ETV Bharat / state

ಮುಖ್ಯ ನ್ಯಾಯಮೂರ್ತಿ ಒಪ್ಪಿಗೆ ಪಡೆಯದೆ ಪ್ರಾಸಿಕ್ಯೂಷನ್ ನಿರ್ದೇಶಕರ ನೇಮಕ: ಹೈಕೋರ್ಟ್ ಅಸಮಾಧಾನ

author img

By ETV Bharat Karnataka Team

Published : Mar 13, 2024, 6:27 AM IST

ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರ ಒಪ್ಪಿಗೆ ಪಡೆಯದೆ ಪ್ರಾಸಿಕ್ಯೂಷನ್ ಮತ್ತು ಸರ್ಕಾರಿ ವ್ಯಾಜ್ಯಗಳ ನಿರ್ದೇಶನಾಲಯದ ಹಂಗಾಮಿ ನಿರ್ದೇಶಕರನ್ನು ನೇಮಕ ಮಾಡಿರುವ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

high-court
ಹೈಕೋರ್ಟ್

ಬೆಂಗಳೂರು: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಒಪ್ಪಿಗೆ ಪಡೆಯದೆ ಪ್ರಾಸಿಕ್ಯೂಷನ್ ಮತ್ತು ಸರ್ಕಾರಿ ವ್ಯಾಜ್ಯಗಳ ನಿರ್ದೇಶನಾಲಯದ ಹಂಗಾಮಿ ನಿರ್ದೇಶಕರನ್ನು ನೇಮಕ ಮಾಡಿದ್ದ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ತಕ್ಷಣ ಜಾರಿಗೆ ಬರುವಂತೆ ನಿರ್ದೇಶಕರಾಗಿದ್ದ ಹೆಚ್.ಕೆ.ಜಗದೀಶ್ ನೇಮಕಾತಿ ರದ್ದುಪಡಿಸಿ ಆದೇಶಿಸಿದೆ.

ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್​​ಪಿಸಿ) ಮತ್ತು ಶ್ರೇಣಿ ಮತ್ತು ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿ 2019ರ ಆಗಸ್ಟ್ 5ರಂದು ಜಗದೀಶ್ ಅವರನ್ನು ಪ್ರಾಸಿಕ್ಯೂಷನ್ ಮತ್ತು ಸರ್ಕಾರಿ ದಾವೆ ವಿಭಾಗದ ಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದನ್ನು ವಜಾ ಮಾಡುವಂತೆ ಕೋರಿ ವಕೀಲ ಸುಧಾ ಕಟ್ವಾ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್​.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ಅಲ್ಲದೆ, ಸರ್ಕಾರದ ಆದೇಶದ ಪ್ರಕಾರ ಹಂಗಾಮಿ ನಿರ್ದೇಶಕರು ಒಂದು ವರ್ಷದ ನಂತರ ಯಾವುದೇ ಸಂದರ್ಭವಿದ್ದರೂ ಮುಂದುವರಿಯುವಂತಿಲ್ಲ. ಪದೋನ್ನತಿ ಪಡೆಯಲು ಅರ್ಹತೆ ಇಲ್ಲದ ವ್ಯಕ್ತಿಯನ್ನು ಹಂಗಾಮಿ ಹುದ್ದೆಗೆ ನೇಮಕ ಮಾಡುವಂತಿಲ್ಲ. ಕೊನೆಯದಾಗಿ ಹೈಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಅವರ ಸಹಮತಿ ಇಲ್ಲದೇ ಆಕ್ಷೇಪಾರ್ಹವಾದ ಹುದ್ದೆಗೆ ಯಾರನ್ನೂ ನೇಮಿಸುವಂತಿಲ್ಲ. ಹಾಲಿ ನೇಮಕಾತಿಯು 2019ರಿಂದ ಮುಂದುವರೆಯುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಹೀಗಾಗಿ, ತಕ್ಷಣದಿಂದ ಜಾರಿಗೆ ಬರುವಂತೆ ಹಂಗಾಮಿ ನಿರ್ದೇಶಕರನ್ನು ವಜಾ ಮಾಡಲಾಗಿದೆ. ಸರ್ಕಾರವು ಸಿಆರ್​​ಪಿಸಿ ಸೆಕ್ಷನ್ 25ಎ ಅಡಿ ನಿಯಮ ಪಾಲಿಸುವ ಮೂಲಕ ಹೊಸ ನೇಮಕಾತಿಯನ್ನು ತಡ ಮಾಡದೇ ಆರಂಭಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್ ಉಮಾಪತಿ, ಹೈಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಅವರ ಸಹಮತ ಪಡೆಯದೇ ಹಾಗೂ ಸಿಆರ್​​ಪಿಸಿ​​ ಸೆಕ್ಷನ್ 25ಎ ವಿಧಿಗೆ ವಿರುದ್ಧವಾಗಿ ನೇಮಕಾತಿ ಮಾಡಲಾಗಿದೆ. ಪ್ರಾಸಿಕ್ಯೂಷನ್ ವಿಭಾಗದಲ್ಲಿ ಎರಡು ವರ್ಷ ಸೇವಾನುಭವ ಹೊಂದಿರುವವರನ್ನು ಹುದ್ದೆಗೆ ಪರಿಗಣಿಸಬೇಕು ಎಂದು ಹೇಳಲಾಗಿದೆ. ಇದೊಂದು ಸ್ವತಂತ್ರ ಸಂಸ್ಥೆಯಾಗಿದ್ದು, ಆಡಳಿತಕ್ಕೆ ಸಮಸ್ಯೆಯಾಗಲಿದೆ. 1995ರ ನ್ಯಾಯಾಂಗ ಅಧಿಕಾರಿಯು ಪ್ರಾಸಿಕ್ಯೂಷನ್ ವಿಭಾಗ ಮುನ್ನಡೆಸುತ್ತಿದ್ದಾರೆ ಎಂದರು.

