ETV Bharat / state

ಹಾವೇರಿ ರೈತನ ವಿನೂತನ ಕೃಷಿ ಪ್ರಯೋಗ: ನಿತ್ಯವೂ 2 ಸಾವಿರಕ್ಕಿಂತ ಹೆಚ್ಚು ಆದಾಯ ಗಳಿಕೆ - Successfull Story of Farmer

author img

By ETV Bharat Karnataka Team

Published : Mar 26, 2024, 3:42 PM IST

Updated : Mar 26, 2024, 4:54 PM IST

ನುಗ್ಗೆಗಿಡ ಮಾತ್ರವಲ್ಲದೇ ಅವುಗಳ ಮಧ್ಯದಲ್ಲಿ ಅಲಸಂದೆ, ಬದನೆಕಾಯಿ ಬೆಳೆಗಳನ್ನೂ ಹಾಕಿ, ಅವುಗಳಿಂದಲೂ ರೈತ ಸುರೇಶ್​ ಛಲವಾದಿ ಉತ್ತಮ ಲಾಭ ಪಡೆದಿದ್ದಾರೆ.

Haveri farmer grows 3000 drumstick plants on 4 acres of land and harvests a quintal daily
4 ಎಕರೆ ಜಮೀನಿನಲ್ಲಿ 3000 ನುಗ್ಗೆಗಿಡ ಬೆಳೆದು ಪ್ರತಿನಿತ್ಯ ಕ್ವಿಂಟಾಲ್​ ಫಸಲು ತೆಗೆಯುವ ಹಾವೇರಿ ರೈತ

ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಮೂರು ಸಾವಿರ ನುಗ್ಗೆ ಗಿಡಗಳನ್ನು ಬೆಳೆದಿರುವ ಹಾವೇರಿ ರೈತ

ಹಾವೇರಿ: ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಮೂರು ಸಾವಿರ ನುಗ್ಗೆ ಗಿಡಗಳನ್ನು ಬೆಳೆದಿರುವ ಹಾವೇರಿ ರೈತರೊಬ್ಬರು ಉತ್ತಮ ಫಸಲು ಪಡೆಯುತ್ತಿದ್ದಾರೆ. ಹಾವೇರಿಯ ಗಣಜೂರಿನ ಸುರೇಶ್​ ಛಲವಾದಿ ಅವರು ನುಗ್ಗೆ ಗಿಡ ಹಾಕಿದ ಏಳು ತಿಂಗಳಿಗೆ ಫಸಲು ಪಡೆಯಲಾರಂಭಿಸಿದ್ದು, ನಿತ್ಯ ಕ್ವಿಂಟಾಲ್​ವರೆಗೆ ನುಗ್ಗೆಕಾಯಿ ಕೊಯ್ದು ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ.

"ಇದರಿಂದ ಹಲವು ಉಯೋಗವಿದೆ. ಈ ನುಗ್ಗೆ ಗಿಡವನ್ನು ಒಮ್ಮೆ ನೆಟ್ಟರೆ ಮೂರು ವರ್ಷಗಳ ಕಾಲ ಫಸಲು ನೀಡುತ್ತದೆ. ಆರಂಭದಲ್ಲಿ ಗಿಡವೊಂದು ಐದು ಕೆಜಿವರೆಗೆ ಫಸಲು ನೀಡುತ್ತದೆ. ಎರಡನೇಯ ವರ್ಷದಲ್ಲಿ 15 ಕೆಜಿ ಹಾಗೂ ಮೂರನೇಯ ವರ್ಷದಲ್ಲಿ 20 ಕೆಜಿವರೆಗೆ ಫಸಲು ನೀಡುತ್ತದೆ. ಮತ್ತೆ ನುಗ್ಗೆಕಾಯಿ ತಪ್ಪಲು ಒಣಗಿದ ನಂತರ ಜಮೀನಿಗೆ ಗೊಬ್ಬರವಾಗುತ್ತದೆ. ಹತ್ತಿ, ಗೋವಿನಜೋಳದಂತೆ ಪ್ರತೀ ವರ್ಷ ಬಿತ್ತನೆ ಮಾಡಬೇಕು, ಮಾರಾಟ ಮಾಡಬೇಕು, ಗೊಬ್ಬರ ಹಾಕಬೇಕು, ಕ್ರಿಮಿನಾಶಕ ಸಿಂಪಡನೆ ಮಾಡಬೇಕು ಎನ್ನುವ ಜಂಜಾಟವಿಲ್ಲ. ಸದ್ಯ ಕ್ವಿಂಟಾಲ್​ಗೆ ಮಾರುಕಟ್ಟೆಯಲ್ಲಿ 2,200 ರೂಪಾಯಿ ದರವಿದ್ದು, ಸೀಸನ್ ಸಮಯದಲ್ಲಿ ಏಳು ಸಾವಿರ ರೂ ದಾಟುತ್ತದೆ" ಎನ್ನುತ್ತಾರೆ ಸುರೇಶ್​.

