ETV Bharat / state

ನಕಲಿ ಜಾತಿ ಪ್ರಮಾಣಪತ್ರ ಪಡೆದವರಿಗೆ ನೋಟಿಸ್‌ ನೀಡಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚನೆ - Fake Caste Certificates

author img

By ETV Bharat Karnataka Team

Published : Mar 22, 2024, 8:58 AM IST

ನಕಲಿ ಜಾತಿ ಪ್ರಮಾಣಪತ್ರಗಳನ್ನು ಪಡೆದವರಿಗೆ ನೋಟಿಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

High Court
ಹೈಕೋರ್ಟ್

ಬೆಂಗಳೂರು: ನಾಯಕ ಜನಾಂಗದ ಪರಿವಾರ ಮತ್ತು ತಳವಾರ ಉಪಪಂಗಡಗಳನ್ನು ಮಾತ್ರ ಎಸ್‌ಟಿ ವರ್ಗಕ್ಕೆ ಸೇರಿಸಲಾಗಿದೆ. ಆದರೆ ಪ್ರವರ್ಗ ಒಂದರಲ್ಲಿ ಬರುವ ಬೆಸ್ತರ ಉಪಜಾತಿಯಾದ ಪರಿವಾರ ಹಾಗೂ ತಳವಾರ ಬೋಯಾ ಉಪ ಪಂಗಡದವರಿಗೂ ಪರಿಶಿಷ್ಟ ವರ್ಗದ ನಕಲಿ ಜಾತಿ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಸಂಬಂಧಿಸಿದವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ರಾಜ್ಯ ಎಸ್‌ಸಿ-ಎಸ್‌ಟಿ ನಕಲಿ ಜಾತಿ ಪ್ರಮಾಣಪತ್ರಗಳ ತಡೆ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ.ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಹಾಗೂ ಪ್ರತಿವಾದಿಗಳ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ, ಅರ್ಜಿಯಲ್ಲಿ ಉಲ್ಲೇಖಿಸಲಾದ ನಕಲಿ ಜಾತಿ ಪ್ರಮಾಣಪತ್ರಗಳು ಹಾಗೂ ಇತರೆ ಅನರ್ಹರಿಗೆ ನೀಡಿದ್ದಾರೆ ಎನ್ನಲಾದ ಜಾತಿ ಪ್ರಮಾಣಪತ್ರಗಳ ಕುರಿತು ಸಂಬಂಧಿಸಿದವರಿಗೆ ಮಾ.27ರೊಳಗೆ ನೋಟಿಸ್ ನೀಡಿ ಆದಷ್ಟು ಶೀಘ್ರವಾಗಿ ಕ್ರಮ ಜರುಗಿಸಬೇಕು. ಆ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಸರ್ಕಾರದ ಪರ ವಿಶೇಷ ವಕೀಲ ಸಿ.ಜಗದೀಶ್‌ ಅವರಿಗೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಏ.2ಕ್ಕೆ ಮುಂದೂಡಿತು.

ಅರ್ಜಿದಾರರು ಬಹಳ ಗಂಭೀರವಾದ ವಿಷಯವನ್ನು ಕೋರ್ಟ್ ಮುಂದಿಟ್ಟಿದ್ದಾರೆ. ಜನರ ಹಿತಾಸಕ್ತಿ ರಕ್ಷಿಸುವ ಹೊಣೆ ಹೊತ್ತಿರುವ ಸರ್ಕಾರ, ಅರ್ಜಿದಾರರು ಆರೋಪಿಸಿರುವಂತೆ ನಕಲಿ ಜಾತಿ ಪ್ರಮಾಣಪತ್ರಗಳನ್ನು ಪಡೆದವರಿಗೆ ನೋಟಿಸ್ ನೀಡಿ, ತನಿಖೆ ನಡೆಸಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್, ಸಂವಿಧಾನಕ್ಕೆ ತಿದ್ದುಪಡಿ ತಂದು ನಾಯಕ ಜನಾಂಗದ ಉಪಪಂಗಡಗಳಾದ ಪರಿವಾರ ಮತ್ತು ತಳವಾರವನ್ನು ಎಸ್‌ಟಿ ವರ್ಗಕ್ಕೆ ಸೇರ್ಪಡೆ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಅಧಿಕಾರಿಗಳು ಪ್ರವರ್ಗ ಒಂದರಲ್ಲಿ ಬರುವ ಬೆಸ್ತರ ಉಪಜಾತಿಯಾದ ಪರಿವಾರ ಹಾಗೂ ತಳವಾರ ಬೋಯಾ ಉಪಪಂಗಡದವರಿಗೂ ಎಸ್‌ಟಿ ಜಾತಿ ಪ್ರಮಾಣಪತ್ರಗಳನ್ನು ವಿತರಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ: ಗ್ಯಾರಂಟಿಗಳ ಫಲದಿಂದ ನಾಡಿನ ಜನರು ನಮ್ಮ ಕೈ ಬಿಡಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah

