ETV Bharat / state

ಲೋಕಸಭೆ ಚುನಾವಣೆ, ಬಿಜೆಪಿ ಅವಲೋಕನ ಸಭೆ : ಟಾರ್ಗೆಟ್‌ ರೀಚ್‌ ಕುರಿತು ಹೈಕಮಾಂಡ್​ಗೆ ವರದಿ? - BJP Review Meeting

author img

By ETV Bharat Karnataka Team

Published : May 11, 2024, 6:46 PM IST

ಲೋಕಸಭೆ ಚುನಾವಣೆ ಬಗ್ಗೆ ಬಿಜೆಪಿ ಅವಲೋಕನ ಸಭೆ ನಡೆಸಿದ್ದು, ಟಾರ್ಗೆಟ್‌ ರೀಚ್‌ ಕುರಿತ ವರದಿ ಪಕ್ಷದ ಹೈಕಮಾಂಡ್​ಗೆ ರವಾನಿಸಿದ್ದಾರಾ ಎಂಬುದಷ್ಟೇ ತಿಳಿದು ಬರಬೇಕಿದೆ.

LOK SABHA ELECTION  HIGH COMMAND  TARGET REACH  BENGALURU
ಟಾರ್ಗೆಟ್‌ ರೀಚ್‌ ಕುರಿತ ಹೈಕಮಾಂಡ್​ಗೆ ವರದಿ? (ETV Bharat)

ಬೆಂಗಳೂರು : ರಾಜ್ಯದಲ್ಲಿ ನಡೆದ ಎರಡು ಹಂತಗಳ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​ನಿಂದಾಗಿ ಸ್ವಲ್ಪ ಮಟ್ಟಿಗೆ ಹಿನ್ನೆಡೆಯಾಗಬಹುದು ಎಂದು ಬಿಜೆಪಿ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಪ್ರಕರಣದಿಂದ ಪಕ್ಷದ ವರ್ಚಸ್ಸಿಗೆ ಸ್ವಲ್ಪ ಮಟ್ಟಿಗೆ ಹಿನ್ನೆಡೆಯಾಗಿರುವುದಾಗಿ ಅಸಮಾಧಾನ ಕೂಡಾ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಚುನಾವಣೆ ನಿರ್ವಹಣೆ ಕುರಿತು ರಾಜ್ಯ ಬಿಜೆಪಿ ನಾಯಕರು ಪರಾಮರ್ಶೆ ನಡೆಸಿದ್ದು, ಟಾರ್ಗೆಟ್‌ ರೀಚ್‌ ಕುರಿತ ಅವಲೋಕನ ನಡೆಸಿ ಪಕ್ಷದ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಇಂದು ನಡೆದ ಅವಲೋಕನ ಸಭೆಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್, ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಕಳೆದ ಬಾರಿ ಏಕಾಂಗಿಯಾಗಿ ಸ್ಪರ್ಧೆ ಮಾಡಿ 25 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಅಷ್ಟು ಸ್ಥಾನ ಉಳಿಸಿಕೊಳ್ಳುವುದು ಸಾಧ್ಯವಿಲ್ಲ. ಜೆಡಿಎಸ್‌‍ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಕಳೆದ ಬಾರಿಗಿಂತ ಹೆಚ್ಚಿನ ಸಾಧನೆ ಕಷ್ಟ ಎನ್ನಲಾಗಿದೆ. ಆದರೂ ಎಷ್ಟು ಸ್ಥಾನ ಗಳಿಸಲಿದೆ ಹಾಗೂ ಎಲ್ಲಿ ಹಿನ್ನಡೆ ಸಾಧ್ಯತೆ ಇದೆ ಎನ್ನುವ ಕುರಿತು ರಾಜ್ಯದ ನಾಯಕರು ಪರಾಮರ್ಶೆ ನಡೆಸಿದ್ದಾರೆ.

