ETV Bharat / state

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣಗೆ ನಾಳೆ ಮಧ್ಯಾಹ್ನದವರೆಗೂ ಮಾತ್ರ ಷರತ್ತುಬದ್ದ ಮಧ್ಯಂತರ ಜಾಮೀನು ಮಂಜೂರು - Interim bail to HD Revanna

author img

By ETV Bharat Karnataka Team

Published : May 16, 2024, 7:34 PM IST

Updated : May 16, 2024, 7:59 PM IST

ಹಾಸನದ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಅವರಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ನಾಳೆ ಮಧ್ಯಾಹ್ನದವರಿಗೂ ಮಾತ್ರವೇ ಮಧ್ಯಂತರ ಜಾಮೀನು ನೀಡಿದೆ.

Interim bail to JDS MLA HD Revanna
ಎಚ್‌.ಡಿ.ರೇವಣ್ಣಗೆ ಮಧ್ಯಂತರ ಜಾಮೀನು ನೀಡಿದ ಕೋರ್ಟ್ (ETV Bharat)

ಬೆಂಗಳೂರು: ಮೈಸೂರಿನ ಕೆ.ಆರ್‌.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಅವರಿಗೆ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿಯೂ ಮಧ್ಯಂತರ ಜಾಮೀನು ದೊರೆತಿದೆ‌. ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ನಾಳೆ ಮಧ್ಯಾಹ್ನದವರಿಗೆ ಮಾತ್ರ ಷರತ್ತುಬದ್ದ ಜಾಮೀನು ನೀಡಿ, ನಾಳೆಗೆ ವಿಚಾರಣೆ ಮುಂದೂಡಿತು.

ತಮ್ಮ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ರೇವಣ್ಣ, ಜಾಮೀನು ಸಹಿತ ಪ್ರಕರಣ ಇದಾಗಿರುವುದರಿಂದ ಇಂದು‌ ಖುದ್ದು ನ್ಯಾಯಾಲಯಕ್ಕೆ ಹಾಜರಾದರು. ರೇವಣ್ಣ ಪರ‌ ವಕೀಲರು ವಾದ ಮಂಡಿಸಿ ಎಸ್ಐಟಿ ತನಿಖೆಗೆ ಸಹಕರಿಸಲಿದ್ದು, ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು. ಎಸ್ಐಟಿಯು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿತ್ತು.

ಮತ್ತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ಜಾಮೀನುಸಹಿತ ಪ್ರಕರಣದ ಅರೋಪಿಯಾಗಿರುವ ರೇವಣ್ಣ ಅವರಿಗೆ ಜಾಮೀನು ನೀಡಬಾರದೆಂಬ ಎಸ್ಐಟಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಿಚಾರಣೆಗೆ ಬರುವುದಾಗಿ ರೇವಣ್ಣ ಹೇಳಿದ್ದಾರೆ. ಆದರೆ, ಇನ್ನೂ ವಿಚಾರಣೆಗೆ ಬಂದಿಲ್ಲ. ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಬೇಕು. ಮತ್ತೊಬ್ಬ ಆರೋಪಿ ದೇಶಬಿಟ್ಟು ಹೋಗಿದ್ದಾರೆ. ಹೀಗಾಗಿ ಸಮಯ ನೀಡಬಾರದು ಎಂದು ವಾದ ಮಂಡಿಸಿದರು.

ಇದನ್ನೂ ಓದಿ: ಪ್ರಜ್ವಲ್ ಸಂಸದರಾಗಿದ್ದಲೇ ನನ್ನ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ- ಹೆಚ್​ಡಿಕೆ: ನಮ್ಮ ಸಂಪರ್ಕಕ್ಕೂ ಬಂದಿಲ್ಲ, ಕುಟುಂಬದವರಿಗೂ ಮಾಹಿತಿ ಇಲ್ಲ- ಜಿಟಿಡಿ

