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿಗಾ ವ್ಯವಸ್ಥೆ ಕಡ್ಡಾಯಗೊಳಿಸಿ: ಹೈಕೋರ್ಟ್ - High Court

author img

By ETV Bharat Karnataka Team

Published : May 15, 2024, 6:18 PM IST

ಕೈಗಾರಿಕೆಗಳು, ಜನದಟ್ಟಣೆ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿಗಾ ವ್ಯವಸ್ಥೆ ಕಡ್ಡಾಯಗೊಳಿಸಲು ಹೈಕೋರ್ಟ್ ಸೂಚನೆ ನೀಡಿದೆ.

AIR QUALITY MONITORING  DENSELY POPULAT  INDUSTRIES  BENGALURU
ಹೈಕೋರ್ಟ್ ಸೂಚನೆ (ಕೃಪೆ: ETV Bharat)

ಬೆಂಗಳೂರು : ಕೈಗಾರಿಕಾ ಪ್ರದೇಶ ಮತ್ತು ಹೆಚ್ಚು ಜನಸಂದಣಿಯ ಪ್ರದೇಶದಲ್ಲಿ ಸ್ವಯಂಚಾಲಿತ ನಿರಂತರ ವಾಯು ಗುಣಮಟ್ಟ ನಿಗಾ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಪರಿಸರ ನಿಯಂತ್ರಣ ಮಂಡಳಿ(ಕೆಎಸ್‌ಪಿಸಿಬಿ)ಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಶೃಂಗೇರಿ ನಗರದಲ್ಲಿ ಸರ್ಕಾರದ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ ಬಾಳೆ ಚಿಪ್ಸ್, ಕಾಫಿ ಬೀಜದ ಸಿಪ್ಪೆ ಸುಲಿಯುವ ಕೈಗಾರಿಕೆಗಳನ್ನು ನಡೆಸುತ್ತಿರುವ ಕ್ರಮ ಪ್ರಶ್ನಿಸಿ ಪದ್ಮ ಮತ್ತು ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ಈ ನಿರ್ದೇಶನ ನೀಡಿದೆ.

ಅಲ್ಲದೆ, ದೇಶದ ನಾಗರಿಕರಿಗೆ ಮಾಲಿನ್ಯ ಮುಕ್ತ ವಾತಾವರಣ ಲಭ್ಯವಾಗುವಂತೆ ಮಾಡಲು ಕೆಎಸ್‌ಪಿಸಿಬಿಯು ವಾಯು ಮತ್ತು ಜಲ ಕಾಯ್ದೆಗಳನ್ನು ಜಾರಿ ಮಾಡಲು ಸೂಕ್ತ ವ್ಯವಸ್ಥೆ ತರಬೇಕಾಗಿದೆ. ಜನಸಂಖ್ಯೆಯ ಮೇಲೆ ಪರಿಣಾಮ ಬೀರುವ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಯುಗದಲ್ಲಿ ಕೆಎಸ್‌ಪಿಸಿಬಿ ಅಥವಾ ರಾಜ್ಯಕ್ಕೆ ವೆಚ್ಚವು ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಮಾಲಿನ್ಯ ರಹಿತ ಪರಿಸರದ ಹಕ್ಕು ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕಾಗಿದೆ. ದೇಶದ ನಿವಾಸಿಗಳನ್ನು ಮಾಲಿನ್ಯಗೊಂಡಿರುವ ಪರಿಸರದಲ್ಲಿ ವಾಸಿಸುವ ಮೂಲಕ ರೋಗದಿಂದ ಬಳಲುವಂತೆ ಮಾಡಲಾಗದು ಎಂದು ನ್ಯಾಯಾಲಯ ತಿಳಿಸಿದೆ. ಹೀಗಾಗಿ ಕೆಎಸ್‌ಪಿಸಿಬಿ ಅಧ್ಯಕ್ಷರಿಗೆ ಮುಂದಿನ ಆರು ವಾರಗಳಲ್ಲಿ‌ ರಾಜ್ಯಾದ್ಯಂತ ವಾಯು ಗುಣಮಟ್ಟ ನಿಗಾ ವ್ಯವಸ್ಥೆಯ ಕುರಿತಾದ ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ನ್ಯಾಯ ಪೀಠ ನಿರ್ದೇಶಿಸಿದೆ.

