ETV Bharat / state

ಬಜೆಟ್​ 2024: ಪ್ರತಿ ಜಿಲ್ಲೆಯಲ್ಲಿ ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್‌ಗಳ ಸ್ಥಾಪನೆ

author img

By ETV Bharat Karnataka Team

Published : Feb 16, 2024, 12:25 PM IST

Updated : Feb 16, 2024, 2:18 PM IST

2024-25ನೇ ಸಾಲಿನ ಬಜೆಟ್​​ ಮಂಡನೆ ಆಗುತ್ತಿದ್ದು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

health department budget
ಆರೋಗ್ಯ ಇಲಾಖೆ ಬಜೆಟ್​

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು 2024-25ನೇ ಸಾಲಿನ ಬಜೆಟ್​​ ಮಂಡನೆ ಮಾಡುತ್ತಿದ್ದಾರೆ. 3,71, 383 ಕೋಟಿ ರೂ. ಮೊತ್ತದ ಬಜೆಟ್‌ ಇದಾಗಿದ್ದು, ಆರೋಗ್ಯ ಕ್ಷೇತ್ರಕ್ಕೂ ಸಂಪೂರ್ಣ ಗಮನ ಹರಿಸಿದ್ದಾರೆ.

  • ರಾಜ್ಯದಲ್ಲಿ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.
  • ಈಗಾಗಲೇ 15 ಜಿಲ್ಲೆಗಳಲ್ಲಿ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಉಡುಪಿ, ದಾವಣಗೆರೆ, ವಿಜಯಪುರ, ಮೈಸೂರು, ಮಂಡ್ಯ, ಧಾರವಾಡ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 187 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಮುಂದಿನ ಸಾಲಿನಲ್ಲಿ ಉಳಿದ 9 ಜಿಲ್ಲೆಗಳಲ್ಲಿಯೂ ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
  • ತಾಲೂಕು ಆಸ್ಪತ್ರೆಗಳಿಲ್ಲದ ಆನೇಕಲ್, ನೆಲಮಂಗಲ, ಹೊಸಕೋಟೆ, ಶೃಂಗೇರಿ, ಖಾನಾಪುರ, ಶಿರಹಟ್ಟಿ ಮತ್ತು ಯಳಂದೂರು ತಾಲೂಕುಗಳಲ್ಲಿ ಪ್ರಸಕ್ತ ಸಾಲಿನಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಗಳನ್ನು 280 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.
  • ಆರೋಗ್ಯ ಇಲಾಖೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ದುರಸ್ತಿ ಮತ್ತು ಉನ್ನತೀಕರಣಕ್ಕೆ 75 ಕೋಟಿ ರೂ.ಗಳ ಅನುದಾನ ನೀಡಲಾಗುವುದು.
  • ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ, ಮತ್ತಿತರೆ ಮೂಲಸೌಕರ್ಯ ಕಾಮಗಾರಿಗಳನ್ನು 150 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್​ ಭಾಷಣದಲ್ಲಿ ಘೋಷಿಸಿದರು.
  • ಗ್ರಾಮೀಣ ಪ್ರದೇಶದ ಜನರಿಗೆ 24x7 ತುರ್ತು ಆರೋಗ್ಯ ಸೇವೆಯನ್ನು ನೀಡಲು ಮುಂದಿನ 2 ವರ್ಷಗಳಲ್ಲಿ 350 ಕೋಟಿ ರೂ. ವೆಚ್ಚದಲ್ಲಿ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 15 ಸಮುದಾಯ ಆರೋಗ್ಯ ಕೇಂದ್ರಗಳನ್ನು ಮಾನವ ಸಂಪನ್ಮೂಲದೊಂದಿಗೆ ಕಾರ್ಯಗತಗೊಳಿಸಲಾಗುವುದು.
  • ಕಲ್ಯಾಣ ಕರ್ನಾಟಕ ಭಾಗದಲ್ಲಿ 46 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 221 ಕೋಟಿ ರೂ.ಗಳ ವೆಚ್ಚದಲ್ಲಿ ಕೆಕೆಆರ್​ಡಿಬಿ ಮೂಲಕ ಸ್ಥಾಪನೆ ಮಾಡಲಾಗುವುದು.
  • ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಲು 6,493 ಆರೋಗ್ಯ ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 199 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಟ್ಟಡ ಕಾಮಗಾರಿಗಾಗಿ 130 ಕೋಟಿ ರೂ. ಅನುದಾನ ನೀಡಲಾಗುವುದು.
  • ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿರುವ ಮಕ್ಕಳ ತಜ್ಞರು ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್ ತಜ್ಞ, ಮತ್ತಿತರೆ ತಜ್ಞ ವೈದ್ಯರುಗಳ ಸೇವೆಯನ್ನು ಟೆಲಿ-ಐಸಿಯು ವ್ಯವಸ್ಥೆಯ ಮೂಲಕ ತಾಲೂಕು ಆಸ್ಪತ್ರೆಗಳಿಗೆ ಒದಗಿಸಲಾಗುವುದು.
  • ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಮತ್ತು ನಿರಂತರ ಅನುಸರಣೆಗಾಗಿ ಬಹುತೇಕ ಜಿಲ್ಲೆಗಳಲ್ಲಿ ಕಿಮೋಥೆರಪಿ ಚಿಕಿತ್ಸಾ ಕೇಂದ್ರಗಳು ಲಭ್ಯವಿರದ ಕಾರಣ, ಸರ್ಕಾರ 20 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಒಂದು ಡೇ - ಕೇರ್ ಕಿಮೋಥೆರಪಿ ಕೇಂದ್ರವನ್ನು ಸ್ಥಾಪಿಸಲಾಗುವುದು.
  • ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು 20 ಜಿಲ್ಲಾಸ್ಪತ್ರೆಗಳಲ್ಲಿ Digital Mammography ಯಂತ್ರಗಳನ್ನು ಮತ್ತು ಕೆ.ಸಿ. ಜನರಲ್ ಆಸ್ಪತ್ರೆ ಬೆಂಗಳೂರು ಹಾಗೂ ಉಡುಪಿ, ಕೋಲಾರ ಮತ್ತು ದಾವಣಗೆರೆ ಜಿಲ್ಲಾ ಆಸ್ಪತ್ರೆಗಳಿಗೆ Colposcopy ಉಪಕರಣಗಳ ಖರೀದಿಗೆ ಒಟ್ಟಾರೆಯಾಗಿ 21 ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು.
  • ರಾಜ್ಯದ ಜಿಲ್ಲಾ ಆಸ್ಪತ್ರೆಗಳನ್ನು ಅಗ್ನಿ ಅವಘಡಗಳಿಂದ ರಕ್ಷಿಸಲು 13 ಜಿಲ್ಲಾ ಆಸ್ಪತ್ರೆಗಳಲ್ಲಿ ಅಗ್ನಿಶಾಮಕ ವ್ಯವಸ್ಥೆಯನ್ನು 6 ಕೋಟಿ ರೂ.ಗಳ ವೆಚ್ಚದಲ್ಲಿ ಅಳವಡಿಸಲಾಗುವುದು.
  • 2025 ರೊಳಗೆ ಕ್ಷಯರೋಗ ನಿರ್ಮೂಲನೆಗೊಳಿಸಲು 87 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗ ತಪಾಸಣೆಗಾಗಿ True-Nat Machines ಖರೀದಿಗಾಗಿ 6 ಕೋಟಿ ರೂ. ಗಳ ಅನುದಾನ ಒದಗಿಸಲಾಗುವುದು.
  • ಕಲ್ಯಾಣ ಕರ್ನಾಟಕದಲ್ಲಿ Haemophilia & Thalassemia ರೋಗಿಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯಗಳ ಕೊರತೆ ಇರುವುದರಿಂದ ಕಲಬುರಗಿ ಮತ್ತು ಕೊಪ್ಪಳದ ICDT ಕೇಂದ್ರಗಳ ಬಲವರ್ಧನೆಗೆ 7 ಕೋಟಿ ರೂ.ಗಳನ್ನು ಒದಗಿಸಲಾಗುವುದು.
  • ಬೆಂಗಳೂರಿನಲ್ಲಿ ಬಡಜನತೆಗೆ ಉಚಿತ ಪ್ರಯೋಗಾಲಯ ಸೇವೆಯನ್ನು ಒದಗಿಸಲು Hub and Spoke ಮಾದರಿಯಲ್ಲಿ 430 ಪ್ರಯೋಗಾಲಯಗಳ ಸ್ಥಾಪನೆಗೆ ಮುಂದಿನ ಎರಡು ವರ್ಷಗಳಲ್ಲಿ 20 ಕೋಟಿ ರೂ. ಗಳ ಅನುದಾನ ನೀಡಲಾಗುವುದು.
  • ಮಧುಮೇಹ ನಿಯಂತ್ರಣಕ್ಕಾಗಿ ಸಾರ್ವಜನಿಕರಿಗೆ ಆಯುಷ್ ಚಿಕಿತ್ಸೆ ನೀಡಲು ರಾಜ್ಯದ ನಾಲ್ಕು ವಿಭಾಗಗಳಲ್ಲಿ ತಲಾ ಒಂದು ಆಯುರ್ವೇದ ಮಧುಮೇಹ ಘಟಕವನ್ನು ಸ್ಥಾಪಿಸಲಾಗುವುದು.
  • ಕೋವಿಡ್-19 ಸಾಂಕ್ರಾಮಿಕ ರೋಗದ ನಿವಾರಣೆ ಹಾಗೂ ತಡೆಗಟ್ಟುವಿಕೆ ಸಂಬಂಧವಾಗಿ 2021ರಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿರುವ ವರದಿಯಲ್ಲಿನ ಗಂಭೀರವಾದ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ವಿಚಾರಣಾ ಆಯೋಗವನ್ನು ನೇಮಿಸಿದೆ. ಆಯೋಗವು ನೀಡುವ ವರದಿಯನ್ನಾಧರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ವೈದ್ಯಕೀಯ ಶಿಕ್ಷಣ:

  • ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಉನ್ನತೀಕರಣ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ.
  • ವೈದ್ಯಕೀಯ ಕಾಲೇಜು ನಿರ್ಮಾಣ, ಉಪಕರಣ ಖರೀದಿಗೆ 400 ಕೋಟಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೆ 130 ಕೋಟಿ ರೂ. ಒದಗಿಸಲಾಗುವುದು.
  • ಕಲಬುರಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ಘಟಕವನ್ನು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ತಾಂತ್ರಿಕ ನೆರವಿನೊಂದಿಗೆ ಸ್ಥಾಪನೆ ಮಾಡಲಾಗುವುದು.
  • ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 114 ಮಾಡ್ಯುಲಾರ್ ಒಟಿ ನಿರ್ಮಾಣಕ್ಕೆ 177 ಕೋಟಿ ರೂ. ಒದಗಿಸಲಾಗುವುದು.
  • ಮೈಸೂರಿನಲ್ಲಿರುವ 40 ಹಾಸಿಗೆ ಸಾಮರ್ಥ್ಯದ Nephro-Urology ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಉನ್ನತೀಕರಣ ಮಾಡಲಾಗುವುದು.
  • ವೈದ್ಯಕೀಯ ಸಂಸ್ಥೆಗಳಲ್ಲಿ 64 ಅನಸ್ತೇಷಿಯಾ ವರ್ಕ್ ಸ್ಟೇಷನ್ ಖರೀದಿಗೆ 34 ಕೋಟಿ ರೂ. ಇಡಲಾಗುವುದು.
  • ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಪಾಯಕಾರಿ ಸಾಂಕ್ರಾಮಿಕ ರೋಗಗಳು ಮತ್ತು ವೈರಲ್ ಸೋಂಕು ಪತ್ತೆಗೆ ವೈರಲ್ ರಿಸರ್ಚ್ ಅಂಡ್ ಡಯಾಗ್ನೋಸ್ಟಿಕ್ ಲ್ಯಾಬ್ ಸ್ಥಾಪನೆ ಮಾಡಲಾಗುವುದು.
  • ಮೈಸೂರು ಕೆಆರ್ ಆಸ್ಪತ್ರೆ ಆವರಣದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೊರರೋಗಿ ಕಟ್ಟಡ ನಿರ್ಮಾಣ ಮಾಡಲಾಗುವುದು.
  • ಗದಗ, ಕೊಪ್ಪಳ ಮತ್ತು ಚಾಮರಾಜನಗರದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳು ನಿರ್ಮಾಣವಾಗಿದ್ದು, ಈ ಆಸ್ಪತ್ರೆಗಳಿಗೆ ಅವಶ್ಯವಿರುವ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳ ಖರೀದಿಗಾಗಿ 150 ಕೋಟಿ ರೂ. ಅನುದಾನ ಇಡಲಾಗುವುದು.
  • ಬೆಂಗಳೂರಿನ ನೆಫ್ರೋ-ಯುರಾಲಜಿ ಸಂಸ್ಥೆಯ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ 20 ಕೋಟಿ ರೂ.ಗಳ ವೆಚ್ಚದಲ್ಲಿ ರೋಬೋಟಿಕ್ ಯಂತ್ರದ ಮೂಲಕ ಉತ್ತಮ ಶಸ್ತ್ರಚಿಕಿತ್ಸೆಯನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು.
  • ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ Cathlab ಸೌಲಭ್ಯದೊಂದಿಗೆ Super Speciality Cardiac Unit ಅನ್ನು 10 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.
  • ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಪಿಪಿ ಮಾದರಿಯಲ್ಲಿ Cardiac Unit ಪ್ರಾರಂಭ ಮಾಡಲಾಗುವುದು.
  • ರಾಜ್ಯದಲ್ಲಿ ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಹ್ಯೂಮನ್​ ಮಿಲ್ಕ್ ಬ್ಯಾಂಕ್​ ಘಟಕಗಳನ್ನು ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ರಾಯಚೂರು, ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಹೊಸ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು.
  • ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಪಾಯಕಾರಿ ಸಾಂಕ್ರಾಮಿಕ ರೋಗಗಳು ಮತ್ತು ವೈರಲ್ ಸೋಂಕುಗಳನ್ನು ಪತ್ತೆ ಹಚ್ಚಲು Viral Research & Diagnostic Laboratory (VRDL) ಸ್ಥಾಪನೆ ಮಾಡಲಾಗುವುದು.
  • ಸಾರ್ವಜನಿಕರ ಎಲ್ಲಾ ಆರೋಗ್ಯ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುವ ಸಂಬಂಧ ಡಿಜಿಟಲ್ ಹೆಲ್ತ್ ಸೊಸೈಟಿಯನ್ನು ಆರಂಭಿಸಲು ಈಗಾಗಲೇ ಕ್ರಮವಹಿಸಲಾಗಿರುತ್ತದೆ. ಇದರಡಿಯಲ್ಲಿ ಒಂದು Health Repository ಯನ್ನು ಸೃಜಿಸಿ ಸಾರ್ವಜನಿಕರ ಚಿಕಿತ್ಸಾ ಮಾಹಿತಿಯು ಒಂದೇ ಮೂಲದಿಂದ ಎಲ್ಲಾ ಆಸ್ಪತ್ರೆಗಳು ಮತ್ತು ವೈದ್ಯರಿಗೆ ಲಭ್ಯವಾಗುವಂತೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುವುದನ್ನು ಮತ್ತು ಚಿಕಿತ್ಸಾ ಸಮಯವನ್ನು ಸ್ವಯಂಚಾಲಿತವಾಗಿ ನಿಗದಿಪಡಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು.
  • ಚಿತ್ರದುರ್ಗ ಜಿಲ್ಲೆಯಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು 500 ಕೋಟಿ ರೂ.ಗಳ ವೆಚ್ಚದಲ್ಲಿ 2023-24ನೇ ಸಾಲಿನಿಂದ 150 ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಪ್ರಾರಂಭಿಸಲಾಗಿರುತ್ತದೆ. ವೈದ್ಯಕೀಯ ಕಾಲೇಜಿನ ಕಟ್ಟಡ, ವಿದ್ಯಾರ್ಥಿ ವಸತಿ ನಿಲಯ, ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು.

ಇದನ್ನೂ ಓದಿ: ರಾಜಸ್ವ ಹೆಚ್ಚಿಸಿಕೊಳ್ಳಲು ಮದ್ಯಪ್ರಿಯರಿಗೆ ಬಿಗ್​ ಶಾಕ್​​ ನೀಡಿದ ರಾಜ್ಯ ಸರ್ಕಾರ

Last Updated : Feb 16, 2024, 2:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.