ETV Bharat / state

ನಕಲಿ ದಾಖಲೆ ಸೃಷ್ಟಿಸಿ ಒಂದೇ ಸ್ವತ್ತಿನ ಮೇಲೆ 22 ಬ್ಯಾಂಕ್‌ಗಳಿಂದ ಸಾಲ: ಆರು ಜನರ ಬಂಧನ - creating fake documents

author img

By ETV Bharat Karnataka Team

Published : Apr 19, 2024, 1:33 PM IST

ನಕಲಿ ದಾಖಲೆ ಸೃಷ್ಟಿಸಿ ಒಂದೇ ಸ್ವತ್ತಿನ ಮೇಲೆ 22 ಬ್ಯಾಂಕ್‌ಗಳಿಂದ ಸಾಲ ಪಡೆದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಬೆಂಗಳೂರು : ಒಂದೇ ಸ್ವತ್ತಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 22 ಬ್ಯಾಂಕ್‌ಗಳಿಗೆ ಸಲ್ಲಿಸಿ 10 ಕೋಟಿಗೂ ಹೆಚ್ಚು ವಂಚನೆ ಮಾಡಿರುವ ಒಂದೇ ಕುಟುಂಬದ ಐವರ ಸಹಿತ ಒಟ್ಟು ಆರು ಜನ ಆರೋಪಿಗಳನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಪಾರ್ಟ್ಮೆಂಟ್​​ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ನಾಗೇಶ್, ಆತನ ಪತ್ನಿ ಸುಮಾ, ಪತ್ನಿಯ ಸಹೋದರಿ ಶೋಭಾ, ಆಕೆಯ ಪತಿ ಸತೀಶ್, ಸುಮಾಳ ಸ್ನೇಹಿತೆ ವೇದಾ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ.

ಆರೋಪಿಗಳು ನಾಗೇಶ್ - ಸುಮಾ ಹೆಸರಿನಲ್ಲಿ ಬೇಗೂರು ಗ್ರಾಮದಲ್ಲಿರುವ 2,100 ಅಡಿ ಉದ್ದಳತೆಯ ಜಾಗದಲ್ಲಿರುವ ಕಟ್ಟಡಕ್ಕೆ ವಿವಿಧ ಸರ್ವೆ ನಂಬರ್ ಮತ್ತು ವಿವಿಧ ಸೈಟ್ ನಂಬರ್‌ಗಳನ್ನು ಬದಲಿಸಿ ಹಾಗೂ ಸೈಟ್ ಉದ್ದಳತೆಯಲ್ಲಿ ಸಹ ಬದಲಾವಣೆ ಮಾಡುತ್ತಿದ್ದರು. ನಂತರ ಆ ನಕಲಿ ದಾಖಲಾತಿಗಳಿಂದಲೇ ಡೀಡ್ ಮಾಡಿಸಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಿ, ಅವುಗಳ ಆಧಾರದ ಮೇಲೆ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್ ಮತ್ತು ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದರು. 2014 ರಿಂದಲೂ ವಿವಿಧ ಬ್ಯಾಂಕ್‌ಗಳಲ್ಲಿ ಕಂತು ಸಾಲ ಮತ್ತು ಯಂತ್ರೋಪಕರಣ ಸಾಲವೆಂದು ಒಟ್ಟು 22 ಬ್ಯಾಂಕ್‌ಗಳಿಂದ ಸುಮಾರು ಹತ್ತು ಕೋಟಿಗೂ ಅಧಿಕ ಸಾಲ ಪಡೆದಿದ್ದರು. ಆರೋಪಿಗಳ ವಂಚನೆಯ ಕುರಿತು ಅನೇಕ ಬ್ಯಾಂಕ್‌ಗಳಿಗೆ ಅನುಮಾನವೇ ಮೂಡಿರಲಿಲ್ಲ.

ಆರೋಪಿಗಳ ವಿರುದ್ಧ ಇದುವರೆಗೂ ಕೇವಲ ನಾಲ್ಕು ವಿವಿಧ ಬ್ಯಾಂಕ್ ಪ್ರತಿನಿಧಿಗಳು ಮಾತ್ರವೇ ದೂರು ನೀಡಿದ್ದರು. ಜಯನಗರ 3ನೇ ಬ್ಲಾಕ್‌ನಲ್ಲಿರುವ ಕೋ-ಆಪರೇಟಿವ್ ಬ್ಯಾಂಕ್‌ವೊಂದರ ಮ್ಯಾನೇಜರ್ ನೀಡಿದ್ದ ದೂರಿನನ್ವಯ ಜಯನಗರ ಪೊಲೀಸ್ ಠಾಣೆಯಲ್ಲಿ 2022ರಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದಲೂ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಯ ಹೊಣೆಯನ್ನು ಜಯನಗರ ಉಪವಿಭಾಗದ ಎಸಿಪಿ ನೇತೃತ್ವದ ತಂಡಕ್ಕೆ ವಹಿಸಲಾಗಿತ್ತು. ಸದ್ಯ ಆರೂ ಜನ ಆರೋಪಿತರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಇದನ್ನೂ ಓದಿ: ಸೈಟು ಖರೀದಿಸುವ ಮುನ್ನ ಎಚ್ಚರ! ನಕಲಿ‌ ದಾಖಲಾತಿ ಸೃಷ್ಟಿಸಿ ವಂಚಿಸುತ್ತಿದ್ದ ಇಬ್ಬರು ಬಲೆಗೆ - Fake Land Documents

ETV Bharat Logo

Copyright © 2024 Ushodaya Enterprises Pvt. Ltd., All Rights Reserved.