ETV Bharat / state

ಬಳ್ಳಾರಿ: ಕನಕ ದುರ್ಗಮ್ಮ ದೇವಿಯ ಅದ್ಧೂರಿ ಸಿಡಿಬಂಡಿ ರಥೋತ್ಸವ, ಸಾವಿರಾರು ಭಕ್ತರು ಭಾಗಿ

author img

By ETV Bharat Karnataka Team

Published : Mar 20, 2024, 12:44 PM IST

ಬಳ್ಳಾರಿಯಲ್ಲಿ ಕನಕ ದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವ ಅದ್ಧೂರಿಯಾಗಿ ನೆರವೇರಿತು.

Ballari  Sidibandi Chariot Festival
ಬಳ್ಳಾರಿ: ಕನಕ ದುರ್ಗಮ್ಮ ದೇವಿಯ ಅದ್ಧೂರಿ ಸಿಡಿಬಂಡಿ ರಥೋತ್ಸವ

ಬಳ್ಳಾರಿ: ಕನಕ ದುರ್ಗಮ್ಮ ದೇವಿಯ ಅದ್ಧೂರಿ ಸಿಡಿಬಂಡಿ ರಥೋತ್ಸವ

ಬಳ್ಳಾರಿ: ಕರ್ನಾಟಕ, ಆಂಧ್ರ ಪ್ರದೇಶದಾದ್ಯಂತ ಭಕ್ತರನ್ನು ಹೊಂದಿರುವ ಬಳ್ಳಾರಿ ನಗರದ ಕನಕ ದುರ್ಗಮ್ಮ ದೇವಿ ಸಿಡಿಬಂಡಿ ರಥೋತ್ಸವವು ಮಂಗಳವಾರ ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಜರುಗಿತು.

ಕರ್ನಾಟಕ, ಆಂಧ್ರ ಪ್ರದೇಶದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಜನರು ಸಿಡಿಬಂಡಿ ರಥೋತ್ಸವದಲ್ಲಿ ಪ್ರದಕ್ಷಿಣೆ ಹಾಕಿ ದೇವರ ದರ್ಶನ ಪಡೆದರು. ಗಣಿನಾಡು ಬಳ್ಳಾರಿಯ ಕನಕ ದುರ್ಗಮ್ಮ ದೇವಿಯ ಸಿಡಿಬಂಡೆ ಜಾತ್ರೆಗೆ ಹಣ್ಣು, ಕಾಯಿಯನ್ನು ಎಸೆಯುವುದರ ಜೊತೆಗೆ ಭಕ್ತರು ಹರಕೆ ರೂಪದಲ್ಲಿ ಜೀವಂತ ಕೋಳಿಗಳನ್ನೇ ತೂರಿ ತಮ್ಮ ಹರಕೆ ತೀರಿಸಿದರು.

ದೇವಿಯ ಸಿಡಿಬಂಡಿ ಬಳಿ ಸಮೀಪ ಆಗಮಿಸಿ ಕೋಳಿ ತೂರಿ ಹಿಂದುರುಗಿ ನೋಡದೇ ಹಾಗೆ ಮುಂದೆ ಸಾಗುತ್ತಾರೆ. ಕೋಳಿ ತೂರುವವರೆಗೂ ಇದು ಭಕ್ತರದ್ದು, ಹರಕೆ ತೀರಿಸಿದ ಬಳಿಕ ಆ ಕೋಳಿ ಹಿಡಿಯಲು ಸ್ಥಳೀಯರು ಹರಸಾಹಸ ಪಡುತ್ತಾರೆ. ಈ ವರ್ಷವೂ ಕೂಡ ಭಕ್ತರು ಸಿಡಿಬಂಡಿ ಜಾತ್ರೆ ಸಂದರ್ಭದಲ್ಲಿ ನೂರಾರು ಕೋಳಿಗಳನ್ನು ತೂರಿಬಿಡುವ ದೃಶ್ಯ ಗಮನ ಸೆಳೆಯಿತು.

