ETV Bharat / state

ನಮ್ಮ ಸರ್ಕಾರ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಕುಸಿದಿಲ್ಲ; ಸಚಿವ ಜಿ.ಪರಮೇಶ್ವರ್

author img

By ETV Bharat Karnataka Team

Published : Feb 19, 2024, 8:42 PM IST

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಕುಸಿದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ವಿಧಾನ ಪರಿಷತ್​ನಲ್ಲಿ ಸಮರ್ಥಿಸಿಕೊಂಡಿದ್ದಾರೆ.

ವಿಧಾನ ಪರಿಷತ್​
ವಿಧಾನ ಪರಿಷತ್​

ಬೆಂಗಳೂರು : ರಾಜ್ಯದಲ್ಲಿನ ಕಾನೂನು‌ ಸುವ್ಯವಸ್ಥೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್​ನಲ್ಲಿ ಬಿಸಿ ಬಿಸಿ ಚರ್ಚೆಯಾಯಿತು. ಕಾಂಗ್ರೆಸ್ ಅಧಿಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಅಂಕಿ-ಅಂಶಗಳ ಸಮೇತ ಉತ್ತರ ನೀಡಿ ಆಡಳಿತ ಪಕ್ಷ ತಿರುಗೇಟು ನೀಡಿತು. ಇದೇ ವಿಚಾರವಾಗಿ ಉಭಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಯಿತು.

ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನು‌ ಸುವ್ಯವಸ್ಥೆ ಕುಸಿದಿದೆ. ಕೊಲೆ, ಕೋಮುಗಲಭೆ, ಸೈಬರ್ ಕ್ರೈಂ ಅಧಿಕವಾಗಿದೆ. ಹಾವೇರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಆತ್ಯಾಚಾರ, ಬೆಳಗಾವಿಯಲ್ಲಿ ದಲಿತ ಮಹಿಳೆಗೆ ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿ ಹಲ್ಲೆ ಸೇರಿದಂತೆ ಹಲವು ರೀತಿಯಲ್ಲಿ ಅಪರಾಧಗಳು ನಡೆದಿವೆ. ಸರ್ಕಾರ ಅಪರಾಧಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ವಿಫಲವಾಗಿದೆ ಎಂದು ಆರೋಪಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯರಾದ ಎನ್.ರವಿಕುಮಾರ್, ತಳವಾರ್ ಸಾಬಣ್ಣ ಸೇರಿದಂತೆ ಇನ್ನಿತರ ಸದಸ್ಯರು ಸರ್ಕಾರದ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ನಮ್ಮ ಸರ್ಕಾರದಲ್ಲಿ ಅಪರಾಧ ಇಳಿಮುಖವಾಗಿವೆ. ರಾಜ್ಯದಲ್ಲಿ ಕಳೆದ ಏಳು ತಿಂಗಳಲ್ಲಿ 836 ಕೊಲೆ, 5 ಕೋಮುಗಲಭೆ, 16187 ಸೈಬರ್ ಪ್ರಕರಣ ಸೇರಿದಂತೆ ಒಟ್ಟು 1,47,860 ಪ್ರಕರಣಗಳು ದಾಖಲಾಗಿವೆ. ಹತ್ಯೆಯಾದ 836 ಪ್ರಕರಣಗಳಲ್ಲಿ ಶೇ.95 ರಷ್ಟು ಕೇಸ್​ಗಳನ್ನು ಬೇಧಿಸಲಾಗಿದೆ‌‌.‌ ಸೈಬರ್ ಕ್ರೈಂ ಪ್ರಕರಣ ಹೆಚ್ವಳವಾಗುವುದಕ್ಕೆ ಕಾರಣ ಪ್ರತಿ ಜಿಲ್ಲೆಯಲ್ಲಿ ಸೆನ್ ಪೊಲೀಸ್ ಠಾಣೆ ತೆರೆದು ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಆಕ್ಷೇಪಿಸಿದ ಕೋಟ ಶ್ರೀನಿವಾಸ್ ಪೂಜಾರಿ, ಹಾವೇರಿ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಮುಚ್ಚಿ ಹಾಕಲು ಪರೋಕ್ಷವಾಗಿ ಸರ್ಕಾರ ಕಾರಣವಾಗಿದೆ.‌ ಕೆರಗೋಡು ಗ್ರಾಮದ ವಿವಾದ ಇಷ್ಟು ಆಗೋಕೆ ಬಿಡಬಾರದಿತ್ತು. ಜಿಲ್ಲಾಧಿಕಾರಿ ಅಷ್ಟೊತ್ತು ರಾತ್ರಿಯಲ್ಲಿ ಹೋಗಿ ಬಾವುಟ ಇಳಿಸಿದ್ದು ಯಾಕೆ? ಜನರೇ ದುಡ್ಡು ಕೊಟ್ಟು ನಿರ್ಮಾಣ ಮಾಡಿದ ಧ್ವಜ ಕಂಬ ಅದು‌. ಆ ಜನರಿಗೆ ಪೆಟ್ಟು ಕೊಟ್ಟು ಗಲಾಟೆ ಮಾಡಿದ್ದು ಯಾಕೆ? ಪರಮೇಶ್ವರ್ ಅವರು ಸಮರ್ಥರಿದ್ದಾರೆ. ಇವರು ಇದ್ದಾಗಲೇ ಹೀಗೇಕಾಯ್ತು? ಬೆಳಗಾವಿಯಲ್ಲಿ ಜೈ ಶ್ರೀರಾಮ್ ಎಂಬುವರ ಮೇಲೆ ಕಲ್ಲು ತೂರಾಟ ಆಗಿದೆ. ಯಾರಿಗಾದಾರೂ ನೋವಾಗಿದೆ ಎಂದರೆ ಹೇಳಲಿ? ಶಾಸಕ ಅಂದರೆ ಆ ಪಕ್ಷ, ಈ ಪಕ್ಷ ಅಂತ ಇರಲ್ಲ. ಭರತ್ ಶೆಟ್ಟಿ ಮೇಲೆ ಯಾಕೆ ಕೇಸ್ ಹಾಕಿರುವುದು? ಅಲ್ಲಿನ ಶಾಲೆಯೊಂದರ ಶಿಕ್ಷಕಿಯು ಶ್ರೀರಾಮನ ಬಗ್ಗೆ ಇಲ್ಲಸಲ್ಲದ್ದು ದೂರಿದ್ದಾರೆ.‌‌ ಅವರ ಮೇಲೆ ಯಾವುದೇ ಕೇಸ್ ಆಗಿಲ್ಲ ಏಕೆ? ಎಂದು ಪ್ರಶ್ನಿಸಿದರು.

