ETV Bharat / state

ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದ್ದ ಪೋಕ್ಸೋ ಅಪರಾಧಿಗೆ 10 ವರ್ಷ ಶಿಕ್ಷೆ ವಿಧಿಸಿದ ಹೈಕೋರ್ಟ್

author img

By ETV Bharat Karnataka Team

Published : Mar 16, 2024, 9:52 PM IST

Updated : Mar 16, 2024, 10:17 PM IST

2016ರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದ ಅಪರಾಧಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡವನ್ನು ಹೈಕೋರ್ಟ್ ವಿಧಿಸಿದೆ.

High Court sentenced 10 years for POCSO convict who was acquitted by the trial court
ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದ್ದ ಪೋಕ್ಸೋ ಅಪರಾಧಿಗೆ 10 ವರ್ಷ ಶಿಕ್ಷೆಗೆ ವಿಧಿಸಿದ ಹೈಕೋರ್ಟ್

ಬೆಂಗಳೂರು: ಪೋಕ್ಸೋ ಕಾಯ್ದೆ ಆರೋಪಿ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಅಪರಾಧಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್​.ಬಿ.ಪ್ರಭಾಕರ ಶಾಸ್ತ್ರಿ ಮತ್ತು ಉಮೇಶ್​ ಎಂ.ಅಡಿಗ ಅವರನ್ನೊಳಗೊಂಡ ಪೀಠವು ಈ ಆದೇಶ ಮಾಡಿದೆ.

ಅಪ್ರಾಪ್ತೆಯೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆ ನಡೆದಿದೆ ಎಂಬುದಾಗಿ ಪರಿಗಣಿಸಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿರುವುದು ದೋಷಪೂರಿತವಾಗಿದೆ ಎಂದು ನ್ಯಾಯಪೀಠ ಹೇಳಿದೆ. ಅಲ್ಲದೇ, ಅಪರಾಧಿಗೆ 10 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿದ್ದು, 25 ಸಾವಿರ ರೂ.ಗಳ ದಂಡ ವಿಧಿಸಿದೆ. ಈ ದಂಡದ ಮೊತ್ತದಲ್ಲಿ 20 ಸಾವಿರ ರೂಪಾಯಿಗಳ ಸಂತ್ರಸ್ತೆಗೆ ಪಾವತಿ ಮಾಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?: 2016ರ ಏಪ್ರಿಲ್​ 3ರಂದು ಹೊನ್ನಾಳಿ ಠಾಣೆಯಲ್ಲಿ ಸಂತ್ರಸ್ತೆಯ ಪೋಷಕರು ದೂರೊಂದು ದಾಖಲಿಸಿದ್ದರು. 15 ವರ್ಷದ ಅಪ್ರಾಪ್ತೆ ಆಗಿರುವ ತಮ್ಮ ಮಗಳನ್ನು ಆರೋಪಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಸಂತ್ರಸ್ತೆಯು ಗರ್ಭಿಣಿಯಾಗಿದ್ದು, ವಿವಾಹಕ್ಕೆ ನಿರಾಕರಿಸುತ್ತಿದ್ದಾನೆ ಎಂದು ಪೋಷಕರು ತಮ್ಮ ದೂರು ನೀಡಿದ್ದರು.

2017ರ ಅಕ್ಟೋಬರ್​ 13ರಂದು ಈ ಪ್ರಕರಣ ವಿಚಾರಣೆ ನಡೆಸಿದ್ದ ದಾವಣಗೆರೆ ವಿಶೇಷ ನ್ಯಾಯಾಲಯವು ಘಟನೆ ನಡೆದ ಸಂದರ್ಭದಲ್ಲಿ ಸಂತ್ರಸ್ತೆ ಅಪ್ರಾಪ್ತರಾಗಿದ್ದು, ಒಪ್ಪಿತ ಲೈಂಗಿಕ ಕ್ರಿಯೆ ನಡೆಸಲಾಗಿದೆ ಎಂದು ತಿಳಿಸಿ ಆರೋಪಿಯನ್ನು ಖುಲಾಸೆ ಮಾಡಿತ್ತು. ಇದನ್ನು ಪ್ರಶ್ನಿಸಿ ಹೊನ್ನಾಳಿ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಘಟನೆ ನಡೆದ ಸಂದರ್ಭದಲ್ಲಿ ಸಂತ್ರಸ್ತೆ ಅಪ್ರಾಪ್ತರಾಗಿದ್ದರು. ಹೀಗಿರುವಾಗ ಅಪ್ರಾಪ್ತೆಯೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆ ನಡೆದರೂ ಅದು ಅಪರಾಧವಾಗಲಿದೆ. ಅಲ್ಲದೇ, ಸಂತ್ರಸ್ತೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಎರಡು ದಿನದಲ್ಲಿಯೇ ಮಗು ಮೃತಪಟ್ಟಿದೆ ಎಂದು ನ್ಯಾಯ ಪೀಠದ ಗಮನ ಸೆಳೆದರು. ಹೀಗಾಗಿ, ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಪಡಿಸಬೇಕು ಎಂದು ಕೋರಿದ್ದರು.

ವಾದ - ಪ್ರತಿವಾದ ಆಲಿಸಿದ ಪೀಠವು, ಪ್ರಕರಣ ಸಂಬಂಧ ನಡೆದ ತನಿಖೆಯಲ್ಲಿ ಸಂತ್ರಸ್ತೆ ಅಪ್ರಾಪ್ತೆ ಎಂಬುದು ಗೊತ್ತಾಗಲಿದೆ. ಆದರೆ, ವಿವಾಹವಾಗುವುದಾಗಿ ಆರೋಪಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಸಂತ್ರಸ್ತೆ ಘಟನೆ ನಡೆದ ತಕ್ಷಣ ದೂರು ನೀಡಿರಲಿಲ್ಲ. ಆದ ಕಾರಣ ಆರೋಪಿ ಖುಲಾಸೆಗೊಳಿಸಲಾಗದು ಎಂದು ಆದೇಶಿಸಿ, ಅಪರಾಧಿಗೆ ಶಿಕ್ಷೆ, ದಂಡ ವಿಧಿಸಿತು.

ಇದನ್ನೂ ಓದಿ: ಯುವತಿ ಮೇಲೆ ಆ್ಯಸಿಡ್ ದಾಳಿ: ಅಪರಾಧಿಗೆ ಜೀವಾವಧಿ ಶಿಕ್ಷೆ, ₹ 40 ಲಕ್ಷ ದಂಡ ವಿಧಿಸಿದ ಕೋರ್ಟ್

Last Updated : Mar 16, 2024, 10:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.