ETV Bharat / state

ಖರೀದಿಸುವುದಾಗಿ ಕಾರು ಪಡೆದು ಮತ್ತೊಬ್ಬರಿಗೆ ಮಾರಾಟ : ಆರೋಪಿಗೆ ನಿರೀಕ್ಷಣಾ ಜಾಮೀನು - KTK HC ANTICIPATORY BAIL

author img

By ETV Bharat Karnataka Team

Published : May 22, 2024, 7:38 PM IST

ಕಾರು ಖರೀದಿಸುವುದಾಗಿ ಒಪ್ಪಂದ ಮಾಡಿಕೊಂಡು ಮತ್ತೊಬ್ಬರಿಗೆ ಮಾರಾಟ ಮಾಡಿ ಬಂಧನದ ಭೀತಿ ಎದುರಿಸುತ್ತಿರುವ ಆರೋಪಿಗೆ ಹೈಕೋರ್ಟ್​ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

High Court
ಹೈಕೋರ್ಟ್ (ETV Bharat)

ಬೆಂಗಳೂರು : ವ್ಯಕ್ತಿಯೊಬ್ಬರಿಂದ 9 ಲಕ್ಷಕ್ಕೆ ಟೊಯೋಟಾ ಅರ್ಬನ್ ಕ್ರೂಸರ್ ಕಾರು ಖರೀದಿಸುವುದಾಗಿ ಒಪ್ಪಂದ ಮಾಡಿಕೊಂಡು 25 ಸಾವಿರ ಮುಂಗಡ ಹಣ ಪಾವತಿಸಿ, ಕಾರು ಪಡೆದು ಮೂರನೇ ವ್ಯಕ್ತಿಗೆ ಮಾರಾಟ ಮಾಡಿ ಬಂಧನದ ಭೀತಿ ಎದುರಿಸುತ್ತಿದ್ದ ಆರೋಪಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ ಆದಿತ್ಯ ದೇವಾಡಿಗ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ಜಿ ಉಮಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಅಲ್ಲದೆ, ಆದೇಶದ 15 ದಿನಗಳೊಳಗೆ ಅರ್ಜಿದಾರರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಅರ್ಜಿದಾರ 2 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ಸಾಕ್ಷ್ಯಾಧಾರ ತಿರುಚಲು ಯತ್ನಿಸಬಾರದು. ಅಗತ್ಯವಿದ್ದಾಗೆಲ್ಲಾ ಅಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು. ಇದೇ ಮಾದರಿಯ ಅಪರಾಧದಲ್ಲಿ ಮತ್ತೆ ಭಾಗಿಯಾಗಬಾರದು ಎಂದು ತಿಳಿಸಿ ಜಾಮೀನು ಮಂಜೂರಾತಿಗೆ ಹೈಕೋರ್ಟ್ ಷರತ್ತು ವಿಧಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ನಮ್ಮ ಕಕ್ಷಿದಾರರು ಅಮಾಯಕರಾಗಿದ್ದು, ಕಾನೂನು ಪಾಲಿಸುವ ನಾಗರೀಕರಾಗಿದ್ದಾರೆ. ಅರ್ಜಿದಾರರು ದೂರುದಾರರ ಜತೆ ಟೊಯೊಟಾ ಅರ್ಬನ್ ಕ್ರೂಸರ್ ವಾಹನ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದರು. ಅದರ ಅನುಸಾರ 25000 ಮುಂಗಡ ಮೊತ್ತ ಪಾವತಿಸಲಾಗಿದ್ದು, ಬಾಕಿ ರೂ. 9,05,000 ಪಾವತಿಗೆ ಬಾಕಿ ಇದೆ ಎಂದು ಆರೋಪಿಸಲಾಗಿದೆ. ಆದರೆ ವಾಹನದ ಆರ್‌ಸಿ ಅರ್ಜಿದಾರರ ಹೆಸರಿಗೆ ವರ್ಗಾವಣೆಯಾಗಿಲ್ಲ. ಅರ್ಜಿದಾರರು ಯಾವುದೇ ಅಪರಾಧಗಳ ಎಸಗಿಲ್ಲ. ಸುಖಾಸುಮ್ಮನೆ ಅವರ ಮೇಲೆ ಆರೋಪ ಹೊರಿಸಲಾಗಿದೆ ಎಂದು ವಿವರಿಸಿದೆ.