Drum Stick Farm
ನುಗ್ಗೆಕಾಯಿ ತೋಪು

ಸುರೇಶ್​ ಅವರು ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಭಾಗ್ಯ ನುಗ್ಗೆಗಿಡಗಳನ್ನು ಹಾಕಿದ್ದಾರೆ. ನುಗ್ಗೆಗಿಡದ ನಡುವೆ ಹಾಕಿದ್ದ ಅಲಸಂದೆಯಿಂದಲೇ 70 ಸಾವಿರ ರೂಪಾಯಿ ಆದಾಯ ಪಡೆದಿದ್ದಾರೆ. ಸದ್ಯ ನುಗ್ಗೆಗಿಡದ ಮಧ್ಯದಲ್ಲಿ ಬದನೆಕಾಯಿ ಬೆಳೆದಿದ್ದು, ಇದರಿಂದ ನುಗ್ಗೆಗಿಡಕ್ಕೆ ಮಾಡಿರುವ ಖರ್ಚು ತಗೆಯುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ. ಇನ್ನು ನುಗ್ಗೆಕಾಯಿ ಮಾರಿ ಬಂದ ಹಣದಲ್ಲಿ ಕೂಲಿ ಕಾರ್ಮಿಕರ ಖರ್ಚು ನಿರ್ವಹಣೆ ವೆಚ್ಚ ತೆಗೆದರೆ, ಉಳಿದಿದ್ದೆಲ್ಲ ಲಾಭವೇ.

"ಜಮೀನಿನಲ್ಲಿ ಕೊಂಬೆಗಳು ನೆಲಕ್ಕೆ ಬಾಗುವಷ್ಟು ಗಿಡಗಳಲ್ಲಿ ಕಾಯಿಗಳು ಬಿಟ್ಟಿವೆ. ಆದರೆ ಅಧಿಕ ಇಳುವರಿಯ ಸಮಯದಲ್ಲಿ ದರ ಕಡಿಮೆ ಇರುತ್ತದೆ. ಕಡಿಮೆ ಇಳುವರಿ ಇರುವ ವೇಳೆ ದರ ಅಧಿಕವಾಗಿರುತ್ತೆ. ಗಿಡ ಬೆಳೆದು ಏಳು ತಿಂಗಳಿಗೆ ಫಸಲು ಬಿಡುವ ನುಗ್ಗೆಕಾಯಿ ನಿರಂತರವಾಗಿ ಮೂರು ತಿಂಗಳು ಕಾಯಿ ಬಿಡುತ್ತದೆ. ಗಿಡದಿಂದ ಗಿಡಕ್ಕೆ ಆರು ಅಡಿ ಮತ್ತು ಸಾಲಿನಿಂದ ಸಾಲಿಗೆ 10 ಅಡಿ ಅಂತರಲ್ಲಿ ನುಗ್ಗೆಗಿಡಗಳನ್ನು ನೆಡಲಾಗಿದೆ. ಬಾಗಲಕೋಟೆಯ ತೋಟಗಾರಿಕಾ ಇಲಾಖೆಯಿಂದ ಸಸಿ ತಂದು ಇಲ್ಲಿ ನಾಟಿ ಮಾಡಲಾಗಿದೆ. ಇನ್ನು ನುಗ್ಗೆಕಾಯಿ ಅಷ್ಟೇ ಅಲ್ಲದೆ ನುಗ್ಗೆಸೊಪ್ಪು ಸಹ ಮಾರಾಟವಾಗುತ್ತದೆ. ಆದರೆ, ಸದ್ಯ ಗಿಡದಲ್ಲಿ ಬಿಟ್ಟಿರುವ ನುಗ್ಗೆಕಾಯಿ ಮಾರಿದರೇ ಸಾಕು" ಎನ್ನುತ್ತಾರೆ ಸುರೇಶ.