ಆ ರೀತಿ 60ಕ್ಕೂ ಅಧಿಕ ನಕಲಿ ಜಾತಿ ಪ್ರಮಾಣಪತ್ರಗಳ ವಿವರಗಳನ್ನು ಅರ್ಜಿಯಲ್ಲಿ ಅಡಕ ಮಾಡಲಾಗಿದೆ. ನಕಲಿ ಜಾತಿ ಪ್ರಮಾಣಪತ್ರಗಳನ್ನು ಪಡೆದವರು ಶೈಕ್ಷಣಿಕ, ಔದ್ಯೋಗಿಕ ಲಾಭ ಪಡೆಯುತ್ತಿರುವುದಲ್ಲದೇ, ಚುನಾವಣೆಗಳಲ್ಲಿ ಎಸ್‌ಟಿಗೆ ಲಭ್ಯವಿರುವ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಇದರಿಂದ ಅರ್ಹರು ಸರ್ಕಾರಿ ಸೌಲಭ್ಯದಿಂದ ವಂಚಿತವಾಗುತ್ತಿರುವ ಜೊತೆಗೆ ಅವರಿಗೆ ಯಾವುದೇ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸಾಮಾಜಿಕ ನ್ಯಾಯ ಬುಡಮೇಲಾಗುತ್ತಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಕಾಫಿನಾಡಿನಲ್ಲಿ ಹುಲಿ, ಕಾಡಾನೆ ಹಾವಳಿ: 5 ಜಾನುವಾರು ಸಾವು, ಬೆಳೆ ನಾಶ - Wild Elephants Menace

ಇದಕ್ಕೆ ಉತ್ತರಿಸಿದ ಸರ್ಕಾರದ ವಿಶೇಷ ವಕೀಲ ಸಿ.ಜಗದೀಶ್, ಅರ್ಜಿದಾರರು ನಕಲಿ ಜಾತಿ ಪ್ರಮಾಣಪತ್ರದ ಬಗ್ಗೆ ದೂರು ನೀಡಿದ್ದರೆ ಆ ಬಗ್ಗೆ ಪರಿಶೀಲಿಸಿ ಆಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಅರ್ಜಿದಾರರು ದೂರು ನೀಡಿಲ್ಲ. ಸದ್ಯ ಚುನಾವಣೆ ನಡೆಯುತ್ತಿರುವುದರಿಂದ ಜಿಲ್ಲಾಧಿಕಾರಿಗಳು ಕೆಲಸದ ಒತ್ತಡದಲ್ಲಿದ್ದಾರೆ. ಆದರೂ ಸಹ ಕೋರ್ಟ್ ಸೂಚನೆಯಂತೆ ನಕಲಿ ಜಾತಿ ಪ್ರಮಾಣಪತ್ರ ವಿತರಿಸಲಾಗಿದೆ ಎನ್ನುವ ಬಗ್ಗೆ ಸಂಬಂಧಿಸಿದವರಿಗೆ ನೋಟಿಸ್ ನೀಡಿ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.