ETV Bharat / state

ಕೋಲಾರ ಕಾಂಗ್ರೆಸ್​ನಲ್ಲಿ ರಾಜಕೀಯ ಬೆಳವಣಿಗೆ: ಜೆಡಿಎಸ್​ ಅಭ್ಯರ್ಥಿ ಘೋಷಣೆ ಮುಂದೂಡಿಕೆಗೆ ಕಾರಣ ಎಂದ ಕುಮಾರಸ್ವಾಮಿ - Lok Sabha Election 2024

author img

By ETV Bharat Karnataka Team

Published : Mar 27, 2024, 8:58 PM IST

ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಘೋಷಣೆ ಸಂಬಂಧ ಪಕ್ಷದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಅಭ್ಯರ್ಥಿ ಆಯ್ಕೆ ವಿಚಾರವಾಗಿ ಶಾಸಕರೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕಾಂಗ್ರೆಸ್​ನಲ್ಲಿ ಈ ರಾಜಕೀಯ ಬೆಳವಣಿಗೆಯ ಕಾರಣದಿಂದ ನಮ್ಮ ಜೆಡಿಎಸ್​ ಪಕ್ಷದ ಅಭ್ಯರ್ಥಿಯ ಘೋಷಣೆ ಮುಂದೂಡಿಕೆ ಮಾಡಿದ್ದೇವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

HD Kumaraswamys reaction on Announcement of JDS candidate for Kolar Lok Sabha constituency
ಜೆಡಿಎಸ್​ ಅಭ್ಯರ್ಥಿಯ ಘೋಷಣೆ ಮುಂದೂಡಿಕೆಗೆ ಕಾರಣ ಎಂದ ಕುಮಾರಸ್ವಾಮಿ

ಬೆಂಗಳೂರು: ಕೋಲಾರ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕಾಂಗ್ರೆಸ್‌ನಲ್ಲಿ ಹಲವು ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಹೀಗಾಗಿ ನಾವು ಅಭ್ಯರ್ಥಿಯ ಅಧಿಕೃತ ಘೋಷಣೆ ಮುಂದೂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಜೆಪಿ ನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವು ಯಾರನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ನಮ್ಮಲ್ಲಿ ಎರಡು ಪಂಗಡದ ಅಭ್ಯರ್ಥಿಗಳಿದ್ದಾರೆ. ಪಕ್ಷದಲ್ಲಿ ಶಿಸ್ತಿನಿಂದ ಇರುವವರ ಹೆಸರನ್ನು ಘೋಷಣೆ ಮಾಡುತ್ತೇವೆ. ಯಾವುದೇ ಗೊಂದಲ ಇಲ್ಲ. ಇದೇ ವೇಳೆ, ಕೋಲಾರ ರಾಜಕೀಯದ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಅವರ (ಕಾಂಗ್ರೆಸ್​) ಒಳಜಗಳದಿಂದ ನಮಗೆ ಲಾಭವಾಗಲಿದೆ ಎಂದು ಹೇಳಿದರು.

ನನಗೆ ಸುಮಲತಾ ಶತ್ರುವಲ್ಲ: ಅಲ್ಲದೇ, ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಮಾಡಿಕೊಂಡಿದ್ದೇವೆ. ಜೆಡಿಎಸ್‌ ವರಿಷ್ಠ ಹೆಚ್.ಡಿ.ದೇವೇಗೌಡರು ಎಲ್ಲ ಕ್ಷೇತ್ರಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಅವರು ನನಗೆ ಶತ್ರುವಲ್ಲ. ಅಂಬರೀಶ್‌ ಬದುಕಿದ್ದಾಗ ಅವರ ಮನೆಯಲ್ಲಿ ಜತೆಯಾಗಿ ಊಟ ಮಾಡಿದ್ದೇವೆ. ಆಗ ಸುಮಲತಾ ಅವರೇ ಊಟ ಬಡಿಸಿದ್ದಾರೆ. ಯಾವುದನ್ನು ಸಾಧಿಸಿಕೊಂಡು ಹೋಗುವ ಅವಶ್ಯಕತೆ ಇಲ್ಲ. ರಾಜಕೀಯ ಸನ್ನಿವೇಶ ಸಂಘರ್ಷವಾಗಿದೆ. ರಾಮ - ಆಂಜನೇಯ ಯುದ್ಧವಾಗಿದೆ. ನಾವು ಹುಲುಮಾನವರು. ಸಮಯ ಬಂದಾಗ ಸುಮಲತಾ ಅವರ ಜೊತೆ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಸ್ಪಷ್ಪಪಡಿಸಿದರು.

ಕೋಟಾ ಶ್ರೀನಿವಾಸ ಪೂಜಾರಿ ಭೇಟಿ: ಮತ್ತೊಂದೆಡೆ, ಉಡುಪಿ - ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ, ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಚುನಾವಣಾ ಪ್ರಚಾರಕ್ಕೆ ಆಗಮಿಸುವಂತೆ ಹೆಚ್​ಡಿಕೆ ಅವರನ್ನು ಕೋರಿದ್ದು, ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪರ್ಧಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡೋಣ. ಚುನಾವಣಾ ಪ್ರಚಾರಕ್ಕೆ ಬರುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.

ರಾಜ್ಯದಲ್ಲಿ ಈ ಬಾರಿ ಲೋಕಸಭೆ ಚುನಾವಣೆಗೆ ಜೆಡಿಎಸ್​ - ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿ ಭಾಗವಾಗಿ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳು ಬಿಜೆಪಿಗೆ, 3 ಕ್ಷೇತ್ರಗಳು ಜೆಡಿಎಸ್​ಗೆ ಹಂಚಿಕೆ ಮಾಡಲಾಗಿದೆ. ಈಗಾಗಲೇ ಬಿಜೆಪಿ ತನ್ನ ಪಾಲಿನ ಎಲ್ಲ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಮತ್ತೊಂದೆಡೆ, ಹಾಸನ, ಮಂಡ್ಯ, ಕೋಲಾರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಡಲಾಗಿದೆ. ಮಂಡ್ಯದಲ್ಲಿ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡಲು ನಿರ್ಧರಿಸಿದ್ಧಾರೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಮತ್ತೆ ಕಣಕ್ಕೆ ಇಳಿಯಲಿದ್ದಾರೆ. ಕೋಲಾರ ಕ್ಷೇತ್ರಕ್ಕೆ ಮಾತ್ರ ಜೆಡಿಎಸ್ ತನ್ನ​ ಅಭ್ಯರ್ಥಿಯನ್ನು ಘೋಷಿಸಬೇಕಿದೆ.

ಇದನ್ನೂ ಓದಿ: ಬಿಜೆಪಿ ಹಾಗೂ ಜೆಡಿಎಸ್ ಘಟಕದ ಸಮನ್ವಯ ಸಮಿತಿ ಮೊದಲ ಸಭೆ; ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.