ಸುರೇಶ್​ ಅವರ ಜೊತೆಗೆ ಯುವ ರೈತ ಮಂಜುನಾಥ್​ ಎನ್ನುವವರು ತೋಟ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಗೋವಾದಲ್ಲಿರುವ ಅಂಗಡಿಯನ್ನು ಬಿಟ್ಟು ಬಂದಿರುವ ಮಂಜುನಾಥ್​ ಅವರು ಸುರೇಶ್​ ಅವರ ಜೊತೆಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

"ಸುರೇಶ್​ ಅವರು ಪ್ರಥಮ ಬಾರಿಗೆ ನುಗ್ಗೆಕಾಯಿ ಬೆಳೆದಿದ್ದು, ಮುಂದೆ ಏನಾಗುತ್ತದೆ ನೋಡಬೇಕು. ಸದ್ಯ ಸುರೇಶ್​ ಅವರು ಹಾವೇರಿ ಮಾರುಕಟ್ಟೆಗೆ ನುಗ್ಗೆಕಾಯಿ ಮಾರಾಟ ಮಾಡುತ್ತಿದ್ದಾರೆ. ಅಧಿಕ ಇಳುವರಿ ಬಂದರೆ ಬೆಳಗಾವಿ​ ಮಾರುಕಟ್ಟೆಗೆ ಕೂಡ ನುಗ್ಗೆಕಾಯಿ ಮಾರಾಟ ಮಾಡಲಾಗುತ್ತದೆ. ಸದ್ಯ ಕ್ಷಿಂಟಾಲ್​ ನುಗ್ಗೆಕಾಯಿಗೆ 2,200 ಇದ್ದು, ಮುಂದಿನ ದಿನಗಳಲ್ಲಿ ದರ ಏರುವ ವಿಶ್ವಾಸವಿದೆ. ಈಗ ಇರುವ 2,200 ರೂಪಾಯಿಗೆ ಮಾರಾಟ ಮಾಡಿದರೂ ನಷ್ಟವಿಲ್ಲ. ಆದರೆ, ದರ ಏರಿಕೆಯಾದರೆ ಲಾಭದ ಪ್ರಮಾಣ ಹೆಚ್ಚಾಗುತ್ತದೆ" ಎಂದು ಮಂಜುನಾಥ್​ ಹೇಳಿದರು.

ಇದನ್ನೂ ಓದಿ: ನಾಲ್ಕು ಎಕರೆಯಲ್ಲಿ 40 ಕ್ವಿಂಟಾಲ್ ಬೆಳ್ಳುಳ್ಳಿ; ಬರದಲ್ಲೂ ಬಂಗಾರದ ಬೆಳೆ ಪಡೆದ ಹಾವೇರಿಯ ಸಾವಯವ ಕೃಷಿಕರು

Last Updated : Mar 26, 2024, 4:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.