ETV Bharat / state

ಬಿಜೆಪಿ ಕಚೇರಿಯ ಕಾರ್ಯದರ್ಶಿ ವಿರುದ್ಧ ಡಿಸಿಪಿ ಮತ್ತು ದಂಡಾಧಿಕಾರಿ ಜಾರಿ ಮಾಡಿದ್ದ ನೋಟಿಸ್ ರದ್ದುಗೊಳಿಸಿದ ಹೈಕೋರ್ಟ್ - High court

author img

By ETV Bharat Karnataka Team

Published : May 22, 2024, 10:51 PM IST

ನೋಟಿಸ್ ಪ್ರಶ್ನಿಸಿ ಲೋಕೇಶ ಅಂಬೇಕಲ್ಲು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ರಜಾಕಾಲದ ಪೀಠ ಆದೇಶ ಮಾಡಿದೆ.

high court
ಹೈಕೋರ್ಟ್ (Etv Bharat)

ಬೆಂಗಳೂರು: ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ಹಾಗೂ ಚುನಾವಣಾ ಅಕ್ರಮದಲ್ಲಿ ತೊಡಗುವುದಿಲ್ಲ ಎಂಬುದಾಗಿ ಮುಚ್ಚಳಿಕೆ ಬರೆದುಕೊಡುವಂತೆ ಸೂಚಿಸಿ ಮಲ್ಲೇಶ್ವರದ ಬಿಜೆಪಿ ಕಚೇರಿಯ ಕಾರ್ಯದರ್ಶಿ ಲೋಕೇಶ ಆಂಬೇಕಲ್ಲು ವಿರುದ್ಧ ನಗರ ಪಶ್ವಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಮತ್ತು ದಂಡಾಧಿಕಾರಿ ಜಾರಿ ಮಾಡಿದ್ದ ನೋಟಿಸ್‌ ಅನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ನೋಟಿಸ್ ಪ್ರಶ್ನಿಸಿ ಲೋಕೇಶ ಅಂಬೇಕಲ್ಲು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ರಜಾಕಾಲದ ಪೀಠ ಈ ಆದೇಶ ಮಾಡಿದೆ. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ನೋಟಿಸ್ ನೀಡಲಾಗಿದೆ. ಈಗಾಗಲೇ ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಹೀಗಾಗಿ ಅರ್ಜಿದಾರರ ವಿರುದ್ಧದ ನೋಟಿಸ್ ಮಾನ್ಯತೆ ಕಳೆದುಕೊಂಡಿದೆ. ಆದ್ದರಿಂದ ಅದನ್ನು ರದ್ದುಪಡಿಸಲಾಗುತ್ತಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರ ಪರ ವಕೀಲ ಎಂ. ವಿನೋದ್ ಕುಮಾರ್, ನಗರದಲ್ಲಿ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ 2024ರ ಏ.26ರಂದು ಪೂರ್ಣಗೊಂಡಿದೆ. ಆ ನಂತರ ಮೇ 15ರಂದು ಅರ್ಜಿದಾರರಿಗೆ ನೋಟಿಸ್ ಜಾರಿಗೊಳಿಸಿ ಮುಚ್ಚಳಿಕೆಗೆ ಸಹಿ ಹಾಕುವಂತೆ ನಗರದ ಪಶ್ವಿಮ ವಿಭಾಗದ ಉಪ ಪೊಲೀಸ್ ಆಯುಕ್ತರು ಒತ್ತಾಯಿಸಿದ್ದಾರೆ. ವಾಟ್ಸ್‌ಆ್ಯಪ್ ಮೂಲಕ ನೋಟಿಸ್ ಜಾರಿಗೊಳಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿನ ಘಟನೆ ಆಧರಿಸಿ ಅರ್ಜಿದಾರರ ವಿರುದ್ಧ ಆರೋಪ ಮಾಡಿದ್ದು, ಆ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ಸಹ ನೀಡಿದೆ. ಹಾಗಾಗಿ, ಅರ್ಜಿದಾರರ ವಿರುದ್ಧ ನೋಟಿಸ್ ನೀಡಿರುವುದು ಕಾನೂನಿನ ಸ್ಪಷ್ಟ ದುರ್ಬಳಕೆ ಎಂದು ಕೋರ್ಟ್ ಗಮನಕ್ಕೆ ತಂದರು.

ಸರ್ಕಾರಿ ವಕೀಲರು, ರಾಜ್ಯದಲ್ಲಿ ಈಗಾಗಲೇ ಲೋಕಸಭೆ ಚುನಾವಣೆ ಮತದಾನ ಪೂರ್ಣಗೊಂಡಿದ್ದು, ಅರ್ಜಿದಾರರ ವಿರುದ್ಧ ಜಾರಿಗೊಳಿಸಿದ್ದ ನೋಟಿಸ್ ಸಹ ಮಾನ್ಯತೆ ಕಳೆದುಕೊಂಡಿದೆ ಎಂದು ಪೀಠದ ಗಮನಕ್ಕೆ ತಂದರು.

ಇದನ್ನೂಓದಿ:ಗೌಪ್ಯ ಮಾಹಿತಿಯನ್ನು ಎನ್‌ಆರ್‌ಎಐ ನೀಡದಂತೆ ಸಿಸಿಐಗೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ಸ್ವಿಗ್ಗಿ - SWIGGY MOVE TO HIGH COURT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.