ಅಲ್ಲದೆ, ಒಂದೊಮ್ಮೆ ಎರಡು ವರ್ಷ ಉಪ ನಿರ್ದೇಶಕರಾಗಿ ಅನುಭವ ಇಲ್ಲದವರು ಸಿಗದಿದ್ದಾಗ ಕನಿಷ್ಠ ಒಂದು ವರ್ಷ ಸೇವಾನುಭವ ಹೊಂದಿರುವವರನ್ನು ಪದೋನ್ನತಿಗೆ ಪರಿಗಣಿಸಬಹುದು ಎಂದು ಶ್ರೇಣಿ ಮತ್ತು ನೇಮಕಾತಿ ನಿಯಮಗಳಲ್ಲಿ ಹೇಳಲಾಗಿದೆ. ಸಿಆರ್​​ಪಿಸಿ ಸೆಕ್ಷನ್ 25ಎ ನಿರ್ದೇಶಕರು ಅಥವಾ ಉಪನಿರ್ದೇಶಕರನ್ನಾಗಿ ನೇಮಕ ಮಾಡುವ ವ್ಯಕ್ತಿಯು ಕನಿಷ್ಠ ಹತ್ತು ವರ್ಷ ವಕೀಲರಾಗಿ ಸೇವೆ ಸಲ್ಲಿಸಿರುವವರನ್ನು ಪರಿಗಣಿಸಬಹುದು ಎಂದು ಹೇಳಲಾಗಿದೆ. 2019ರ ಆಗಸ್ಟ್​​ನಿಂದ ಹಂಗಾಮಿ ನಿರ್ದೇಶಕರು ಅವಧಿ ವಿಸ್ತರಣೆಯ ಮೂಲಕ ಹುದ್ದೆಯಲ್ಲಿದ್ದಾರೆ ಎಂದು ಆಕ್ಷೇಪಿಸಿದರು.

ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ: ಕಾನ್ಸ್​ಟೇಬಲ್​​ಗೆ ಮಂಜೂರಾಗಿದ್ದ ಜಾಮೀನು ರದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.