ಬಿಜೆಪಿ 25 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, 3 ಕ್ಷೇತ್ರದಲ್ಲಿ ಜೆಡಿಎಸ್‌‍ ಸ್ಪರ್ಧಿಸಿದೆ. ಎಲ್ಲ ಕ್ಷೇತ್ರಗಳಲ್ಲಿ ನಡೆದ ಇಡೀ ಚುನಾವಣಾ ಪ್ರಚಾರ ಪ್ರಕ್ರಿಯೆ ಕುರಿತು ಇಂದಿನ ಸಣಬೆಯಲ್ಲಿ ಪರಾಮರ್ಶೆ ನಡೆಸಲಾಯಿತು. ಚುನಾವಣಾ ನಿರ್ವಹಣಾ ಸಮಿತಿ ನೇತೃತ್ವದಲ್ಲಿ ವ್ಯವಸ್ಥಿತವಾಗಿ ಚುನಾವಣಾ ಪ್ರಚಾರ ನಡೆಸಲಾಗಿದೆ. ನಿರೀಕ್ಷೆಯಂತೆ ಪ್ರಚಾರ ಕಾರ್ಯ ನಡೆದಿದೆಯಾ ಅಥವಾ ಹಿನ್ನಡೆಗೆ ಕಾರಣವಾಗುವಂತಹ ಘಟನೆಗಳು ನಡೆದಿವೆಯಾ ಎನ್ನುವ ಕುರಿತು ಅಭಿಪ್ರಾಯ ಸಂಗ್ರಹಿಸಲಾಗಿದೆ.

ಬಿಜೆಪಿ ಲೋಕಸಭಾ ಚುನಾವಣೆಯನ್ನು ಬೂತ್‌ಮಟ್ಟದಿಂದಲೇ ನಿರ್ವಹಿಸಿದ್ದು, ಈ ಕುರಿತಾದ ವರದಿಯನ್ನು ಈಗಾಗಲೇ ಪಡೆಯಲಾಗಿದೆ. ಈ ವರದಿಯನ್ನಾಧರಿಸಿ ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆಲ್ಲಬಹುದು ಎಂಬ ಬಗ್ಗೆ ಚರ್ಚೆಗಳು ನಡೆದವು. ಬಿಜೆಪಿ ವರಿಷ್ಠರು ರಾಜ್ಯದಲ್ಲಿ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಆಂತರಿಕ ಸಮೀಕ್ಷಾ ವರದಿಯನ್ನು ಪಡೆದುಕೊಂಡಿದ್ದರೂ ರಾಜ್ಯ ಘಟಕದಿಂದ ವಸ್ತುಸ್ಥಿತಿಯ ವರದಿಯನ್ನು ಬಯಸಿದೆ. ಅದರಂತೆ ಈ ಸಭೆಯ ಬಳಿಕ ಹೈಕಮಾಂಡ್‌ಗೆ ವರದಿಯನ್ನು ಕಳುಹಿಸಲಾಗುತ್ತದೆ.