ಅಲ್ಲದೆ, ಅರ್ಜಿದಾರರು ಹೆಚ್​ಡಿಎಫ್​ಸಿ ಬ್ಯಾಂಕ್ ಖಾತೆಯ ಮೂಲಕ ಬಾಕಿ ಮೊತ್ತ ಪಾವತಿಸುವುದಾಗಿ ತಿಳಿಸಿ ಹಣ ನೀಡಿಲ್ಲ ಎಂದು ಗೋಪಾಲ್ ಶೆಟ್ಟಿ ಎಂಬುವವರು ದೂರು ನೀಡಿದರು. ಇದು ಸಿವಿಲ್ ವ್ಯಾಜ್ಯಗಳ ಅಡಿ ಬರುವುದರಿಂದ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಬಳಿಕ ಇದೇ ವಿಚಾರವಾಗಿ ಖಾಸಗಿ ದೂರು ದಾಖಲಿಸಿದ್ದು, ವಿಚಾರಣಾ ನ್ಯಾಯಾಲಯವು ಎಫ್.ಐ.ಆರ್ ದಾಖಲಿಸುವಂತೆ ನಿರ್ದೇಶಿಸಿತ್ತು. ಈ ನಿಟ್ಟಿನಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅರ್ಜಿದಾರರು ಪ್ರಕರಣದ ಕುರಿತು ಎಲ್ಲ ಹಂತದ ತನಿಖೆಗೆ ಸಿದ್ಧರಿದ್ದು, ಅರ್ಜಿದಾರರಿಗೆ ಮಂಜೂರು ಮಾಡುವಂತೆ ನ್ಯಾಯಪೀಠವನ್ನು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ಪರ ವಕೀಲರು, ಅರ್ಜಿದಾರರ ಅಪರಾಧ ಎಸಗಿದ ಹಿನ್ನೆಲೆ ದೂರು ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಅರ್ಜಿದಾರರು ತನಿಖಾಧಿಕಾರಿ ಮುಂದೆ ಹಾಜರಾಗಿಲ್ಲ. ಅಲ್ಲದೇ ತನಿಖೆ ಇನ್ನೂ ಬಾಕಿ ಇದೆ. ಈಗ ನಿರೀಕ್ಷಣಾ ಜಾಮೀನು ನೀಡಿದಲ್ಲಿ ಅವರು ಎಂದಿಗೂ ತನಿಖಾಧಿಕಾರಿಯ ಮುಂದೆ ಹಾಜರಾಗದಿರಬಹುದು. ಪರಾರಿಯೂ ಆಗಬಹುದು ಅಥವಾ ಭವಿಷ್ಯದಲ್ಲಿ ಇದೇ ರೀತಿಯ ಅಪರಾಧಗಳನ್ನು ಮಾಡಬಹುದು. ಸಾಕ್ಷಿಗಳಿಗೆ ತೊಂದರೆ ನೀಡಬಹುದು. ಅಲ್ಲದೆ ಸಾಕ್ಷ್ಯ ನಾಶಕ್ಕೆ ಮುಂದಾಗಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ಜಾಮೀನು ನೀಡದಂತೆ ಮನವಿ ಮಾಡಿದರು.

ಇದನ್ನೂ ಓದಿ : ಬೆಂಗಳೂರಿನಲ್ಲಿ ವಾಹನ ನಿಲುಗಡೆ ನೀತಿ 2.0 ಪರಿಣಾಮಕಾರಿ ಜಾರಿಗೆ ಹೈಕೋರ್ಟ್ ಸೂಚನೆ - Parking Policy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.