ETV Bharat / state

ಕೆಪಿಟಿಸಿಎಲ್ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆಗೆ ಹೈಕೋರ್ಟ್ ಅನುಮತಿ - KPTCL Employees Union election

author img

By ETV Bharat Karnataka Team

Published : May 22, 2024, 10:53 PM IST

ಕೆಪಿಟಿಸಿಎಲ್​ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಗೆ ನಿಗದಿಯಾಗಿರುವ ಚುನಾವಣೆ ನಡೆಸಲು ಹೈಕೋರ್ಟ್​ ಅನುಮತಿ ನೀಡಿದೆ.

high-court
ಹೈಕೋರ್ಟ್ (ETV Bharat)

ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಇದೇ 23ರಂದು ನಿಗದಿಯಾಗಿರುವ ಚುನಾವಣೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ.

ಚುನಾವಣೆ ಪ್ರಕ್ರಿಯೆಗಳಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆಕ್ಷೇಪಿಸಿ ಆರ್. ಮುರಳೀಧರ ಸೇರಿದಂತೆ ಸಂಘದ 10 ಮಂದಿ ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ರಜಾಕಾಲದ ನ್ಯಾಯಪೀಠ ಈ ಆದೇಶ ಮಾಡಿದೆ.

ಅಲ್ಲದೇ, ಚುನಾವಣೆಯ ಫಲಿತಾಂಶವು ಅರ್ಜಿ ಕುರಿತು ಹೈಕೋರ್ಟ್ ಹೊರಡಿಸುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿದೆ.

ಒಮ್ಮೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ನಂತರ ಆ ಪ್ರಕ್ರಿಯೆಯಲ್ಲಿ ಯಾವುದೇ ಮಧ್ಯಪ್ರವೇಶ/ಹಸ್ತಕ್ಷೇಪ ಮಾಡಬಾರದು ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಆದಾಗ್ಯೂ ಚುನಾವಣೆಗೆ ಸಂಬಂಧಿಸಿದ ಯಾವುದೇ ನಿಯಮಗಳು ಉಲ್ಲಂಘನೆಯಾಗುತ್ತಿದೆ ಎಂಬ ಬಗ್ಗೆ ಅರ್ಜಿದಾರರಿಗೆ ಆಕ್ಷೇಪ ಇದ್ದಲ್ಲಿ ಮತ್ತು ಚುನಾವಣೆಯ ಕಾನೂನು ಬದ್ಧತೆಯನ್ನು ಚುನಾವಣೆಯ ಮುಗಿದ ನಂತರವೇ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬೇಕಿರುತ್ತದೆ. ಆದ್ದರಿಂದ ನಿಗದಿಯಂತೆ ನೌಕರರ ಸಂಘವು ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಬಹುದು ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಉದ್ದೇಶಿತ ಚುನಾವಣೆಯನ್ನು ಯಾವುದೇ ಆಧಾರವಿಲ್ಲದೇ ನಡೆಸಲಾಗುತ್ತಿದೆ. ಚುನಾವಣೆ ನಡೆಸಲು ನೌಕರರ ಸಂಘ ಅನುಸರಿಸುತ್ತಿರುವ ನಿಯಮಗಳಿಗೆ ಸಂಬಂಧಿಸಿದ ದಾವೆಯು ಬೆಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

ಸಂಘಕ್ಕೆ ಚುನಾವಣೆ ನಡೆಸುವುದಾದರೆ, ಚುನಾವಣಾ ಮಾದರಿ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಸಾರ ನಡೆಸಬೇಕು ಎಂದು 2024 ರ ಫೆ. 28 ರಂದು ಹೈಕೋರ್ಟ್ ಈ ಹಿಂದೆ ನಿರ್ದೇಶಿಸಿದೆ. ಹೀಗಿದ್ದರೂ ಚುನಾವಣೆಗೆ ಮೇ 18ರಂದು ವೇಳಾಪಟ್ಟಿ ಪ್ರಕಟಿಸಲಾಗಿದೆ ಮತ್ತು ಮೇ 23 ರಂದು ಚುನಾವಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ವಾದ ಆಲಿಸಿದ ಪೀಠ, ಚುನಾವಣೆ ನಡೆಸಲು ಅನುಮತಿ ನೀಡಿದೆ.

ಇದನ್ನೂ ಓದಿ : ಗೌಪ್ಯ ಮಾಹಿತಿಯನ್ನು ಎನ್‌ಆರ್‌ಎಐ ನೀಡದಂತೆ ಸಿಸಿಐಗೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ಸ್ವಿಗ್ಗಿ - SWIGGY MOVE TO HIGH COURT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.