ದೂರು ಸ್ವೀಕಾರವಾದ ತಕ್ಷಣ ಕೆಎಸ್‌ಪಿಸಿಬಿಯು ಸ್ಥಳ ಪರಿಶೀಲನೆ ನಡೆಸಿ, ಅಗತ್ಯವಾದ ಪರೀಕ್ಷೆಗಳನ್ನು ನಡೆಸಬೇಕು ಮತ್ತು ಅವುಗಳ ಪರಿಶೀಲನೆಗಾಗಿ ಮಾದರಿಗಳನ್ನು ಸಂಬಂಧಿತ ಪ್ರಯೋಗಾಲಯಕ್ಕೆ ರವಾನಿಸಬೇಕು ಎಂದು ನ್ಯಾಯಾಲಯ ಹೇಳಿದೆ. ದೂರುಗಳನ್ನು ಆಧರಿಸಿ ಮಾತ್ರವೇ ಮಾಲಿನ್ಯದ ಮೇಲೆ ನಿಗಾ ಇಡುವುದಲ್ಲ. ಈ ಸಂಬಂಧ ಕೆಎಸ್‌ಪಿಸಿಬಿಯು ನಿರಂತರವಾಗಿ ನಿಗಾ ವ್ಯವಸ್ಥೆ ರೂಪಿಸಬೇಕಿದೆ ಹೇಳಿದೆ.

ಉದ್ಯಮಗಳು ಮಾಲಿನ್ಯ ಮಟ್ಟ ಅಳೆಯಲು ಸೂಕ್ತ ವ್ಯವಸ್ಥೆ ಮಾಡಬೇಕು. ಅಲ್ಲಿ ಅಳವಡಿಸಲಾದ ಸಾಧನಗಳು ನೈಜ ಸಮಯದಲ್ಲಿ ವರದಿ ನೀಡಲಿದ್ದು, ಅದನ್ನು ಸಂಬಂಧಿತ ಕೆಎಸ್‌ಪಿಸಿಬಿ ದತ್ತಾಂಶಕ್ಕೆ ಕಳುಹಿಸಿಕೊಡಬೇಕು ಎಂದು ಹೈಕೋರ್ಟ್​ ತಿಳಿಸಿದೆ.

ಕೆಂಪು (ಅಪಾಯಕಾರಿ ರಾಸಾಯನಿಕಗಳು, ಆಟೋಮೊಬೈಲ್) ಮತ್ತು ಕೇಸರಿ (ಆಯುರ್ವೇದ ಔಷಧ ತಯಾರಿಕೆ, ಅಲ್ಯೂಮಿನಿಯಂ ಕೈಗಾರಿಕೆ) ವಿಭಾಗದ ಪರಿಸರ ವಲಯದಲ್ಲಿ ಬರುವ ಕಾರ್ಖಾನೆಗಳಲ್ಲಿ ಸ್ವಯಂಚಾಲಿತ ಮತ್ತು ನಿರಂತರ ಕಾರ್ಯನಿರ್ವಹಿಸುವ ಸ್ಟೇಶನ್‌ಗಳನ್ನು ಸ್ಥಾಪಿಸಬೇಕು. ಇವುಗಳು ಸುತ್ತಲಿನ ವಾಯು ಮತ್ತು ಗಾಳಿಯ ಗುಣಮಟ್ಟ ಪರಿಶೀಲಿಸಲಿವೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಅಲ್ಲದೆ, ಮುಂದಿನ ಆರು ತಿಂಗಳಲ್ಲಿ ಸರ್ಕಾರವು ಇವುಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆಯನ್ನು ಹೇಗೆ ಸಾಧಿಸಲಿದೆ ಎಂಬುದಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿಯನ್ನು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಇದನ್ನೂ ಓದಿ:ಗ್ರಾ.ಪಂ ಸದಸ್ಯರ ಗುತ್ತಿಗೆ ಅಸ್ತಿತ್ವದಲ್ಲಿದ್ದರೆ ಮಾತ್ರ ಸದಸ್ಯತ್ವ ಅನರ್ಹಗೊಳಿಸಬಹುದು: ಹೈಕೋರ್ಟ್ - Panchayat Act

ETV Bharat Logo

Copyright © 2024 Ushodaya Enterprises Pvt. Ltd., All Rights Reserved.