ಇದಕ್ಕೆ ಸಚಿವ ಪರಮೇಶ್ವರ್ ಉತ್ತರಿಸಿ 2020ರಲ್ಲಿ ಒಟ್ಟು ಐಪಿಸಿ ಕೇಸ್ 1,60,206 ಕೇಸ್ ಆಗಿವೆ. ನಮ್ಮ ಕಾಲದಲ್ಲಿ ಇಂತಹ ಕೇಸ್​ಗಳ ಸಂಖ್ಯೆ ಕಡಿಮೆ ಆಗಿದೆ. ನಮ್ಮ ಸರ್ಕಾರ ಬಂದ ಮೇಲೆ ಸೈಬರ್ ಕ್ರೈಂ, ಅಪರಾಧ ಸಂಖ್ಯೆ ಹೆಚ್ಚಾಗಿದೆ ಎಂಬುದು ಸುಳ್ಳು.‌ ಕರ್ನಾಟಕ ಪೊಲೀಸ್ ದೇಶದಲ್ಲೇ ಉನ್ನತ ಸ್ಥಾನದಲ್ಲಿದೆ. 7 ತಿಂಗಳಲ್ಲಿ ಆದ ಕೊಲೆ ಪ್ರಕರಣಗಳ ಪೈಕಿ ಶೇ.95 ಆರೋಪಿಗಳನ್ನು ಹಿಡಿದಿದ್ದೇವೆ‌. ಸೈಬರ್ ಕ್ರೈಂ ನಮ್ಮ ಅವಧಿಯಲ್ಲಿ ಹೆಚ್ಚಾಗಿದೆ. ಅದನ್ನು ಒಪ್ಪಿಕೊಳ್ಳುತ್ತೇ‌ವೆ. ಈಗ ನಾವು ಎಲ್ಲಾ ಜಿಲ್ಲೆಯಲ್ಲಿ ಸೈಬರ್ ಕ್ರೈಂ ಠಾಣೆ ನಿರ್ಮಿಸಿದ್ದೇವೆ.‌ ನಮ್ಮ ಕಾಲದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ : ಹೊಸ ಬಸ್​ ಖರೀದಿಗೆ 100 ಕೋಟಿ ರೂ. ವಿಶೇಷ ಅನುದಾನ: ಸಚಿವ ರಾಮಲಿಂಗಾರೆಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.