ETV Bharat / state

ಕೇಂದ್ರದ ವಿರುದ್ಧ ಕಾನೂನು ಹೋರಾಟ: ಸಿಎಂ ಸಿದ್ದರಾಮಯ್ಯ ನಡೆ ರಾಜಕೀಯ ಪ್ರೇರಿತ ಎಂದ ಆರ್​ ಅಶೋಕ್ - Lok Sabha Election

author img

By ETV Bharat Karnataka Team

Published : Mar 23, 2024, 10:39 PM IST

ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್​​ನಲ್ಲಿ ಕಾನೂನು ಹೋರಾಟಕ್ಕೆ ಸಜ್ಜಾಗಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷದ ನಾಯಕ ಆರ್ ಅಶೋಕ್​ ಅವರು ತಮ್ಮ ಟ್ವೀಟ್​ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

Etv Bharat
Etv Bharat

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ಮಾಡಲು ಹೊರಟಿರುವ ಸಿಎಂ ಸಿದ್ದರಾಮಯ್ಯ ಅವರ ನಡೆ ರಾಜಕೀಯ ಪ್ರೇರಿತವಾಗಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ, ಕರ್ನಾಟಕದ ಇತಿಹಾಸದಲ್ಲಿ ಇದೊಂದು ಕರಾಳ ದಿನ ಎಂದರೆ ತಪ್ಪಾಗಲಾರದು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.

ಕೈಲಾಗದವನು ಮೈಪರಚಿಕೊಂಡ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಲ್ಲ ಎಡವಟ್ಟುಗಳಿಗೂ ಕೇಂದ್ರ ಸರ್ಕಾರದತ್ತ ಬೊಟ್ಟು ತೋರಿಸುವುದೇ ತಮ್ಮ ಏಕೈಕ ಕೆಲಸ ಎಂದು ಭಾವಿಸಿದಂತಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟೀಕಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ ಬರ, ಪ್ರವಾಹ ಮುಂತಾದ ನೈಸರ್ಗಿಕ ವಿಕೋಪ ಎದುರಾದಾಗ ಕೇಂದ್ರ ಸರ್ಕಾರದ ನೆರವಿಗೆ ಕಾಯದೇ ರಾಜ್ಯ ಸರ್ಕಾರದ ಹಣದಿಂದಲೇ ಪರಿಹಾರ ನೀಡಿತ್ತು. ಆದರೆ ರೈತರ ಮೇಲೆ ಕಿಂಚಿತ್ತು ಕಾಳಜಿ ಇಲ್ಲದ ಸಿಎಂ ಸಿದ್ದರಾಮಯ್ಯ ಸರ್ಕಾರ ಬರ ಪರಿಹಾರದಲ್ಲೂ ರಾಜಕೀಯ ಮಾಡಿ ರೈತರಿಗೆ ದ್ರೋಹ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

2019ರಲ್ಲಿ 9,72,517 ಹೆಕ್ಟೇರ್‌ ಬೆಳೆ ಹಾನಿಯಾಗಿತ್ತು. ಆಗ 6,71,314 ಫಲಾನುಭವಿಗಳಿಗೆ 1232.20 ಕೋಟಿ ರೂ ಪರಿಹಾರ ನೀಡಲಾಗಿತ್ತು. 2020ರಲ್ಲಿ 19,68,247 ಹೆಕ್ಟೇರ್‌ ಬೆಳೆಹಾನಿಯಾಗಿತ್ತು. ಆಗ 12,00,346 ಫಲಾನುಭವಿಗಳಿಗೆ 941.70 ಕೋಟಿ ರೂ. ಪರಿಹಾರ ನೀಡಲಾಗಿತ್ತು. 2021ರಲ್ಲಿ 14,93,811 ಹೆಕ್ಟೇರ್‌ ಬೆಳೆಹಾನಿಯಾಗಿತ್ತು. ಆಗ 18,56,083 ಫಲಾನುಭವಿಗಳಿಗೆ 2446.10 ಕೋಟಿ ರೂ ಪರಿಹಾರ ನೀಡಲಾಗಿತ್ತು. 2022 ರಲ್ಲಿ 13,09,421, ಹೆಕ್ಟೇರ್‌ ಬೆಳೆಹಾನಿ ಆಗಿತ್ತು. ಆಗ 14,62,841 ಫಲಾನುಭವಿಗಳಿಗೆ 2031.15 ಕೋಟಿ ರೂ. ಪರಿಹಾರ ನೀಡಲಾಗಿತ್ತು.

