ETV Bharat / state

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು ಒದಗಿಸಲು ಅಗತ್ಯ ಕ್ರಮ: ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ - Ram Prasath Manohar

author img

By ETV Bharat Karnataka Team

Published : Mar 21, 2024, 4:28 PM IST

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.

Jalamandali Chairman Ram Prasath Manohar
ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್

ಬೆಂಗಳೂರು : ಮುಂಬರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳಿಗೆ ಅನುಕೂಲವಾಗುವಂತೆ ಸಂಸ್ಕರಿಸಿದ ನೀರನ್ನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಒದಗಿಸಲು ಕೋರಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ. ವಿ ರಾಮ್ ಪ್ರಸಾತ್ ಮನೋಹರ್​ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಪಂದ್ಯಾವಳಿಗಳ ಸಂದರ್ಭದಲ್ಲಿ ನಿತ್ಯ ಸುಮಾರು 75,000 ಲೀಟರ್​ಗಳ ನೀರಿನ ಅವಶ್ಯಕತೆ ಇದೆ. ಇದಕ್ಕಾಗಿ ಕಬ್ಬನ್ ಪಾರ್ಕ್ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಅಗತ್ಯ ನೀರನ್ನು ದೊರಕಿಸಿ ಕೊಡುವಂತೆ ಕೆ.ಎಸ್.ಸಿ.ಎ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಸಂಸ್ಕರಿಸಿದ ನೀರನ್ನು ಬಳಸಲು ಉತ್ತೇಜನ ನೀಡುವ ದೃಷ್ಟಿಯಿಂದ ಹಾಗು ಇದರಿಂದ ಕಾವೇರಿ ಅಥವಾ ಕೊಳವೆ ಬಾವಿಯ ನೀರು ದುರ್ಬಳಕೆ ಆಗದೇ ಇರುವುದರಿಂದ ಕ್ರಿಕೆಟ್ ಚಟುವಟಿಕೆಗೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ಸಂಸ್ಕರಿಸಿದ ನೀರಿನ ಮರು ಬಳಕೆಗೆ ಜಲಸ್ನೇಹಿ ಆ್ಯಪ್ : ಸಂಸ್ಕರಿಸಿದ ನೀರಿನ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಜಲಮಂಡಳಿಯು ಜಲಸ್ನೇಹಿ ಅಪ್ಲಿಕೇಶನ್‌ನ್ನು ಆರಂಭಿಸಿದ್ದು, ಈ ಆ್ಯಪ್ ಮೂಲಕ ಬೆಂಗಳೂರಿನ ಗ್ರಾಹಕರು ಜಲಮಂಡಳಿಯಿಂದ ಸಂಸ್ಕರಿಸಿದ ನೀರಿಗೆ ಮನವಿ ಸಲ್ಲಿಸಬಹುದಾಗಿದೆ ಎಂದಿದ್ದಾರೆ.

ಕೊಳವೆ ಬಾವಿ ಕೊರೆಯಲು ವೆಬ್ ಅಪ್ಲಿಕೇಶನ್ : ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಬೋರ್​ವೆಲ್‌ಗಳನ್ನು ಕೊರೆಯಲು ಅನುಮತಿಯನ್ನು ಕಡ್ಡಾಯಗೊಳಿಸಿ ಜಲಮಂಡಳಿ ಆದೇಶ ಹೊರಡಿಸಿತ್ತು. ಇದಕ್ಕಾಗಿ ವೆಬ್ ಅಪ್ಲಿಕೇಶನ್ ಆರಂಭಿಸಲಾಗಿದೆ. ಇದರಿಂದ ಬೋರ್​ವೆಲ್‌ಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸುಗಮವಾಗಲಿದೆ. ಇದರ ಮೂಲಕ ಬೆಂಗಳೂರು ನಗರ ವಾಸಿಗಳು ಕೊಳವೆ ಬಾವಿ ಕೊರೆಯಲು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಸಿಎಸ್‌ಆರ್ ನಿಧಿಯ ಮೊರೆ ಹೋದ ಜಲಮಂಡಳಿ : ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ಕೊಯ್ಲು ಅಳವಡಿಕೆಗೆ ಹಾಗೂ ಕೆರೆಗಳಿಗೆ ಹೋಗುವ ಕೊಳಚೆ ನೀರು ಸಂಸ್ಕರಣೆಯ ಜೊತೆಗೆ ಇನ್ನಿತರ ಯೋಜನೆಗಳಿಗಾಗಿ ಖರ್ಚು ಮಾಡಲು ಜಲಮಂಡಳಿಯ ಬಳಿ ಅನುದಾನದ ಕೊರತೆಯಾಗಿದ್ದು, ಸಿಎಸ್‌ಆರ್ ನಿಧಿಯ ಮೊರೆ ಹೋಗಿದೆ.

