ETV Bharat / state

ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ವಾದಿಸಲು ಎಸ್​.ಬಾಲನ್ ನೇಮಕಾತಿ ಆದೇಶಕ್ಕೆ ಹೈಕೋರ್ಟ್ ತಡೆ - High Court

author img

By ETV Bharat Karnataka Team

Published : Apr 8, 2024, 5:15 PM IST

Higm court
ಹೈಕೋರ್ಟ್​

ಶ್ರೀರಂಗಪಟ್ಟಣದಲ್ಲಿ ನಡೆದಿದ್ದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲ್ಲಡ್ಕ ಪ್ರಭಾಕರ ಭಟ್, ತ್ರಿವಳಿ ತಲಾಕ್​ ವಿಚಾರ ಪ್ರಸ್ತಾಪಿಸಿ ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಎದುರಿಸುತ್ತಿದ್ದಾರೆ.

ಬೆಂಗಳೂರು: ಮುಸ್ಲಿಂ ಮಹಿಳೆಯರ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಪೊಲೀಸ್​ ಠಾಣೆಯಲ್ಲಿ ಆರ್​ಎಸ್​ಎಸ್​ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸರ್ಕಾರದ ಪರ ವಾದ ಮಂಡಿಸಲು ವಿಶೇಷ ಅಭಿಯೋಜಕರಾಗಿ ಎಸ್.ಬಾಲಕೃಷ್ಣನ್​(ಬಾಲನ್​) ಅವರನ್ನು ನೇಮಿಸಿ ಹೊರಡಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಇದೀಗ ತಡೆ ನೀಡಿದೆ.

ಬಾಲನ್​ ಅವರನ್ನು ನೇಮಿಸಿದ್ದ ಕ್ರಮವನ್ನು ಪ್ರಶ್ನಿಸಿ ಡಾ.ಪ್ರಭಾಕರ ಭಟ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್​ ಶ್ಯಾಮ್​, ಶ್ರೀರಂಗಪಟ್ಟಣದಲ್ಲಿ ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಲು ಬಾಲನ್ ಅವರನ್ನು ನೇಮಕ ಮಾಡಿರುವುದು ಕಾನೂನುಬಾಹಿರ ನಿಯಮ. ಇದು ಅಧಿಕಾರದ ವ್ಯಾಪ್ತಿ ಮೀರಿದೆ ಎಂದು ವಿವರಿಸಿದರು.

ಈ ಆದೇಶದಿಂದ ಅರ್ಜಿದಾರರ ವಿರುದ್ಧದ ಪ್ರಕರಣದ ತ್ವರಿತ ವಿಚಾರಣೆಯ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ. ಆದ್ದರಿಂದ ಆದೇಶ ರದ್ದುಪಡಿಸಬೇಕು ಎಂದು ಕೋರಿದರು. ವಾದ ಆಲಿಸಿದ ನ್ಯಾಯಪೀಠ, ಬಾಲನ್​ ಅವರನ್ನು ನೇಮಕ ಮಾಡಿರುವ ಆದೇಶಕ್ಕ ತಡೆ ನೀಡಿತು.

ಪ್ರಕರಣದ ಹಿನ್ನೆಲೆ: ಶ್ರೀರಂಗಪಟ್ಟಣದಲ್ಲಿ 2023ರ ಡಿಸೆಂಬರ್​ 24ರಂದು ನಡೆದಿದ್ದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಭಾಕರ ಭಟ್​, ತ್ರಿವಳಿ ತಲಾಕ್​ ವಿಚಾರವನ್ನು ಪ್ರಸ್ತಾಪಿಸಿ ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಮಹಿಳಾ ಹೋರಾಟಗಾರ್ತಿ ಹುಣಸೂರಿನ ನಜ್ಮಾ ನಝೀರ್ ಎಂಬವರು ನೀಡಿದ್ದ ದೂರಿನನ್ವಯ ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬೇರೆ ಧರ್ಮವನ್ನು ಅವಮಾನಿಸಿ, ಧರ್ಮ-ಧರ್ಮಗಳ ಮಧ್ಯೆ ಎತ್ತಿಕಟ್ಟಿ, ಗಲಭೆ, ಮತೀಯ ಸಾವು-ನೋವಿಗೆ ಕಲ್ಲಡ್ಕ ಪ್ರಭಾಕರ್ ಪ್ರಚೋದನೆ ನೀಡಿದ್ದಾರೆಂದು ನಜ್ಮಾ ದೂರಿನಲ್ಲಿ ಆರೋಪಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್​ ಪರ ವಾದ ಮಂಡಿಸುವುದಕ್ಕಾಗಿ 2024ರ ಮಾರ್ಚ್ 7ರಂದು ಬಾಲಕೃಷ್ಣನ್​(ಬಾಲನ್​) ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಡಾ.ಪ್ರಭಾಕರ ಭಟ್​ ಹೈಕೋರ್ಟ್ ಮೆಟ್ಟಿಲೇರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.