ETV Bharat / state

ಏಪ್ರಿಲ್ 15 ರಂದು ಗೀತಾ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಕೆ: ಸಚಿವ ಮಧು ಬಂಗಾರಪ್ಪ - Nomination Paper Submission

author img

By ETV Bharat Karnataka Team

Published : Mar 26, 2024, 6:07 PM IST

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ಗೀತಾ ಶಿವರಾಜ್ ಕುಮಾರ್ ಅವರು ಏಪ್ರಿಲ್ 15 ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Etv Bharat
Etv Bharat

ಏಪ್ರಿಲ್ 15 ರಂದು ಗೀತ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಕೆ

ಶಿವಮೊಗ್ಗ : ಏಪ್ರಿಲ್ 15 ರಂದು ಗೀತ ಶಿವರಾಜ್ ಕುಮಾರ್ ಅವರು ಅಪಾರ ಬೆಂಬಲಿಗರ ಜೊತೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶಿವಣ್ಣ ಪ್ರಚಾರದ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿವಣ್ಣ ಪ್ರಚಾರದಿಂದ ಅಭ್ಯರ್ಥಿ ಗೀತಾ ಅವರಿಗೆ ಅನುಕೂಲವಾಗಲಿದೆ. ಗೀತಾ ಕೇವಲ ಬಂಗಾರಪ್ಪ ಮಗಳಲ್ಲ ಶಿವಣ್ಣನ ಪತ್ನಿ, ಡಾ.ರಾಜ್ ಕುಮಾರ್ ಸೊಸೆ ಆಗಿದ್ದಾರೆ‌. ಈ ಬಾರಿ ಗೀತಾ ಗೆಲ್ಲುವುದು ನೂರಕ್ಕೆ ನೂರು ಗ್ಯಾರಂಟಿ. ರಾಘವೇಂದ್ರ ಈ ಬಾರಿ ಸೋಲುತ್ತಾರೆ ಎಂದರು.

ಈಶ್ವರಪ್ಪ ಹಗುರವಾಗಿ ಮಾತನಾಡಬಾರದು: ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಅವರು ಗೀತಾ ಶಿವರಾಜ್ ಕುಮಾರ್ ಅವರ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಈಶ್ವರಪ್ಪ ಅವರ ಅವಶ್ಯಕತೆ ನಮಗೆ ಇಲ್ಲ. ಬಿಜೆಪಿ ಹಣೆಬರಹ ಏನು ಎಂದು ಜನ ತೋರಿಸಿಕೊಟ್ಟಿದ್ದಾರೆ. ಈಶ್ವರಪ್ಪ ಅವರ ಮಗನಿಗೆ ಟಿಕೆಟ್ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ. ಬಿಜೆಪಿಯವರು ತಮ್ಮ ತಮ್ಮ ಸಮಸ್ಯೆ ಬಿಟ್ಟು ನಮ್ಮ ಅಭ್ಯರ್ಥಿ ಬಗ್ಗೆ ಮಾತನಾಡಬಾರದು. ಈಶ್ವರಪ್ಪ ಹಿರಿಯ ನಾಯಕರು, ಅವರಿಗೆ ಇದು ಶೋಭೆ ತರಲ್ಲ ಎಂದು ಮಧು ಬಂಗಾರಪ್ಪ ಟಾಂಗ್​ ಕೊಟ್ಟರು.

ಬಿಜೆಪಿ ಅಭ್ಯರ್ಥಿ ರಾಘವೇಂದ್ರ ವಿರುದ್ದವೂ ವಾಗ್ದಾಳಿ: ಕಳೆದ 15 ವರ್ಷ ಬಿ.ವೈ ರಾಘವೇಂದ್ರ ಸಂಸದರಾಗಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜಿಲ್ಲೆಯಲ್ಲಿ ಏನಾದರೂ ಅಭಿವೃದ್ಧಿ ಆಗಿದ್ದರೆ ಅದರಲ್ಲಿ ರಾಜ್ಯ ಸರ್ಕಾರದ ಪಾಲು ಸಹ ಇದೆ ಎಂದರು.

