ETV Bharat / state

ಮತಗಟ್ಟೆಗೆ ತೆರಳಲು ಉಚಿತ ಸಾರಿಗೆ ವ್ಯವಸ್ಥೆ ಕೋರಿದ್ದ ಮನವಿ ತಿರಸ್ಕರಿಸಿದ ಹೈಕೋರ್ಟ್ - High Court

author img

By ETV Bharat Karnataka Team

Published : May 17, 2024, 8:03 AM IST

ವಿಧಾನ ಪರಿಷತ್‌ ಚುನಾವಣೆ ವೇಳೆ ಮತದಾನಕ್ಕೆ ತೆರಳಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೋರಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

high court
ಹೈಕೋರ್ಟ್ (ETV Bharat)

ಬೆಂಗಳೂರು: ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಮತ ಕೇಂದ್ರಗಳಿಗೆ ತೆರಳಿ ಮತದಾನ ಮಾಡಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ಕೋರಿದ್ದ ಮನವಿಯನ್ನು ಗುರುವಾರ ಹೈಕೋರ್ಟ್ ತಿರಸ್ಕರಿಸಿತು.

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಮತದಾನ ಮಾಡಲು ಮತದಾರರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಹಾಗೂ ಮತಗಟ್ಟೆಗಳನ್ನು 160 ರಿಂದ 250ಕ್ಕೆ ಹೆಚ್ಚಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ನಿವಾಸಿ ಸಯ್ಯದ್ ಕಲೀಲ್ವುಲ್ಲಾ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ನೇತೃತ್ವದ ರಜಾಕಾಲದ ವಿಭಾಗೀಯ ಪೀಠ ಈ ಆದೇಶ ನೀಡಿ, ಅರ್ಜಿ ಇತ್ಯರ್ಥಪಡಿಸಿತು.

ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ''ಉಚಿತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ನಿರ್ದೇಶಿಸಲು ಚುನಾವಣೆ ಆಯೋಗಕ್ಕೆ ಅವಕಾಶ ಹಾಗೂ ಅಧಿಕಾರ ಎಲ್ಲಿದೆ?. ಒಂದೊಮ್ಮೆ ಸರ್ಕಾರ ಉಚಿತ ಬಸ್ ವ್ಯವಸ್ಥೆ ಮಾಡಿದರೆ ಆಡಳಿತಾರೂಢ ಪಕ್ಷ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುವುದಿಲ್ಲವೇ'' ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದರು.

''ಉಚಿತ ಬಸ್ ವ್ಯವಸ್ಥೆ ಮಾಡಲು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲು ನೀವು (ಅರ್ಜಿದಾರರು) ಕೋರಿದ್ದೀರಿ. ಅಂತಹ ವ್ಯವಸ್ಥೆ ಮಾಡಲು ಕಾನೂನಿನಲ್ಲಿ ಚುನಾವಣಾ ಆಯೋಗಕ್ಕೆ ಅವಕಾಶವಿದೆಯೇ ಎಂಬುದನ್ನು ಮೊದಲು ಪರಿಶೀಲಿಸುವುದು ನಿಮ್ಮ ಜವಾಬ್ದಾರಿ. ಪರಿಶೀಲನೆ ಮಾಡದೆ ಏಕಾಏಕಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಹೇಗೆ?, ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ವಿಚಾರ ಇರಬಹುದು. ಆದರೆ, ಆ ವಿಚಾರದ ಕುರಿತ ಕಾನೂನುಗಳ ಬಗ್ಗೆ ಸಮಗ್ರವಾಗಿ ಅರ್ಜಿದಾರರು ತಿಳಿಯಬೇಕು'' ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದರು.

''ಅಂತಿಮ ಕ್ಷಣದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುತ್ತದೆ. ಚುನಾವಣೆಗೆ ಅಧಿಸೂಚನೆ ಹೊರಡಿಸಿ ಹಲವು ದಿನಗಳೇ ಕಳೆದಿವೆ. ಈಗಾಗಲೇ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಈ ಹಂತದಲ್ಲಿ ನ್ಯಾಯಾಲಯ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದರೆ ಹೇಗೆ ಸಾಧ್ಯ? ಮುಂಚಿತವಾಗಿ ಅರ್ಜಿ ಸಲ್ಲಿಸಿದರೆ, ಕನಿಷ್ಠ ಪಕ್ಷ ಸಂಬಂಧಪಟ್ಟವರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿ, ಅವರಿಂದ ಉತ್ತರ ಪಡೆಯಬಹುದು. ಸಾರ್ವಜನಿಕ ಹಿತಾಸಕ್ತಿಯಿಂದ ಅಗತ್ಯ ವ್ಯವಸ್ಥೆ ಮಾಡಲು ಸಾಧ್ಯವಿದೆಯೇ ಎಂಬ ಬಗ್ಗೆ ವಿಚಾರಿಸಬಹುದು'' ಎಂದು ನ್ಯಾಯಮೂರ್ತಿಗಳು ಹೇಳಿದರು.

ಕೇಂದ್ರ ಚುನಾವಣಾ ಆಯೋಗದ ಪರ ವಕೀಲ ಶರತ್ ದೊಡ್ಡವಾಡ ಆಕ್ಷೇಪಣೆ ಸಲ್ಲಿಸಿ, ''ಮತದಾರರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲು ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 123(5) ಅಡಿಯಲ್ಲಿ ಆಯೋಗಕ್ಕೆ ನಿರ್ಬಂಧವಿದೆ. ಒಂದೊಮ್ಮೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದರೆ ಅದು ಕೆಟ್ಟ ರೂಢಿಯಾಗುತ್ತದೆ. ಹಾಗಾಗಿ, ಆ ಕುರಿತ ಅರ್ಜಿದಾರರ ಮನವಿ ಪರಿಗಣಿಸಲಾಗದು. ಅರ್ಜಿ ಸಲ್ಲಿಕೆಯಾದ ನಂತರ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿದ್ದ 160 ಮತಗಟ್ಟೆಗಳನ್ನು 195ಕ್ಕೆ ಹೆಚ್ಚಿಸಲಾಗಿದೆ'' ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿ ಪಾವತಿಸುವ ಭರವಸೆ: ಇಂದಿನಿಂದ ಬೆಂಗಳೂರಿನ ಮಂತ್ರಿ ಮಾಲ್ ಓಪನ್ - Mantri Mall

ETV Bharat Logo

Copyright © 2024 Ushodaya Enterprises Pvt. Ltd., All Rights Reserved.