ಬೂತ್‌ ಮಟ್ಟದಿಂದಲೇ ಚುನಾವಣಾ ನಿರ್ವಹಣೆ ನಡೆದಿದ್ದು, ಅದರ ಸಂಪೂರ್ಣ ವರದಿ ಪಡೆಯಲಾಗುತ್ತದೆ. ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದಲ್ಲಿ ನಡೆದ 14 ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿ 11 ಜೆಡಿಎಸ್‌‍ 3 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಚಾಮರಾಜನಗರದಲ್ಲಿ ಪಕ್ಷಕ್ಕೆ ಹಿನ್ನಡೆ ಸಾಧ್ಯತೆಯಿದೆ. ಬೆಂಗಳೂರು ಗ್ರಾಮಾಂತರದಲ್ಲಿ ನಡೆದ ಹಲವು ಘಟನೆಗಳಿಂದ ಪಕ್ಷಕ್ಕೆ ಹಿನ್ನಡೆಯಾಗುವ ನಿರೀಕ್ಷೆಯಿದೆ. ಇನ್ನು ಮಿತ್ರ ಪಕ್ಷಕ್ಕೆ ನೀಡಿರುವ ಮೂರು ಸ್ಥಾನಗಳಲ್ಲಿ ಮಂಡ್ಯದಲ್ಲಿ ಭಾರಿ ಪೈಪೋಟಿ ನಡೆದಿದ್ದು, ಹಾಸನ ಅಭ್ಯರ್ಥಿ ವಿವಾದದಲ್ಲಿ ಸಿಲುಕಿದ್ದರಿಂದ ಹಿನ್ನಡೆ ಆಗಿದೆಯಾ ಎನ್ನುವ ಕುರಿತು ಬಿಜೆಪಿ ನಾಯಕರಿಂದಲೇ ಮಾಹಿತಿ ಪಡೆಯಲಾಗುತ್ತದೆ. ಮೊದಲ ಹಂತದ 14 ಕ್ಷೇತ್ರದಲ್ಲಿ 8 ರಿಂದ 10 ಕ್ಷೇತ್ರದಲ್ಲಿ ಗೆಲ್ಲುವ ಲೆಕ್ಕಾಚಾರವಿದ್ದು, ಆ ಬಗ್ಗೆ ಅಂಕಿ ಅಂಶಗಳೊಂದಿಗೆ ಸಮಗ್ರ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಇನ್ನು ಎರಡನೇ ಹಂತದಲ್ಲಿ ಉತ್ತರ ಕರ್ನಾಟಕದ 14 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆ ಬಿಜೆಪಿ ನಾಯಕರದ್ದಾಗಿದೆ. ಎಲ್ಲ 14 ಕ್ಷೇತ್ರದಲ್ಲಿಯೂ ಬಿಜೆಪಿಯೇ ಸ್ಪರ್ಧೆ ಮಾಡಿದ್ದು, ಜೆಡಿಎಸ್‌‍ ನಾಯಕರು ಪ್ರಚಾರಕ್ಕೆ ಸಾಥ್‌ ನೀಡಿದ್ದರು. ಚಿತ್ರದುರ್ಗ, ದಾವಣಗೆರೆ, ಚಿಕ್ಕೋಡಿ, ಕಲಬುರಗಿ, ಕೊಪ್ಪಳ, ರಾಯಚೂರು ಕಠಿಣವಾಗಿದೆ. ಇನ್ನುಳಿದ ಕ್ಷೇತ್ರಗಳಲ್ಲಿ ಸ್ಪರ್ಧೆಯಿದೆ ಎಂದು ಮುಖಂಡರು ಹೇಳಿದ್ದಾರೆ.

ಬಿಜೆಪಿ 18 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದರೆ, ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಪ್ರತಿಯೊಬ್ಬ ಶಾಸಕರಿಂದಲೇ ಅವರ ಕ್ಷೇತ್ರದ ಮುನ್ನಡೆ, ಹಿನ್ನಡೆ ಸಾಧ್ಯತೆ ಮಾಹಿತಿ ಪಡೆದು ಹೈಕಮಾಂಡ್‌ಗೆ ವರದಿ ರೂಪದಲ್ಲಿ ಈ ಮಾಹಿತಿಯನ್ನು ಕಳುಹಿಸಿಕೊಡಲಾಗುತ್ತದೆ. ಈಗಾಗಲೇ ಪಕ್ಷದ ಆಂತರಿಕ ಸಮೀಕ್ಷಾ ವರದಿ ಇದ್ದರೂ ರಾಜ್ಯ ಘಟಕದಿಂದ ವಸ್ತುಸ್ಥಿತಿಯ ವಿವರವನ್ನು ಹೈಕಮಾಂಡ್‌ ಬಯಸಿದ್ದು, ಅದರಂತೆ ಮಾಹಿತಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಓದಿ: ಪೆನ್ ಡ್ರೈವ್ ಪ್ರಕರಣ; 2ನೇ ಹಂತದ ಲೋಕಸಭೆ ಚುನಾವಣೆಗೆ ಡ್ಯಾಮೇಜ್ ಆಗಿಲ್ಲ: ಆರ್​​ ಅಶೋಕ್ - Lok Sabha Election 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.