ಕನ್ನಡದಲ್ಲೂ ಸುಪ್ರೀಂ ಕೋರ್ಟ್‌ನ ಸಾವಿರಾರು ತೀರ್ಪುಗಳು ಲಭ್ಯ: ಆಸಕ್ತರು ಹೀಗೆ ಓದಿ

author img

By ETV Bharat Karnataka Team

Published : Feb 26, 2024, 7:58 PM IST

High Court

ಇ-ಐಎಲ್ಆರ್ ಪೋರ್ಟಲ್​ನಲ್ಲಿ ಕನ್ನಡ ಭಾಷೆಯಲ್ಲೂ ಸುಪ್ರೀಂ ಕೋರ್ಟ್​ನ 2,000ಕ್ಕೂ ಅಧಿಕ ತೀರ್ಪುಗಳು ಲಭ್ಯವಿರಲಿದೆ.

ಬೆಂಗಳೂರು: ಭಾರತೀಯ ಕಾನೂನು ವರದಿಗಳು ಮತ್ತು ಕರ್ನಾಟಕ ತೀರ್ಪುಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸುವ ಸಲುವಾಗಿ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಇ-ಐಎಲ್ಆರ್(ಇಂಡಿಯನ್ ಲಾ ರಿಪೋರ್ಟ್ಸ್-ಭಾರತೀಯ ಕಾನೂನು ವರದಿಗಳು)ಗಳನ್ನು ಹೈಕೋರ್ಟ್ ಪರಿಚಯಿಸಿದೆ.

ಭಾಷಾಂತರಿಸಿದ ತೀರ್ಪುಗಳ ಜೊತೆಗೆ ಡಿಜಿಟಲ್ ಕಾನೂನು ವರದಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಒದಗಿಸುವ ಕೃತಕ ಬುದ್ಧಿಮತ್ತೆ ಆಧಾರಿತ ಕಾನೂನು ಭಾಷಾಂತರ ಸಲಹಾ ಸಮಿತಿಯ ಉದ್ದೇಶವನ್ನು ದ್ವಿಭಾಷಾ ಇ-ಐಎಲ್ಆರ್ ಪೋರ್ಟಲ್ ಈಡೇರಿಸುತ್ತಿದೆ. 2023ರ ಡಿಸೆಂಬರ್ 16ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಅನಾವರಣಗೊಳಿಸಿದ್ದು, ಇದರ ಭಾಗವಾಗಿ ಪೋರ್ಟಲ್ ಈಗ ಪ್ರಾರಂಭವಾಗಿದೆ.

ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು, ವಕೀಲರು, ದಾವೆದಾರರು, ಸರ್ಕಾರಿ ಅಧಿಕಾರಿಗಳು, ಕಾನೂನು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವುದಕ್ಕಾಗಿ ಈ ವ್ಯವಸ್ಥೆ ಪರಿಚಯಿಸಲಾಗಿದೆ. ಬಳಕೆದಾರಸ್ನೇಹಿ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಇ-ಕೋರ್ಟ್ಸ್ ಯೋಜನೆಯ ಮೂರನೇ ಹಂತದ ಭಾಗವಾಗಿ ಪರಿಚಯಿಸಲಾಗಿದೆ. ಹೈಕೋರ್ಟ್​ನ ಸಮಗ್ರ ಮತ್ತು ವರದಿ ಮಾಡಬಹುದಾದ ಕೇಸ್ ಲಾಗಳನ್ನು ಇದು ಒಳಗೊಂಡಿದೆ. ಹೈಕೋರ್ಟ್ ನೆರವಿನೊಂದಿಗೆ ಕರ್ನಾಟಕ ಕಾನೂನು ವರದಿಗಾರಿಕೆ ಒಕ್ಕೂಟ ಹೊರತಂದಿದೆ.

ಸುಪ್ರೀಂ ಕೋರ್ಟ್​ನ 2,000ಕ್ಕೂ ಅಧಿಕ ತೀರ್ಪುಗಳನ್ನು ಇ-ಐಎಲ್ಆರ್ ಪೋರ್ಟಲ್ ಒಳಗೊಂಡಿದೆ. ಇಂಗ್ಲಿಷ್ ಜೊತೆಗೆ ಪರ್ಯಾಯವಾಗಿ ಪೋರ್ಟಲ್​ನಲ್ಲಿ ಕನ್ನಡ ವರದಿಗಳನ್ನೂ ಅಪ್ಲೋಡ್ ಮಾಡಲಾಗುತ್ತಿದೆ. ಕರ್ನಾಟಕ ಹೈಕೋರ್ಟ್​ನ ಭಾಷಾಂತರಿಸಿದ ಕನ್ನಡ ತೀರ್ಪುಗಳೂ ಲಭ್ಯವಾಗುವಂತೆ ಮಾಡಲಾಗಿದೆ. ಪೋರ್ಟಲ್ ಕರ್ನಾಟಕ ಹೈಕೋರ್ಟ್​ ತೀರ್ಪುಗಳನ್ನಷ್ಟೇ ಅಲ್ಲದೇ ಸಂಪಾದಕರ ನುಡಿಯನ್ನೂ ಒಳಗೊಂಡಿರಲಿದೆ. ಇದರಲ್ಲಿ ವರದಿ ಮಾಡಬಹುದಾದ ಎಲ್ಲ ತೀರ್ಪುಗಳೂ ಸೇರಿರಲಿದೆ.

ತಮಗೆ ಗೊತ್ತಿರುವ ಭಾಷೆಯಲ್ಲಿ ಡಿಜಿಟಲ್ ಮಾದರಿಯಲ್ಲಿ ಸರ್ಚ್ ಮಾಡಲು ಅನುಕೂಲ ಮಾಡಿಕೊಡುವ ಮೂಲಕ ಇ-ಐಎಲ್ಆರ್ ಪೋರ್ಟಲ್ ಎಲ್ಲರೂ ನ್ಯಾಯದಾನ ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಹೈಕೋರ್ಟ್​ ಈ ಯೋಜನೆಯು ಮುದ್ರಣ ಮಾಧ್ಯಮಕ್ಕೆ ಪರ್ಯಾಯವಾಗಿ ಕಾನೂನು ಕ್ಷೇತ್ರದಲ್ಲಿರುವವರಿಗೆ ಅಮೂಲ್ಯವಾದ ಕಾನೂನು ಸಂಪನ್ಮೂಲ ಒದಗಿಸಲಿದೆ. ಡಿಜಿಟಲ್ ರೂಪದಲ್ಲಿರುವುದರಿಂದ ವೆಚ್ಚವೂ ಕಡಿಮೆಯಾಗಲಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು ಐಎಲ್ಆರ್ ಪೋರ್ಟಲ್​ಗೆ https://hck.gov.in/ilrಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಮಾತೃಭಾಷೆ ಕಲಿಕೆ ಕಡ್ಡಾಯವಾಗಬೇಕೆಂದು ಪ್ರತಿಪಾದಿಸಿದ್ದ ಕುವೆಂಪು ಅಭಿಪ್ರಾಯಕ್ಕೆ ನನ್ನ ಸಹಮತ ಇದೆ; ಮುಖ್ಯ ನ್ಯಾ. ಅಂಜಾರಿಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.