ETV Bharat / state

ಕೋಲಾರ ಕಾಂಗ್ರೆಸ್​ ಟಿಕೆಟ್​ ಹಂಚಿಕೆ ಬಿಕ್ಕಟ್ಟು; ರಾಜೀನಾಮೆಗೆ ಮುಂದಾದ ಶಾಸಕರು - KOLAR TICKET ISSUE

author img

By ETV Bharat Karnataka Team

Published : Mar 27, 2024, 1:39 PM IST

Updated : Mar 27, 2024, 3:52 PM IST

ಲೋಕಸಭೆ ಟಿಕೆಟ್​ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರ ಕಾಂಗ್ರೆಸ್​ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಕೋಲಾರ ಕಾಂಗ್ರೆಸ್​ ಟಿಕೆಟ್​ ಹಂಚಿಕೆ ಬಿಕ್ಕಟ್ಟು
ಕೋಲಾರ ಕಾಂಗ್ರೆಸ್​ ಟಿಕೆಟ್​ ಹಂಚಿಕೆ ಬಿಕ್ಕಟ್ಟು

ಕೋಲಾರ: ಲೋಕಸಭೆ ಟಿಕೆಟ್​​ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ಮತ್ತೊಂದು ಹಂತಕ್ಕೆ ಹೋಗಿದೆ. ಇದು ಕೋಲಾರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಲೋಕಸಭೆ ಟಿಕೆಟ್​ ವಿಚಾರಕ್ಕಾಗಿ ಸಚಿವರು ಸೇರಿದಂತೆ ಕೋಲಾರ ಲೋಕಸಭಾ ಕ್ಷೇತ್ರದ ಶಾಸಕರುಗಳು ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಸಚಿವ ಸುಧಾಕರ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ನಂಜೇಗೌಡ, ಎಂ.ಎಲ್. ಸಿಗಳಾದ ನಸೀರ್ ಅಹ್ಮದ್ ಹಾಗೂ ಅನಿಲ್ ಕುಮಾರ್ ಅವರು ಸ್ಪೀಕರ್​ಗೆ ರಾಜೀನಾಮೆ ನೀಡಲು ಸಮಯ ಕೇಳಿದ್ದಾರೆ ಎಂದು ಹೇಳಲಾಗ್ತಿದೆ.

ಕೊತ್ತೂರು ಮಂಜುನಾಥ್ ಹೇಳಿಕೆ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಲಗೈ ಸಮುದಾಯದ ಮತಗಳು ಹೆಚ್ಚು ಇವೆ‌. ಜೊತೆಗೆ ಪ್ರಾರಂಭದಿಂದಲೂ ಬಲಗೈ ಸಮುದಾಯಕ್ಕೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಲಗೈ ಸಮುದಾಯಕ್ಕೇ ಟಿಕೆಟ್ ನೀಡಬೇಕೆಂಬ ಒತ್ತಾಯವನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ನಂಜೇಗೌಡ, ಎಸ್.ಎನ್. ನಾರಾಯಣಸ್ವಾಮಿ ಸೇರಿದಂತೆ ಎಂ.ಎಲ್. ಸಿಗಳಾದ ನಜೀರ್ ಅಹ್ಮದ್ ಹಾಗೂ ಅನಿಲ್ ಕುಮಾರ್ ಅವರು ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿದ್ದರು. ಆದ್ರೆ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಫೈನಲ್​ ಎನ್ನಲಾಗಿದೆ. ಹೀಗಾಗಿ ನಾವು ರಾಜೀನಾಮೆ ನೀಡಲು ಮುಂದಾಗಿದ್ದು, ಸ್ಪೀಕರ್ ಅವರಿಗೆ ಸಮಯ ಕೇಳಿದ್ದೇವೆ. ಮಂಗಳೂರಿಗೆ ತೆರಳಲು ವಿಮಾನ ಟಿಕೆಟ್​ ಕೂಡ ಬುಕ್​ ಮಾಡಿದ್ದೇವೆ ಎಂದು ತಿಳಿಸಿದರು.

ಶಾಸಕರ ಮನವೊಲಿಸಲು ಯತ್ನ: ಇನ್ನು, ರಾಜೀನಾಮೆಗೆ ಮುಂದಾದ ಸಚಿವ ಮತ್ತು ಶಾಸಕರ ಮನವೊಲಿಸಲು ಯತ್ನ ನಡೆಯಿತು. ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರಿಂದ ಮನವೊಲಿಕೆ ಯತ್ನ ನಡೆಸಲಾಗಿದೆ.

ಯಾರೂ ರಾಜೀನಾಮೆ ನೀಡುವುದಿಲ್ಲ: ಕೋಲಾರದ‌ ಶಾಸಕರು ಮತ್ತು ಎಂಎಲ್​ಸಿ ಗಳ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರದಲ್ಲಿ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಪ್ರತಿಕ್ರಿಯಿಸಿದ್ದಾರೆ. ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನನಗೆ ವೈಯಕ್ತಿಕವಾಗಿ ರಾಜೀನಾಮೆ ನೀಡುವುದಾಗಿ ಯಾರೂ ಹೇಳಿಲ್ಲ. ಯಾರೂ ಸಹ ರಾಜೀನಾಮೆ ಕೊಡುವುದಿಲ್ಲ. ಕಾಂಗ್ರೆಸ್ ಶಾಸಕರು ಕಟ್ಟಾಳುಗಳು, ಎಲ್ಲರಿಗೂ ಕಮಿಟ್ಮೆಂಟ್ ಇರುತ್ತೆ. ಆದ್ರೆ ಅವರ ಆಭಿಪ್ರಾಯಗಳಲ್ಲಿ ವ್ಯತ್ಯಾಸ ಇರುವ ಹಿನ್ನೆಲೆ ಶಾಸಕರು ಕೆಲ ಅಭ್ಯರ್ಥಿಗಳ ಪರ ಮಾತನಾಡಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಹೇಳಿದರು.

ಹೈಕಮಾಂಡ್ ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಸಿಎಂ, ಡಿಸಿಎಂ ನೇತೃತ್ವದಲ್ಲಿ ಕೋಲಾರ ಜಿಲ್ಲೆಯ ಎಲ್ಲ ಶಾಸಕರ ಸಭೆ ನಡೆಸಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ತಿಳಿಸಿದ್ದಾರೆ. ಅದಕ್ಕೆ ಎಲ್ಲರೂ ಸಮ್ಮತಿ ನೀಡಿದ್ದಾರೆ. ಇಂದು ಸಂಜೆ ಅಭ್ಯರ್ಥಿ‌ ಘೋಷಣೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.

Last Updated : Mar 27, 2024, 3:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.