ETV Bharat / state

ಪರಿಷತ್ ಸದಸ್ಯ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ನೀಡಿದ್ದ ರಾಜೀನಾಮೆ ಅಂಗೀಕಾರ

author img

By ETV Bharat Karnataka Team

Published : Jan 26, 2024, 7:08 AM IST

Updated : Jan 26, 2024, 2:19 PM IST

ಜಗದೀಶ್ ಶೆಟ್ಟರ್ ತಮ್ಮ ವಿಧಾನ ಪರಿಷತ್​ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸಭಾಪತಿ ಅಂಗೀಕರಿಸಿದ್ದಾರೆ.

ಜಗದೀಶ್ ಶೆಟ್ಟರ್
ರಾಜೀನಾಮೆ ಅಂಗೀಕಾರ

ಜಗದೀಶ್ ಶೆಟ್ಟರ್ ನೀಡಿದ್ದ ರಾಜೀನಾಮೆ ಅಂಗೀಕಾರ

ಬೆಂಗಳೂರು: ಗುರುವಾರ ಬೆಳಿಗ್ಗೆ ಬಿಜೆಪಿ ಸೇರ್ಪಡೆಯಾಗುವ ಮೊದಲು ವಿಧಾನ ಪರಿಷತ್​ ಸದಸ್ಯ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೀಡಿದ ರಾಜೀನಾಮೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕರಿಸಿದ್ದಾರೆ.

ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಪತ್ರವನ್ನು ಇಮೇಲ್ ಮೂಲಕ ಸಭಾಪತಿಗಳಿಗೆ ಕಳುಹಿಸಿಕೊಟ್ಟಿದ್ದ ಶೆಟ್ಟರ್ ನಂತರ ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾದರು. ಬೆಂಗಳೂರಿಗೆ ವಾಪಸಾಗುತ್ತಿದ್ದಂತೆ ಸಭಾಪತಿ ಹೊರಟ್ಟಿ ಅವರ ಸರ್ಕಾರಿ ನಿವಾಸಕ್ಕೆ ತೆರಳಿದರು. ಸಭಾಪತಿಯನ್ನು ಭೇಟಿಯಾಗಿ ಖುದ್ದಾಗಿ ಲಿಖಿತ ರೂಪದಲ್ಲಿ ರಾಜೀನಾಮೆ ಪತ್ರ ಸಲ್ಲಿಸಿ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು. ರಾಜೀನಾಮೆಗೆ ಒತ್ತಡವಿದೆಯೇ ಎನ್ನುವ ವಿಚಾರದ ಕುರಿತು ಹೇಳಿಕೆ ಪಡೆದುಕೊಂಡ ನಂತರ ಶೆಟ್ಟರ್ ನೀಡಿದ್ದ ರಾಜೀನಾಮೆಯನ್ನು ಅವರು ಅಂಗೀಕರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, "ದೆಹಲಿಯಿಂದ ಬಂದು ಸಭಾಪತಿ ಹೊರಟ್ಟಿ ಅವರನ್ನು ಭೇಟಿಯಾಗಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್​ನಿಂದ ಪರಿಷತ್​ಗೆ ಆಯ್ಕೆಯಾಗಿದ್ದೆ. 2029ರವರೆಗೂ ನನ್ನ ಅವಧಿ ಇತ್ತು. ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಬಿಜೆಪಿ ಸೇರುವ ಮೊದಲು ನಾನು ರಾಜೀನಾಮೆ ಪತ್ರ ಕಳಿಸಿದ್ದೇನೆ. ಸಭಾಪತಿ ಅವರಿಗೆ ಕರೆ ಮಾಡಿ ರಾಜೀನಾಮೆ ಕೊಟ್ಟಿದ್ದೇನೆ. ಕಾನೂನು ತೊಡಕು ಯಾವುದೂ ಇಲ್ಲ. ನಾನು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿ ಹೊರ ಬಂದಿಲ್ಲ. ಕಾಂಗ್ರೆಸ್​ಗೆ ಹೋದಾಗ ಗೌರವದಿಂದ ನಡೆಸಿಕೊಂಡಿದ್ದಾರೆ. ಸಿಎಂ, ಡಿಸಿಎಂಗೆ ಧನ್ಯವಾದ ಹೇಳುತ್ತೇನೆ. ಅವರಿಗೆ ಗೌರವದಿಂದ ನಮನ ಹೇಳುತ್ತೇನೆ" ಎಂದರು.

ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಮೇಲೆ ಎಲ್ಲರ ಇಚ್ಚೆ ಇದೆ ಪಕ್ಷಕ್ಕೆ ಬನ್ನಿ ಅಂತ ಕರೆ ನೀಡಿದರು. ಯಡಿಯೂರಪ್ಪ ಅವರೂ ಆಹ್ವಾನ ನೀಡಿದರು. ಅಮಿತ್ ಶಾ, ಜೆ.ಪಿ.ನಡ್ಡಾ ಅವರೂ ಕೂಡ ಬರುವಂತೆ ಆಹ್ವಾನ ನೀಡಿದರು. ಇಂದು ಬೆಳಿಗ್ಗೆ(ಗುರುವಾರ) ಅಮಿತ್ ಶಾ, ನಡ್ಡಾ ಅವರನ್ನು ಭೇಟಿಯಾಗಿ ಬಂದೆ. ಪಕ್ಷವನ್ನು ಅಧಿಕೃತವಾಗಿ ಸೇರಿದ್ದೇನೆ. ಬಿಜೆಪಿ ನನ್ನ ಸ್ವಂತ ಮನೆ. ಇಲ್ಲಿ ಮೊದಲಿಂದಲೂ ಕೆಲಸ ಮಾಡಿದ್ದೇನೆ. ರಾಷ್ಟ್ರೀಯ ನಾಯಕರು ಗೌರವ, ವಿಶ್ವಾಸದಿಂದ ನಡೆಸಿಕೊಳ್ಳುವುದಾಗಿ ಹೇಳಿದ್ದಾರೆ. ಲೋಕಸಭೆ ಟಿಕೆಟ್ ಕೊಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು. ಹೈಕಮಾಂಡ್ ಮಾತು ನನಗೆ ಖುಷಿ ತರಿಸಿದೆ ಎಂದರು.

ರಾಮಪ್ಪ ಲಮಾಣಿಗೂ ಆಹ್ವಾನ: ನಾನು ಕಾಂಗ್ರೆಸ್ ಸೇರಿದ ಮೇಲೆ ಸೇರಿದ ರಾಮಣ್ಣ ಲಮಾಣಿ‌ ಅವರು ಅಲ್ಲಿದ್ದಾರೆ. ಸ್ವಇಚ್ಛೆಯಿಂದ ಬನ್ನಿ ಅಂತ ಅವರಿಗೆ ಹೇಳಿದ್ದೆ ಎಂದು ತಿಳಿಸಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್​ಗೆ ಪೆಟ್ಟು: ಶೆಟ್ಟರ್ ಘರ್ ವಾಪಸಿಗೆ ಬೊಮ್ಮಾಯಿ ಸೇರಿ ಹಲವರ ಸ್ವಾಗತ

Last Updated : Jan 26, 2024, 2:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.