ETV Bharat / state

ತಾಯಿ ಹತ್ಯೆ ಮಾಡಿದ್ದ ಆರೋಪಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್ - High Court quashed death penalty

author img

By ETV Bharat Karnataka Team

Published : Mar 26, 2024, 10:30 PM IST

Updated : Mar 27, 2024, 11:07 AM IST

ತಾಯಿಯನ್ನು ಕೊಲೆ ಮಾಡಿದ್ದ ಮಗನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಮಾರ್ಪಾಡು ಮಾಡಿದೆ.

karnataka-high-court-quashed-the-death-penalty-imposed-on-the-accused-who-had-killed-his-mother
ತಾಯಿಯನ್ನು ಹತ್ಯೆಗೈದಿದ್ದ ಆರೋಪಿಗೆ ವಿಧಿಸಿದ್ದ ಮರಣ ದಂಡನೆ ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ತಾಯಿಯ ಹಿಂಸೆ ತಾಳಲಾರದೇ ಪತ್ನಿ ತನ್ನನ್ನು ತೊರೆದಿದ್ದಾಳೆ ಎಂದು ಭಾವಿಸಿ, ತಾಯಿಯನ್ನೇ ಕೊಲೆಗೈದ ಮಗನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿದೆ. ಮರಣದಂಡನೆ ಶಿಕ್ಷೆ ವಿಧಿಸುವಾಗ ಭಾವನೆಗಳು ಪ್ರಭಾವ ಬೀರುವ ಅಂಶಗಳಾಗಬಾರದು ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.

ಚಿತ್ರದುರ್ಗದ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ತಿಮ್ಮಪ್ಪ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ಎಸ್.ರಾಚಯ್ಯ ಅವರಿದ್ದ ವಿಭಾಗೀಯ ಪೀಠ ಜೀವಾವಧಿ ಶಿಕ್ಷೆಯ ಆದೇಶ ನೀಡಿತು. ಮೇಲ್ಮನವಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡ ಪಾವತಿಸದಿದ್ದರೆ ಮತ್ತೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದೆ.

ಪ್ರಕರಣ ಸಂಬಂಧ ಸಾಕ್ಷಿಗಳ ಪಾಟೀ ಸವಾಲು ಪರಿಣಾಮಕಾರಿಯಾಗಿಲ್ಲ ಎಂಬ ಅರ್ಜಿದಾರರ ವಾದ ತಿರಸ್ಕರಿಸಿದ ನ್ಯಾಯಪೀಠ, ಈ ನೆಪವೊಡ್ಡಿ ಎಲ್ಲ ಸಾಕ್ಷ್ಯವನ್ನು ಅಲ್ಲಗಳೆಯುವುದು ಸರಿಯಲ್ಲ ಎಂದಿದೆ. ಆರೋಪಿಯು ಪತ್ನಿಯಿಂದ ಬೇರ್ಪಟ್ಟು ಕೆಲವು ವರ್ಷಗಳು ಕಳೆದಿದ್ದವು. ಪತ್ನಿ ತನ್ನನ್ನು ತೊರೆಯಲು ತಾಯಿಯೇ ಕಾರಣ ಎಂಬ ಕೊರಗು ಆರೋಪಿಯಲ್ಲಿತ್ತು. ಅದನ್ನು ಪರಿಗಣಿಸಿದಲ್ಲಿ ಈ ಪ್ರಕರಣವು ಭಾರತ ದಂಡ ಸಂಹಿತೆ ಸೆಕ್ಷನ್ 300 ವ್ಯಾಪ್ತಿಯಲ್ಲಿ ಬರುತ್ತದೆ. ಇದರನುಸಾರ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆಯೇ ಹೊರತು ದಿಢೀರ್ ಕೊಲೆ ಮಾಡಲಾಗಿದೆ ಎನ್ನುವುದಕ್ಕೆ ಇಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಇದು ಅಪರೂಪದಲ್ಲೇ ಅಪರೂಪ ಎನ್ನುವಂತಹ ಪ್ರಕರಣವೇನೂ ಅಲ್ಲ. ಆದ್ದರಿಂದ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿಸುವುದು ಸೂಕ್ತವಲ್ಲ ಎಂದಿರುವ ನ್ಯಾಯಪೀಠ, ಮರಣ ದಂಡನೆ ವಿಧಿಸಲು ಭಾವನೆ ಪ್ರಭಾವಶಾಲಿ ಅಂಶವಾಗಿರದೆ, ಅಪರಾಧದ ಮಟ್ಟ ಹೆಚ್ಚು ಮುಖ್ಯವಾಗಿರುತ್ತದೆ ಎಂದು ಹೇಳಿದೆ. ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು, ಪಾಟೀ ಸವಾಲು ನಿಷ್ಪರಿಣಾಮಕಾರಿಯಾಗಿದ್ದರೂ, ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳನ್ನು ನಂಬಲಾಗುವುದಿಲ್ಲ ಎಂದು ಸಾಬೀತುಪಡಿಸಬಹುದು. ಮನೆಯಿಂದ ಮಾರಕಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಸಾಕ್ಷ್ಯವು ಅಸಮಂಜಸವಾಗಿದೆ. ಹಾಗಾಗಿ ಆರೋಪಿ ವಿರುದ್ಧದ ಮರಣದಂಡನೆ ಶಿಕ್ಷೆ ರದ್ದುಗೊಳಿಸುವಂತೆ ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ ಏನು?: ಪತ್ನಿ ತನ್ನನ್ನು ತೊರೆದು ಹೋಗುವುದಕ್ಕೆ ತಾಯಿಯೇ ಕಾರಣ ಎನ್ನುವ ಹಿನ್ನೆಲೆಯಲ್ಲಿ ಹೊಳಲ್ಕೆರೆಯಲ್ಲಿ ತಾಯಿ ಮತ್ತು ಮಗನ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಈ ವೇಳೆ ಉದ್ವೇಗಕ್ಕೊಳಗಾದ ಮಗ ಮಾರಕಾಸ್ತ್ರದಿಂದ ತಾಯಿಯ ಕುತ್ತಿಗೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಇದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. ತಾಯಿಯನ್ನು ಕ್ರೂರವಾಗಿ ಹತ್ಯೆಗೈದ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಚಿತ್ರದುರ್ಗ ವಿಚಾರಣಾ ನ್ಯಾಯಾಲಯ ಆರೋಪಿಗೆ 2018ರ ಜೂ. 2ರಂದು ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿತ್ತು.

ಇದನ್ನೂ ಓದಿ: ಸುದೀಪ್ ವಿರುದ್ಧ ಮಾನಹಾನಿಕರ ಹೇಳಿಕೆ: ಎಂ ಎನ್ ಸುರೇಶ್ ಮೇಲಿನ ಮಾನಹಾನಿ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಣೆ - Defamation statement against Sudeep

Last Updated :Mar 27, 2024, 11:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.