ಈ ಜಾತ್ರೆಯಲ್ಲಿ ಕೇವಲ ಕೋಳಿಗಳನ್ನು ತೂರುವುದು ಮಾತ್ರವಲ್ಲ, ಇಲ್ಲಿನ ಸಿಡಿಬಂಡಿ ರಥೋತ್ಸವವನ್ನು ಎಳೆಯುವುದು ಕೂಡ ಅಷ್ಟೇ ವಿಶೇಷ ಹಾಗೂ ವಿಭಿನ್ನ ಎನ್ನಬಹುದು. ಯಾವುದೇ ತೇರು ಅಥವಾ ರಥವನ್ನು ಭಕ್ತರು ಎಳೆದರೆ ಕನಕದುರ್ಗಮ್ಮ ದೇವಿಯ ಸಿಡಿಬಂಡಿಯನ್ನು ಎಳೆಯುವುದು ಮೂರು ಜೋಡಿ ಎತ್ತುಗಳು. ಈ ಮೂರು ಜೋಡಿ ಎತ್ತುಗಳನ್ನು ಬಳ್ಳಾರಿಯ ಕೌಲ್‌ಬಜಾರಿನಲ್ಲಿರುವ ಗಾಣಿಗ ಸಮುದಾಯದ ಮನೆಯಿಂದ ಸಿಂಗರಿಸಿಕೊಂಡು ಬರುತ್ತವೆ. ಈ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಒಂದು ದಿನ ಮೊದಲೇ, ಅಂದರೆ ಸೋಮವಾರದಂದು ಮೆರವಣಿಗೆ, ತಾಳವಾದ್ಯಗಳ ಮೂಲಕ ಕರೆತಂದು ದೇವಸ್ಥಾನದ ಬಳಿ ನಿಲ್ಲಿಸಲಾಗುತ್ತದೆ.

ರಥೋತ್ಸವದ ದಿನ ಮತ್ತೆ ಎತ್ತುಗಳು ಹಾಗೂ ಸಿಡಿಬಂಡಿಯನ್ನೂ ಸಿಂಗಾರಗೊಳಿಸಲಾಗುತ್ತದೆ. ಈ ವರ್ಷವೂ ಕೂಡ 40 ಅಡಿ ಎತ್ತರದ ಮರದ ದಿನ್ನೆಗೆ ಗೊಂಬೆಯನ್ನು ಕಟ್ಟಿ ಕನಕದುರ್ಗಮ್ಮ ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಸಿಡಿಬಂಡಿ ಮೂರು ಸುತ್ತು ಪ್ರದಕ್ಷಿಣೆ ಹಾಕುವ ವೇಳೆ ಭಕ್ತರು ಹೂವು, ಬಾಳೆಹಣ್ಣು, ಕಬ್ಬು ಹಾಗೂ ಜೀವಂತ ಕೋಳಿಗಳನ್ನು ತೂರಿ ಪುನೀತರಾದರು.

ಅಧಿದೇವತೆ ಕನಕ ದುರ್ಗಮ್ಮ ದೇವಿಯ ಸಿಡಿಬಂಡೆಯನ್ನು ನೋಡಲು ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ಸಿಡಿಬಂಡೆ ಜಾತ್ರೆಯಲ್ಲಿ ಪಾಲ್ಗೊಂಡರು. ಸಿಡಿಬಂಡಿ ರಥೋತ್ಸವ ಹಿನ್ನೆಲೆಯಲ್ಲಿ ದೇವಿಗೆ ಬಂಗಾರ ಆಭರಣಗಳ ಜೊತೆಗೆ ವಿಶೇಷ ಅಲಂಕಾರ ಮಾಡಲಾಯಿತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಸಿಡಿಬಂಡಿ ರಥೋತ್ಸವದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು. ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರಿಂದ ಪೊಲೀಸರು ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಇದನ್ನೂ ಓದಿ: ದಾವಣಗೆರೆಯ ದುಗ್ಗಮ್ಮ ಜಾತ್ರೆ ಆರಂಭ: ಅಧಿದೇವತೆ ನೆಲೆಸಿದ ಇತಿಹಾಸ ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.