ಸಿದ್ದರಾಮಯ್ಯ ಅವರ ಈ ನಾಟಕ ಹೊಸದೇನಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ರೈತರಿಗೆ ಬರ ಪರಿಹಾರ ವಿಷಯದಲ್ಲಿ ಇದೇ ರೀತಿ ನಾಟಕವಾಡುತ್ತಿದೆ. 2013-14ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಜುಲೈ - ಆಗಸ್ಟ್‌ ಅವಧಿಯ ಮುಂಗಾರಿನ ಬರಗಾಲಕ್ಕೆ 2014 ರ ಏಪ್ರಿಲ್‌ನಿಂದ ಇನ್‌ಪುಟ್‌ ಸಬ್ಸಿಡಿ ಪಾವತಿ ಮಾಡಲು ಶುರು ಮಾಡಿತ್ತು. ಅಂದರೆ ಅದಕ್ಕೆ ತೆಗೆದುಕೊಂಡ ಅವಧಿ 9 ತಿಂಗಳು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

2014-15ರ ಸಾಲಿನಲ್ಲಿ ಇದೇ ಸಿದ್ದರಾಮಯ್ಯ ಅವರ ಸರ್ಕಾರ 2014ರ ಜುಲೈ-ಆಗಸ್ಟ್‌ ಅವಧಿಯ ಬರಗಾಲಕ್ಕೆ ಪರಿಹಾರ ನೀಡಲು, 2015 ಮಾರ್ಚ್‌ನಿಂದ ಇನ್‌ಪುಟ್‌ ಸಬ್ಸಿಡಿ ಪಾವತಿ ಶುರು ಮಾಡಿತ್ತು. ಅಂದರೆ ಇದಕ್ಕೆ ತೆಗೆದುಕೊಂಡ ಅವಧಿ 8 ತಿಂಗಳು. 2019-20 ನೇ ಸಾಲಿನಲ್ಲಿ ಬಿಜೆಪಿ ಸರ್ಕಾರವಿದ್ದಾಗ, 2019ರ ಆಗಸ್ಟ್‌ - ಸೆಪ್ಟೆಂಬರ್‌ನಲ್ಲಿ ಪ್ರವಾಹ ವಿಕೋಪ ಉಂಟಾಗಿತ್ತು. ಆಗ 2019ರ ಅಕ್ಟೋಬರ್‌ನಿಂದ ಇನ್‌ಪುಟ್‌ ಸಬ್ಸಿಡಿ ಪಾವತಿ ಶುರು ಮಾಡಲಾಗಿತ್ತು. ಅಂದರೆ ಬರ ಪರಿಹಾರ ನೀಡಲು ಬಿಜೆಪಿ ಸರ್ಕಾರ ತೆಗೆದುಕೊಂಡ ಅವಧಿ ಕೇವಲ 2 ತಿಂಗಳು.

2020-21 ರ ಸಾಲಿನಲ್ಲಿ, 2020ರ ಆಗಸ್ಟ್‌-ಅಕ್ಟೋಬರ್‌ನಲ್ಲಿ ಪ್ರವಾಹ ಉಂಟಾಗಿತ್ತು. ಆಗ ಅಕ್ಟೋಬರ್‌ನಿಂದಲೇ ಪರಿಹಾರ ವಿತರಣೆ ಶುರುವಾಗಿತ್ತು. ಅಂದರೆ ಬಿಜೆಪಿ ಸರ್ಕಾರ ತೆಗೆದುಕೊಂಡ ಅವಧಿ 2 ತಿಂಗಳು. 2021-22 ನೇ ಸಾಲಿನಲ್ಲಿ, 2021ರ ಆಗಸ್ಟ್‌ನಲ್ಲಿ ಪ್ರವಾಹವಾದಾಗ, ಸೆಪ್ಟೆಂಬರ್‌ನಿಂದಲೇ ಪರಿಹಾರ ವಿತರಣೆ ಶುರುವಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 2 ತಿಂಗಳು. ಇದೇ ಸಾಲಿನಲ್ಲಿ, ಮತ್ತೊಮ್ಮೆ ಅಕ್ಟೋಬರ್‌-ನವೆಂಬರ್‌ ನಲ್ಲಿ ಪ್ರವಾಹ ಉಂಟಾಗಿ, ಆಗ ನವೆಂಬರ್‌ ನಿಂದಲೇ ಪರಿಹಾರ ವಿತರಣೆ ಮಾಡಲಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 1 ತಿಂಗಳು.