ನಗರದಲ್ಲಿ ನೀರಿನ ಅಭಾವವನ್ನು ಮನಗಂಡಿರುವ ಬೆಂಗಳೂರು ಜಲಮಂಡಳಿಯು ನಗರಕ್ಕೆ ಅಗತ್ಯವಾದ ನೀರಿನ ಸರಬರಾಜಿಗೆ ಕಾವೇರಿ ನದಿ ಮೂಲವನ್ನೇ ಅವಲಂಬಿಸುವುದು ಅಸಾಧ್ಯ ಎಂದು ಅರಿತಿದ್ದು, ಈ ನಿಟ್ಟಿನಲ್ಲಿ ನಗರದಲ್ಲಿ ಮಳೆನೀರು ಕೊಯ್ಲು ಅಳವಡಿಕೆಯತ್ತ ಗಮನಹರಿಸಿದೆ. ಭವಿಷ್ಯದ ದೃಷ್ಟಿಯಿಂದ ಹಲವಾರು ಪರ್ಯಾಯ ಮೂಲಗಳ ಪೈಕಿ ಮಳೆ ನೀರು ಕೊಯ್ಲನ್ನೂ ಆಯ್ಕೆ ಮಾಡಿಕೊಳ್ಳಲಾಗಿದೆ.

ಜಲಮಂಡಳಿ ಸಿಎಸ್‌ಆರ್ ನಿಧಿಯ ಮೊರೆ ಹೋಗಿದೆ: ಮಳೆ ನೀರು ಕೊಯ್ಲು ಕಡ್ಡಾಯಗೊಳಿಸುವ ಮೂಲಕ ಸಾರ್ವತ್ರೀಕರಣಗೊಳಿಸಲು ಇನ್ನಿಲ್ಲದಂತೆ ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ಕೊಯ್ಲು ಅಳವಡಿಸಲು ಹಾಗೂ ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಗಟ್ಟಲು ಮತ್ತು ಇನ್ನಿತರ ಯೋಜನೆಗಳಿಗೆ ಖರ್ಚು ಮಾಡಲು ಜಲಮಂಡಳಿ ಸಿಎಸ್‌ಆರ್ ನಿಧಿಯ ಮೊರೆ ಹೋಗಿದೆ.

ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ವಿ ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಜಲಮಂಡಳಿ ಸಂಪೂರ್ಣವಾಗಿ ತೆರಿಗೆ ಹಣದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲು ತೆರಿಗೆ ಹಣ ಸಾಕಾಗುತ್ತಿಲ್ಲ ಹಾಗೂ ಮಂಡಳಿಯ ಬಳಿ ಅಷ್ಟು ಕ್ರೋಡೀಕರಿಸಿದ ಹಣವೂ ಇಲ್ಲ. ಹೀಗಾಗಿ ನಗರದ ಒಳಿತಿಗಾಗಿ ಹಲವು ಕಂಪನಿಗಳು ಜಲಮಂಡಳಿಗೆ ಸಿಎಸ್‌ಆರ್ ನಿಧಿ ಮೂಲಕ ಹಣ ನೀಡಲು ಮುಂದೆ ಬಂದಿವೆ. ಹೀಗಾಗಿ ನಾವು ಆ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತಿದ್ದೇವೆ ಎಂದಿದ್ದಾರೆ.

ಬದಲಾದ ಹವಾಮಾನದಿಂದಾಗಿ ಈ ಬಾರಿ ಕಡಿಮೆ ಮಳೆಯಾಗಿದೆ. ಇದರಿಂದಾಗಿ ಅಂತರ್ಜಲದ ಮಟ್ಟವೂ ಕುಸಿದಿದ್ದು, ನಗರ ಹಾಗೂ ಮುಖ್ಯವಾಗಿ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಸಮಸ್ಯೆಯಾಗಿದೆ. ಹೀಗಾಗಿ ನೈಸರ್ಗಿಕವಾಗಿ ನೀರು ಇಂಗುವಂತೆ ಕೆರೆಗಳನ್ನು ಉಳಿಸಿಕೊಳ್ಳುವುದು ಮತ್ತು ಮಳೆ ನೀರು ಕೊಯ್ಲು ಅಳವಡಿಕೆ ಹೆಚ್ಚು ಅವಶ್ಯಕವಾಗಿದೆ. ಈ ಮಳೆ ನೀರು ಕೊಯ್ಲು ನಿರ್ಮಾಣ ಹೂಡಿಕೆಗೆ ಜಲ ಮಂಡಳಿ ಖಾಸಗಿ ಕಂಪನಿಗಳ ಮೊರೆ ಹೋಗಿದೆ ಎಂದಿದ್ದಾರೆ.

ಇದನ್ನೂ ಓದಿ : ನೀರಿನ ಸಮಸ್ಯೆ; ಹೋಳಿ ಹಬ್ಬಕ್ಕೆ ಕಾವೇರಿ, ಬೋರ್‌ವೆಲ್‌ ನೀರು ಬಳಸಬೇಡಿ: ರಾಮ್‌ ಪ್ರಸಾತ್‌ ಮನೋಹರ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.