ರೇವಣ್ಣ ಪರ ವಕೀಲ ಅರುಣ್ ವಾದ ಮಂಡಿಸಿ, ರೇವಣ್ಣ ವಿರುದ್ಧ ಯಾವುದೇ ನಾನ್-ಬೇಲೆಬಲ್ ಸೆಕ್ಷನ್ ಇಲ್ಲ. ಜಾಮೀನು ನೀಡುವಂತಹ ಸೆಕ್ಷನ್ ಗಳಿವೆ. ಜಾಮೀನುಸಹಿತ ಸೆಕ್ಷನ್ ದಾಖಲಾಗಿರುವ ಈ ಪ್ರಕರಣದಲ್ಲಿ ಎಸ್ಐಟಿ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸುವ ಅಧಿಕಾರವಿಲ್ಲ. ಎಸ್​ಪಿಪಿಗೆ ಆಕ್ಷೇಪಣೆ ಸಲ್ಲಿಸುವ ಅಧಿಕಾರ ಇದೆಯೇ ಎಂಬುದು ಮೊದಲು ನಿರ್ಧಾರವಾಗಲಿ.‌ ಅಲ್ಲದೇ, ಈಗಾಗಲೇ ಅಪಹರಣ ಪ್ರಕರಣದಲ್ಲಿ ರೇವಣ್ಣನ ಬಂಧಿತರಾಗಿದ್ದಾಗ ಎಸ್ಐಟಿ ಅಧಿಕಾರಿಗಳು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸದೇ ಈಗ ಎಸ್ಐಟಿ ಪೊಲೀಸ್ ವಶಕ್ಕೆ ಕೇಳುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಎಸ್ಐಟಿ ಪರ ವಕೀಲೆ ಜಯ್ನಾ ಕೊಠಾರಿ ಪ್ರತಿವಾದ ಮಂಡಿಸಿ, ಆರೋಪಿಯು ಪೊಲೀಸರ ಮುಂದೆ ಸ್ವಯಂಪ್ರೇರಿತವಾಗಿ ಹಾಜರಾಗಿ ಶರಣಾಗಲಿ. ಇಲ್ಲದಿದ್ದರೆ ಜಾಮೀನು ಅರ್ಜಿ ವಿಚಾರಣೆ ನಡೆಸಬೇಕು‌. ಆರೋಪಿ ತುಂಬಾ ಪ್ರಭಾವಿಯಾಗಿದ್ದಾರೆ. ಆರೋಪಿ ಇಂದು ಬೆಳಗ್ಗೆ ಹಾಜರಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈಗ ನ್ಯಾಯಾಲಯದ ಮುಂದೆ ಶರಣಾಗಲು ತಯಾರಿಲ್ಲ ಎಂದರೆ ಹೇಗೆ?, ಸದ್ಯ ಇಲ್ಲೇ ಎಲ್ಲೋ ಕಾರಿನಲ್ಲಿ ಇರಬೇಕು. ಅವರನ್ನು ನ್ಯಾಯಾಲಯಕ್ಕೆ ಮುಂದೆ ಹಾಜರುಪಡಿಸಬೇಕು ಎಂದು ಮನವಿ ಮಾಡಿಕೊಂಡರು. ಆಗ ರೇವಣ್ಣ ಹಾಜರಾಗುವಂತೆ ನ್ಯಾಯಾಲಯವು ಆದೇಶಿಸಿ ಕೆಲ ಕಾಲ ವಿಚಾರಣೆ ಮುಂದೂಡಿತ್ತು.

ನ್ಯಾಯಾಲಯದ ಅಣತಿಯಂತೆ ರೇವಣ್ಣ ಹಾಜರಾದರು‌.‌ ವಾದ - ಪ್ರತಿವಾದ ಆಲಿಸಿ ರೇವಣ್ಣ ಅವರಿಗೆ ಐದು ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಹಾಗೂ ಎಸ್ಐಟಿ ತನಿಖೆಗೆ ಸಹಕರಿಸಬೇಕು ಎಂಬ ಷರತ್ತುವಿಧಿಸಿ ಜಾಮೀನು ಮಂಜೂರು ಮಾಡಿ, ನಾಳೆಗೆ ಅರ್ಜಿ ವಿಚಾರಣೆಯನ್ನ ಮುಂದೂಡಿತು.

ಇದನ್ನೂ ಓದಿ: ನನಗೆ ಆ ದೇವರ ಮೇಲೆ ನಂಬಿಕೆ ಇದೆ, ಈ ಆಪಾದನೆಯಿಂದ ಹೊರ ಬರ್ತೀನಿ: ಹೆಚ್​.ಡಿ. ರೇವಣ್ಣ ವಿಶ್ವಾಸ

Last Updated :May 16, 2024, 7:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.