ETV Bharat / state

ಜಯಲಲಿತಾರ ಚಿನ್ನಾಭರಣಗಳ ಹಸ್ತಾಂತರಕ್ಕೆ ಹೈಕೋರ್ಟ್ ತಡೆ

author img

By ETV Bharat Karnataka Team

Published : Mar 5, 2024, 3:20 PM IST

Updated : Mar 5, 2024, 10:58 PM IST

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರು ಅಕ್ರಮವಾಗಿ ಗಳಿಸಿದ್ದ ಚಿನ್ನಾಭರಣಗಳ ಹಸ್ತಾಂತರಕ್ಕೆ ಹೈಕೋರ್ಟ್​ ತಡೆ ನೀಡಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು : ನಗರದ ವಿಶೇಷ ನ್ಯಾಯಾಲಯದ ಸುಪರ್ದಿಯಲ್ಲಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರು ಅಕ್ರಮವಾಗಿ ಗಳಿಸಿದ್ದ ಜಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ.

ಜೆ. ದೀಪಾ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಂ ನವಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಪ್ರಕರಣದ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಮಾ. 26ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಜಯಲಲಿತಾ ವಿರುದ್ದದ ಭ್ರಷ್ಟಾಚಾರ ಆರೋಪ ಸಂಬಂಧ ಸುಪ್ರೀಂಕೋರ್ಟ್​ನಿಂದ ತೀರ್ಪು ಬರುವ ಮುನ್ನವೇ ಅವರು ಮೃತರಾಗಿದ್ದರು. ಆದ ಕಾರಣ ಅವರನ್ನು ಆರೋಪ ಮುಕ್ತರು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದ್ದರಿಂದ, ಅರ್ಜಿದಾರರು ಜಯಲಲಿತಾರ ಕಾನೂನು ಬದ್ದ ವಾರಸುದಾರರಾಗಿದ್ದು, ಅವರ ಎಲ್ಲ ಚಿನ್ನಾಭರಣಗಳನ್ನು ಅರ್ಜಿದಾರರಿಗೆ ಹಸ್ತಾಂತರ ಮಾಡಬೇಕು ಎಂದು ಕೋರಿದರು.

ಈ ವಾದ ದಾಖಲಿಸಿಕೊಂಡ ನ್ಯಾಯಪೀಠ, ನಗರದ ವಿಶೇಷ ನ್ಯಾಯಾಲಯದಿಂದ ತಮಿಳುನಾಡು ಸರ್ಕಾರಕ್ಕೆ ನಾಳೆಯಿಂದ ಆಗಬೇಕಾಗಿದ್ದ ಚಿನ್ನಾಭರಣಗಳ ಹಸ್ತಾಂತರ ಪ್ರಕ್ರಿಯೆಗೆ ತಡೆ ನೀಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿದೆ.

ವಿಶೇಷ ನ್ಯಾಯಾಲಯದ ಆದೇಶವೇನು ? : ಆರ್‌ಟಿಐ ಕಾರ್ಯಕರ್ತ ಟಿ. ನರಸಿಂಹಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನಗರದ 36ನೇ ಸಿಟಿ ಸಿವಿಲ್​ ಮತ್ತು ಸೆಷನ್ಸ್​ ನ್ಯಾಯಾಲಯದ ನ್ಯಾಯಾಧೀಶರು, 2024ರ ಮಾರ್ಚ್​ 6 ಮತ್ತು 7ರಂದು ಜಯಲಲಿತಾರ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ದಿನಾಂಕ ನಿಗದಿ ಮಾಡಿತ್ತು.

ಅಲ್ಲದೆ, ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲು ಅಧಿಕೃತ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿದ್ದು, ತಮಿಳುನಾಡು ಸರ್ಕಾರದ ಗೃಹ ಇಲಾಖೆಯ ಪ್ರದಾನ ಕಾರ್ಯದರ್ಶಿ, ತಮಿಳುನಾಡು ಐಜಿಪಿ ಅವರೊಂದಿಗೆ ಬರಬೇಕು. ಈ ವೇಳೆ ಛಾಯಾಗ್ರಾಹಕರು, ವಿಡಿಯೋಗ್ರಾಫರ್​ ಮತ್ತು ಆರು ದೊಡ್ಡ ಪೆಟ್ಟಿಗೆ (ಟ್ರಂಕ್​) ಜತೆಗೆ ಅಗತ್ಯ ಭದ್ರತೆಯೊಂದಿಗೆ ಬಂದು ಚಿನ್ನಾಭರಣಗಳನ್ನು ಪಡೆದುಕೊಳ್ಳಬೇಕು. ಈ ಅಂಶವನ್ನು ತಮಿಳುನಾಡು ಡಿವೈಎಸ್​ಪಿ ಅವರು ತಮಿಳುನಾಡು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು ಎಂದು ಸೂಚಿಸಲಾಗಿತ್ತು.

ಏನೆಲ್ಲಾ ವಸ್ತುಗಳಿವೆ?: 7040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆ. ಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜೆರೇಟರ್, 10 ಟಿ.ವಿ. ಸೆಟ್ , 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್‌ ರೇಕಾರ್ಡರ್, 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್, 1,93,202 ರು. ನಗದು ಸೇರಿದಂತೆ ಹಲವು ವಸ್ತುಗಳು ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿತ್ತು.

ಇದನ್ನೂ ಓದಿ : ಜಯಲಲಿತಾರ ಚಿನ್ನಾಭರಣ ಪಡೆಯಲು 6 ಟ್ರಂಕ್​ಗಳೊಂದಿಗೆ ಬರುವಂತೆ ತಮಿಳುನಾಡು ಸರ್ಕಾರಕ್ಕೆ ಕೋರ್ಟ್​ ಸೂಚನೆ

Last Updated : Mar 5, 2024, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.