ETV Bharat / state

ದೋಸ್ತಿಗಳ ಒಗ್ಗಟ್ಟು ಪ್ರದರ್ಶನದ ಮೂಲಕ ಕಾರ್ಯಕರ್ತರ ಭಿನ್ನಮತ ನಿವಾರಣೆಗೆ ಎನ್‌ಡಿಎ ಮೈತ್ರಿಕೂಟ ತಂತ್ರ? - PM Modi campaign

author img

By ETV Bharat Karnataka Team

Published : Apr 14, 2024, 11:34 AM IST

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಒಂದೇ ವೇದಿಕೆ ಹಂಚಿಕೊಂಡು ಮತಬೇಟೆ ಮಾಡಲಿದ್ದಾರೆ

Lok Sabha Election: BJP JDS solidarity show in Mysuru Today
ದೋಸ್ತಿಗಳ ಒಗ್ಗಟ್ಟು ಪ್ರದರ್ಶನದ ಮೂಲಕ ಕಾರ್ಯಕರ್ತರ ಭಿನ್ನಮತ ನಿವಾರಣೆಗೆ ಎನ್‌ಡಿಎ ಮೈತ್ರಿಕೂಟ ತಂತ್ರ?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಮೈಸೂರು ಜಿಲ್ಲೆಯಲ್ಲಿ ಎನ್‌ಡಿಎ ಮೈತ್ರಿಕೂಟವು ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಪ್ರತಿಷ್ಠಾಪಿಸುವ ಮೂಲಕ ಬೃಹತ್‌ ರಾಜಕೀಯ ಸಂದೇಶ ರವಾನೆ ಮಾಡುವುದಕ್ಕೆ ಭರ್ಜರಿ ತಯಾರಿ ನಡೆಸಿದೆ. ಈ ಸಮಾವೇಶವನ್ನು ಬಿಜೆಪಿ-ಜೆಡಿಎಸ್‌ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಲೋಕಸಭಾ ಚುನಾವಣೆಯ ನೈಜ ರಣಕಹಳೆ ಮೊಳಗಿಸಲು ಕಾರ್ಯತಂತ್ರ ಹೆಣೆದಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲು ಪ್ರಧಾನಿ ಮೋದಿ ಇಂದು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಮೈಸೂರು ಹಾಗೂ ಮಂಗಳೂರಲ್ಲಿ ಏಳು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್ ವಿರುದ್ಧ ಸಮರ ಸಾರಲು ಮೈಸೂರಿನಲ್ಲಿ ಮೋದಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಜೆಡಿಎಸ್, ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡ ನಂತರ ಇದೇ ಮೊದಲ ಬಾರಿಗೆ ಮೋದಿ ಹಾಗೂ ದೇವೇಗೌಡರು ಇಂದು ಸಂಜೆ ನಡೆಯುವ ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಮೈತ್ರಿ ಧರ್ಮಪಾಲನೆ ಬಗ್ಗೆ ಮಾತನಾಡಲಿದ್ದಾರೆ. ದೋಸ್ತಿಗಳ ಒಗ್ಗಟ್ಟು ಪ್ರದರ್ಶನದ ಮೂಲಕ ಕಾರ್ಯಕರ್ತರ ಭಿನ್ನಮತ ನಿವಾರಣೆಗೆ ತಂತ್ರ ರೂಪಿಸಲಾಗಿದೆ. ಮೈಸೂರಿನಲ್ಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಸೆಡ್ಡು ಹೊಡೆಯುವುದು ಎನ್‌ಡಿಎ ಮೈತ್ರಿಕೂಟದ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ-ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಉಭಯ ನಾಯಕರು ಮತಯಾಚಿಸಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆವರೆಗೂ ಸಿದ್ಧಾಂತದ ಆಧಾರದ ಮೇಲೆ ರಾಜಕೀಯ ಮಾಡಿಕೊಂಡು ಬಂದ ಈ ನಾಯಕರು, ಇಂದು ತಮ್ಮ ಹಳೆಯ ಎಲ್ಲ ರಾಜಕೀಯ ವೈಮಸ್ಸನ್ನು ದೂರವಿಟ್ಟು ಎನ್‌ಡಿಎ ಅಭ್ಯರ್ಥಿಗಳ ಪರ ಮತ ಬೇಟೆಯಾಡಲಿದ್ದಾರೆ.

ಚುನಾವಣೆಗೆ ಸಂಬಂಧಿಸಿದಂತೆ ಈ ಇಬ್ಬರು ನಾಯಕರು ಇದೇ ಪ್ರಥಮ ಬಾರಿಗೆ ವೇದಿಕೆ ಹಂಚಿಕೊಂಡು ಕಾಂಗ್ರೆಸ್ ವಿರುದ್ಧ ರಾಜಕೀಯ ಟೀಕಾಸ್ತ್ರಗಳನ್ನು ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಮತ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಬಿಜೆಪಿ-ಜೆಡಿಎಸ್ ಜಂಟಿ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ. ಮೈಸೂರು ಪ್ರವಾಸ ಮುಗಿಸಿ ಮೋದಿ ಮಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪ್ರಣಾಳಿಕೆ: ಯುಸಿಸಿ ಜಾರಿ, ಒಂದು ದೇಶ ಒಂದು ಚುನಾವಣೆ, 70 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.