ETV Bharat / state

ಕುಡಿಯುವ ನೀರು ಸರಬರಾಜು ಕಾಮಗಾರಿ ವಿಳಂಬ: ಎಲ್‌&ಟಿ ಸಂಸ್ಥೆಗೆ ₹25.92 ಕೋಟಿ‌ ದಂಡ

author img

By ETV Bharat Karnataka Team

Published : Feb 13, 2024, 10:46 PM IST

Updated : Feb 13, 2024, 11:03 PM IST

ಕುಡಿಯುವ ನೀರು ಆಧುನೀಕರಣ ಯೋಜನೆ ಕಾಮಗಾರಿ ವಿಳಂಬಕ್ಕಾಗಿ ಎಲ್​ ಆ್ಯಂಡ್ ಟಿ ಸಂಸ್ಥೆಗೆ 25.92 ಕೋಟಿ ದಂಡ ವಿಧಿಸಲಾಗಿದೆ ಎಂದು ಸಚಿವ ಭೈರತಿ ಸುರೇಶ್​ ತಿಳಿಸಿದ್ದಾರೆ.

ಸಚಿವ ಭೈರತಿ ಸುರೇಶ್
ಸಚಿವ ಭೈರತಿ ಸುರೇಶ್

ಸಚಿವ ಭೈರತಿ ಸುರೇಶ್​

ಬೆಂಗಳೂರು:‌ ವಿಶ್ವಬ್ಯಾಂಕ್ ನೆರವಿನಡಿ ಕಲಬುರಗಿ ಜಿಲ್ಲೆಯಲ್ಲಿ ನಿರಂತರ ಕುಡಿಯುವ ನೀರು ಆಧುನೀಕರಣ ಯೋಜನೆ ಕಾಮಗಾರಿ ವಿಳಂಬಕ್ಕಾಗಿ ಎಲ್ ಆ್ಯಂಡ್ ಟಿ ಸಂಸ್ಥೆಗೆ 25.92 ಕೋಟಿ ದಂಡ ವಿಧಿಸಿದ್ದು, 2025ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿಳಿಸಿದರು.

ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330ರ ನಿಯಮದಡಿ ಇಂದು ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯಡಿ ಕಲಬುರಗಿ ಜಿಲ್ಲೆಗೆ ನಿರಂತರವಾಗಿ ಕುಡಿಯುವ ನೀರು ಸರಬರಾಜು ಸಂಪರ್ಕಿಸಲು ಆರಂಭಿಸಲಾಗಿದ್ದ ಯೋಜನೆ ಕುಂಠಿತವಾಗಿದೆ. ಜೊತೆಗೆ, ಕಳಪೆ ಕಾಮಗಾರಿಯಿಂದ ಕೂಡಿದೆ. 2018ರಲ್ಲಿ ಯೋಜನೆಯನ್ನು ಸರ್ಕಾರ ಅನುಮೋದಿಸಿ 2020ರಲ್ಲಿ 837.43 ಕೋಟಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿತ್ತು. ಆದರೆ ಸದ್ಯ ಯೋಜನೆ ಅಂದುಕೊಂಡಂತೆ ನಿಗದಿತ ಗುರಿ ತಲುಪಿಲ್ಲ. ಶೇ.20ರಷ್ಟು ಕಾಮಗಾರಿ ಮುಗಿದಿದೆ. 120 ಕಿಲೋಮೀಟರ್‌ವರೆಗೂ ಪೂರ್ಣಗೊಂಡಿದೆ. ಅದೂ ಕೂಡ ಕಳಪೆ ಪೈಪ್ ಹಾಕಲಾಗಿದೆ. ಗುತ್ತಿಗೆ ನೀಡಿದ ಸಂಸ್ಥೆಗೆ 90 ಕೋಟಿ ರೂಪಾಯಿ ಪಾವತಿಸಲಾಗಿದೆ. ಗುತ್ತಿಗೆ ತೆಗೆದುಕೊಂಡ ಸಂಸ್ಥೆಯು ಕಲಬುರಗಿ ಮಾತ್ರವಲ್ಲದೆ ಹುಬ್ಬಳ್ಳಿ, ಬೆಳಗಾವಿಯಲ್ಲಿಯೂ ಕಳಪೆ ಕಾಮಗಾರಿ ನಡೆಸಿದೆ ಎಂದು ಗೊತ್ತಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ ಬರಗಾಲ ತಾಂಡವಾಡಿದೆ. ಕುಡಿಯುವ ನೀರು ಎಲ್ಲರ ಮೂಲಭೂತ ಹಕ್ಕಾಗಿದೆ.‌ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಭೈರತಿ ಸುರೇಶ್, ಕಲಬುರಗಿ ಜಿಲ್ಲೆಗೆ‌ ಕುಡಿಯುವ ನೀರು ಸಂಪರ್ಕಿಸಲು ಆರಂಭಿಸಲಾಗಿದ್ದ ಯೋಜನೆಯು ನಿಗದಿಯಂತೆ 2025ರಲ್ಲಿ ಕಾಮಗಾರಿ ಮುಗಿಯಲಿದ್ದು, ಈ ಬಗ್ಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ 25.92 ಕೋಟಿ ರೂ ದಂಡ ವಿಧಿಸಲಾಗಿದೆ. ಕಳಪೆ ಪೈಪ್ ಅಳವಡಿಕೆ ಕಂಡು ಬಂದಿದ್ದರಿಂದ ಹಾಕಲಾಗಿದ್ದ ಪೈಪ್ ತೆಗೆದು ಗುಣಮಟ್ಟದ ಪೈಪ್ ಅಳವಡಿಸಲಾಗಿದೆ. ಈ ಬಗ್ಗೆ ಗುತ್ತಿಗೆ ಸಂಸ್ಥೆಗೆ ಎರಡು ಬಾರಿ ನೊಟೀಸ್ ನೀಡಲಾಗಿದೆ. ಅಲ್ಲದೆ ಅವಧಿಗೂ‌ ಮುನ್ನ 90 ಕೋಟಿ ಹಣವನ್ನು ಎಲ್ ಆ್ಯಂಡ್ ಟಿ ಸಂಸ್ಥೆಗೆ ನೀಡಿಲ್ಲ. ಈ ಬಗ್ಗೆ ಲೋಪವಾಗಿದ್ದರೆ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಗಿರುವ ಗೊಂದಲ ಸರಿಪಡಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಪೆರಿಫರೆಲ್ ರಿಂಗ್ ರೋಡ್ ಯೋಜನೆ ಎಕನಾಮಿಕ್ ಕಾರಿಡಾರ್ ಆಗಿ ಕಾರ್ಯರೂಪಕ್ಕೆ ತರುತ್ತೇವೆ: ಡಿ.ಕೆ. ಶಿವಕುಮಾರ್​

Last Updated : Feb 13, 2024, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.