ETV Bharat / state

ಲೋಕಸಮರ ಅಕ್ರಮ: ರಾಜ್ಯದಲ್ಲಿ 187.85 ಕೋಟಿ ಮೌಲ್ಯದ ನಗದು, ಮದ್ಯ, ಇತರ ವಸ್ತುಗಳು ಜಪ್ತಿ - Lok Sabha Election

author img

By ETV Bharat Karnataka Team

Published : Apr 5, 2024, 7:12 AM IST

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈವರೆಗೆ ಒಟ್ಟು 187.85 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ, ವಸ್ತುಗಳು ಹಾಗೂ ನಗದು ವಶಕ್ಕೆ ಪಡೆಯಲಾಗಿದೆ.

lok-sabha-election
ಲೋಕಸಮರ ಅಕ್ರಮ: ರಾಜ್ಯದಲ್ಲಿ 187.85 ಕೋಟಿ ಮೌಲ್ಯದ ನಗದು, ಮದ್ಯ, ವಸ್ತು ಜಪ್ತಿ

ಬೆಂಗಳೂರು: ರಾಜ್ಯದಲ್ಲಿ ಲೋಕಸಮರದ ಅಖಾಡ ಕಳೆಗಟ್ಟುತ್ತಿರುವ ನಡುವೆ ಕಾಂಚಾಣದ ಅಬ್ಬರವೂ ಜೋರಾಗಿದೆ.‌ ಈವರೆಗೆ ಒಟ್ಟು 187.85 ಕೋಟಿ ರೂ ಮೌಲ್ಯದ ಚುನಾವಣಾ ಅಕ್ರಮ ನಗದು, ಮದ್ಯ ಹಾಗೂ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಚುನಾವಣಾ ಆಯೋಗ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿ, ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 187.85 ಕೋಟಿ ರೂ.‌ ಅಕ್ರಮ‌ ನಗದು, ಮದ್ಯ, ಉಡುಗೊರೆ, ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 30.19 ಕೋಟಿ ರೂ.‌ ನಗದು ಹಾಗೂ 131.92 ಕೋಟಿ ರೂ. ಮೊತ್ತದ ಮದ್ಯ ವಶಕ್ಕೆ ಪಡೆಯಲಾಗಿದೆ.

ಕ್ಷಿಪ್ರ ಪಡೆಗಳು (FS), ಸ್ಥಿರ ಕಾವಲು ತಂಡಗಳು (SST) ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆಗಳನ್ನು (Freebies) ವಶಪಡಿಸಿಕೊಂಡಿದ್ದು, ಈ ಸಂಬಂಧ 1,240 ಎಫ್‌ಐಆರ್‌ ದಾಖಲಿಸಿದ್ದಾರೆ.

ಸಾವಿರಾರು ಪ್ರಕರಣ ದಾಖಲು: ಅಬಕಾರಿ ಇಲಾಖೆಯು ಗಂಭೀರ ಅಪರಾಧ ಅಡಿ 1,334 ಹೆಚ್ಚು ವಿವಿಧ ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿ 1,329 ಪ್ರಕರಣ ಹಾಗೂ ಎನ್​ಡಿಪಿಎಸ್​​ ಅಡಿಯಲ್ಲಿ 90 ಪ್ರಕರಣ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಸೆಕ್ಷನ್ 15(a) ಅಡಿ 5,833 ಪ್ರಕರಣ ದಾಖಲಿಸಿಸಲಾಗಿದೆ. ಜೊತೆಗೆ 790 ವಿವಿಧ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿವಿಧೆಡೆ ನಗದು ಹಣ ವಶಕ್ಕೆ: ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದ ಫ್ಯಾಕ್ಟರಿಯಲ್ಲಿ ಅಬಕಾರಿ ಇಲಾಖೆಯವರು 98.52 ಕೋಟಿ ಮೊತ್ತದ 1,21,75,150.920 ಲೀಟರ್ ಬಿಯರ್​​ನ್ನು ವಶಕ್ಕೆ ಪಡೆದಿದ್ದಾರೆ. ಆದಾಯ ತೆರಿಗೆ ಇಲಾಖೆಯವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 2.20 ಕೋಟಿ ರೂ. ನಗದು ಹಣ ವಶಪಡಿಸಿಕೊಂಡಿದ್ದಾರೆ. ಸ್ಥಿರ ಕಣ್ಗಾವಲು ತಂಡದವರು (SST) 35 ಲಕ್ಷ ರೂ. ನಗದು ಹಣವನ್ನು ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೇದಕ್ ಚೆಕ್ ಪೋಸ್ಟ್​ನಲ್ಲಿ ಸೀಜ್​ ಮಾಡಿದ್ದಾರೆ. ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಮಾಚಗೊಂಡನಹಳ್ಳಿ ಚೆಕ್ ಪೋಸ್ಟ್ ಬಳಿ ಸ್ಥಿರ ಕಾವಲು ತಂಡದವರು (SST) 45,00,000 ರೂ. ನಗದು ಹಣ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಲೋಕಸಭೆ ಮೊದಲ ಹಂತದ ಚುನಾವಣೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಕಣದಲ್ಲಿ 358 ಅಭ್ಯರ್ಥಿಗಳು - Nomination

ETV Bharat Logo

Copyright © 2024 Ushodaya Enterprises Pvt. Ltd., All Rights Reserved.