ಎಲ್ಲ ಕಡೆ ಉತ್ತಮವಾದ ಸ್ಪಂದನೆ - ಗೀತಾ ಶಿವರಾಜ್ ಕುಮಾರ್ : ಲೋಕಸಭಾ ಕ್ಷೇತ್ರದ ಪ್ರವಾಸ ಈಗಾಗಲೇ ನಡೆಸುತ್ತಿದ್ದು, ಎಲ್ಲ ಕಡೆ ಉತ್ತಮವಾದ ಸ್ಪಂದನೆ ಸಿಗುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಇಂದು ಗೀತಾ ಶಿವರಾಜ್ ಕುಮಾರ್ ದಂಪತಿ ಶಿವಮೊಗ್ಗದ ನಗರದ ದೇವತೆ ಮಾರಿಕಾಂಬ ದೇವಾಲಯಕ್ಕೆ ಭೇಟಿ ನೀಡಿ ಗದ್ದುಗೆ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ನಾನು ಭದ್ರಾವತಿಯಿಂದ ಪ್ರಚಾರ ಆರಂಭಿಸಿದ್ದೇನೆ. ಇವತ್ತು ಭದ್ರಾವತಿ, ಶಿಕಾರಿಪುರದಲ್ಲಿ ಪ್ರಚಾರ ನಡೆಸಲಿದ್ದೇನೆ. ಹೋದ ಕಡೆ ತೊಂದರೆ ಕಾಣುತ್ತಿಲ್ಲ. ಎಲ್ಲಾ ಕಡೆ ಬೆಂಬಲ‌ ನೀಡುತ್ತಿದ್ದಾರೆ. ನನ್ನ ಗೆಲುವು 100ಕ್ಕೆ ನೂರರಷ್ಟು ನಿಶ್ಚಿತ. ಐದು ಗ್ಯಾರಂಟಿ ಜೊತೆ ಮುಂದೆ ಹಲವು ಯೋಜನೆ ಇದೆ. ಹಾಗಾಗಿ ಮತ‌ ನೀಡಿ ಎಂದು ಕೇಳುತ್ತಿದ್ದೇವೆ ಎಂದರು.

ಗೆಲ್ಲಬೇಕು ಅಂತಾನೇ ಚುನಾವಣೆಗೆ ನಿಲ್ಲೋದು - ಶಿವರಾಜ್ ಕುಮಾರ್ : ಇದೇ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್ ಚುನಾವಣೆಯಲ್ಲಿ ಗೆಲ್ಲಬೇಕು ಅಂತಾನೇ ನಿಲ್ಲುವುದು ಎಂದು ಹೇಳಿದ್ದಾರೆ. ಚುನಾವಣೆ ಎಂದರೆ ಮುಖದಲ್ಲಿ ಭರವಸೆ ಬರಬೇಕು. ಜನರಿಗೆ ನಂಬಿಕೆ ಬೇಕು. ಭರವಸೆ ಇದ್ದರೆ ಮಾತ್ರ ಚುನಾವಣೆ ನಿಲ್ಲಬೇಕು. ಭರವಸೆ ಇಲ್ಲದಿದ್ದರೆ ಚುನಾವಣೆಗೆ ನಿಲ್ಲಬಾರದು. ಈ ಸಲ ತುಂಬಾ ಚೆನ್ನಾಗಿ ಪಾಸಿಟಿವ್​ ಇರುವುದು ನನಗೆ ಖುಷಿ ಕೊಡುತ್ತಿದೆ‌. ಕ್ಷೇತ್ರದ ಸಮಸ್ಯೆ ಬಗ್ಗೆ ನನಗೆ ಗೊತ್ತಿಲ್ಲ. ಗೀತಾ ಸಮಸ್ಯೆ ಬಗ್ಗೆ ಗಮನಹರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೊಂದೆಡೆ ಸೋಮವಾರ ಭದ್ರಾವತಿ ತಾಲೂಕು ಹೊಳೆ ಹೂನ್ನೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ನೈರುತ್ಯ ಪದವಿಧರರ ಕ್ಷೇತ್ರದ ಅಭ್ಯರ್ಥಿ ಅಯನೂರು ಮಂಜುನಾಥ್ ತಮ್ಮ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ವಿನಂತಿಸಿಕೊಂಡರು.

ಇದನ್ನೂ ಓದಿ : ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತ: ಹಾಸನಕ್ಕೆ ಪ್ರಜ್ವಲ್ ರೇವಣ್ಣ ಫಿಕ್ಸ್​, ಕೋಲಾರಕ್ಕೆ ಯಾರು? - Lok Sabha Elections

ETV Bharat Logo

Copyright © 2024 Ushodaya Enterprises Pvt. Ltd., All Rights Reserved.