2022-23 ನೇ ಸಾಲಿನಲ್ಲಿ, 2022ರ ಮೇ-ಜೂನ್‌-ಜುಲೈ ತಿಂಗಳಲ್ಲಿ ಪ್ರವಾಹವಾದಾಗ ಜುಲೈನಿಂದ ಪರಿಹಾರ ವಿತರಣೆ ಶುರು ಮಾಡಲಾಯಿತು. ಅದಕ್ಕೆ ತೆಗೆದುಕೊಂಡ ಅವಧಿ 1 ತಿಂಗಳು. ಮತ್ತೆ ಇದೇ ಸಾಲಿನಲ್ಲಿ, 2022 ರ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಪ್ರವಾಹ ಉಂಟಾಯಿತು. ಆಗ 2 ತಿಂಗಳಲ್ಲಿ ಪರಿಹಾರ ವಿತರಣೆ ಶುರು ಮಾಡಲಾಯಿತು. ಈ ಎಲ್ಲ ಉದಾಹರಣೆಗಳನ್ನು ನೋಡಿದರೆ, ಒಂದಂತೂ ಸ್ಪಷ್ಟವಾಗುತ್ತದೆ. ಕಷ್ಟ ಕಾಲದಲ್ಲಿ ರೈತರ ನೆರವಿಗೆ ಬರುವುದಕ್ಕಿಂತ ರೈತರ ಕಣ್ಣೀರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಕಾಂಗ್ರೆಸ್ ಸರ್ಕಾರಕ್ಕೆ ಹೆಚ್ಚು ಮುಖ್ಯ ಅನ್ನಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಜೊತೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ನೋಡಿ ಸಿದ್ದರಾಮಯ್ಯನವರು ಪಾಠ ಕಲಿಯಬೇಕು. ಚುನಾವಣೆ ಇದ್ದಾಗ ರಾಜಕೀಯ ಮಾಡಿ. ಆದರೆ ಚುನಾವಣೆ ಮುಗಿದ ಮೇಲೆ ರಾಜಕೀಯ ಪಕ್ಕಕ್ಕಿಟ್ಟು ಆಡಳಿತದ ಕಡೆ ಗಮನ ಹರಿಸಿ, ಜನರ ಹಿತಾಸಕ್ತಿ ಕಾಪಾಡಲು ಆದ್ಯತೆ ನೀಡಿ. ಅದು ಬಿಟ್ಟು ರಾಜಕೀಯ narrative ಸೃಷ್ಟಿಸಲು ಪದೇ ಪದೆ ಜನರ ಹಿತಾಸಕ್ತಿಯನ್ನೇ ಬಲಿಕೊಡುವುದು ಸಿಎಂ ಸಿದ್ದರಾಮಯ್ಯನವರಿಗೆ ಶೋಭೆ ತರುವುದಿಲ್ಲ. ಇತಿಹಾಸ ನಿಮ್ಮನ್ನು ಖಂಡಿತ ಕ್ಷಮಿಸುವುದಿಲ್ಲ ಎಂದು ಟೀಕಿಸಿದ್ದಾರೆ.

ಇದನ್ನೂಓದಿ:ಬರ ಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ರಾಜ್ಯ ಸರ್ಕಾರ - Drought Relief

ETV Bharat Logo

Copyright © 2024 Ushodaya Enterprises Pvt. Ltd., All Rights Reserved.