ETV Bharat / state

ಮೋದಿ ಅಲೆ, ಗ್ಯಾರಂಟಿ ವಿಶ್ವಾಸ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಗ್ರೌಂಡ್ ರಿಪೋರ್ಟ್ - Ground Report

author img

By ETV Bharat Karnataka Team

Published : Apr 24, 2024, 9:25 AM IST

Updated : Apr 24, 2024, 11:54 AM IST

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಉಭಯ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ. ತಮಿಳು ಭಾಷಿಕರ ಸೆಳೆಯಲು ಹಾಲಿ ಸಂಸದ ತೇಜಸ್ವಿ ಸೂರ್ಯ, ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸಾಥ್​ ಪಡೆದು ಕೊಂಡಿದ್ದಾರೆ. ಇನ್ನು ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯರೆಡ್ಡಿ, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕರೆತಂದು ಪ್ರಚಾರ ನಡೆಸಿದರು. ಇವರಷ್ಟೇ ಅಲ್ಲದೇ ಹಲವು ನಾಯಕರು ಉಭಯ ಅಭ್ಯರ್ಥಿಗಳಿಗೆ ಸಮಬಲದಲ್ಲಿ ಸಾಥ್​ ನೀಡಿದ್ದರಿಂದ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ

ಬೆಂಗಳೂರು: ಬಿಜೆಪಿ ಭದ್ರಕೋಟೆ ಆಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟ ಕ್ಷೇತ್ರವಾಗಿದೆ. ಪ್ರಧಾನಿ ಮೋದಿ ಗ್ಯಾರಂಟಿಯೊಂದಿಗೆ ಹಾಲಿ ಸಂಸದ ತೇಜಸ್ವಿ ಸೂರ್ಯ ಮತಬೇಟೆಯಲ್ಲಿ ತೊಡಗಿದ್ದರೆ, ಗ್ಯಾರಂಟಿ ಅಲೆಯ ಜತೆಗೆ ಅಪ್ಪನ ರಣತಂತ್ರದಡಿ ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯರೆಡ್ಡಿ ಮುನ್ನುಗ್ಗುತ್ತಿದ್ದಾರೆ.

ದಕ್ಷಿಣ ಲೋಕಸಭಾ ಕ್ಷೇತ್ರ
ದಕ್ಷಿಣ ಲೋಕಸಭಾ ಕ್ಷೇತ್ರ

8 ವಿಧಾನಸಭಾ ಕ್ಷೇತ್ರಗಳೊಂದಿಗೆ 23 ಲಕ್ಷ ಮತದಾರರನ್ನು ಹೊಂದಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಈವರೆಗೂ ನಡೆದಿರುವ 13 ಚುನಾವಣೆಗಳಲ್ಲಿ ಕಾಂಗ್ರೆಸ್​ ಕೇವಲ ಎರಡು ಬಾರಿ ಮಾತ್ರ ಗೆದ್ದಿದೆ. (JNP 2 ಬಾರಿ ಮತ್ತು BLD 1 ಬಾರಿ ಗೆದ್ದಿದೆ) 1991 ರಿಂದ 2019 ರವರೆಗೂ 8 ಬಾರಿ ಸತತವಾಗಿ ಬಿಜೆಪಿ ಕ್ಷೇತ್ರವನ್ನು ಗೆದ್ದುಕೊಂಡ ಬಂದಿದೆ. ವೆಂಕಟಗಿರಿಗೌಡ ಬಿಜೆಪಿಗೆ ಮೊದಲ ಗೆಲುವು ತಂದರೆ ನಂತರ ಅನಂತ್ ಕುಮಾರ್ ಸತತವಾಗಿ 6 ಬಾರಿ ಆಯ್ಕೆಯಾಗಿದ್ದರು, ಅವರ ನಿಧನದ ನಂತರ ತೇಜಸ್ವಿ ಸೂರ್ಯ ಒಮ್ಮೆ ಸಂಸದರಾಗಿದ್ದು ಮರು ಆಯ್ಕೆ ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ

ಕ್ಷೇತ್ರದಲ್ಲಿ ಅನಂತ್ ಕುಮಾರ್ ಮಾಡಿದ್ದ ಅಭಿವೃದ್ಧಿ, ನರೇಂದ್ರ ಮೋದಿಯ ಸಾಧನೆಗಳು ಹಾಗೂ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳು ನನ್ನ ಕೈಹಿಡಿಯಲಿದೆ ಎಂಬ ವಿಶ್ವಾಸದಲ್ಲಿ ತೇಜಸ್ವಿ ಸೂರ್ಯ ಇದ್ದಾರೆ. ಸಬ್ ಅರ್ಬನ್ ರೈಲು, ಮೆಟ್ರೋ ಯೋಜನೆ ವಿಸ್ತರಣೆ, ಜನೌಷಧಿ ಕೇಂದ್ರಗಳ ದಾಖಲೆಯ ಸ್ಥಾಪನೆ ಕ್ಷೇತ್ರದ ಮತದಾರರನ್ನು ಸೆಳೆದಿದೆ. ಆದರೂ ಗುರುರಾಘವೇಂದ್ರ ಕೋ ಆಪರೇಟಿವ್ ಸೊಸೈಟಿ ಹಗರಣ ಪ್ರಕರಣದಲ್ಲಿ ಜನರಿಗೆ ನ್ಯಾಯ ಕೊಡಿಸಲು ತೇಜಸ್ವಿ ಸೂರ್ಯ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ ಎನ್ನುವ ಆರೋಪವಿದೆ. ಕ್ಷೇತ್ರದ ಜನರ ಕೈಗೆ ಸಿಗುವುದಿಲ್ಲ ಎನ್ನುವ ಅಪವಾದವೂ ಇದೆ. ಆದರೂ ನಕಾರಾತ್ಮಕ ಅಂಶಗಳನ್ನು ಮೀರಿ ತೇಜಸ್ವಿ ಸೂರ್ಯ ಪ್ರಚಾರ ನಡೆಸುತ್ತಿದ್ದಾರೆ.

ತಮಿಳು ಭಾಷಿಕರ ಸೆಳೆಯಲು ತೇಜಸ್ವಿ ಸೂರ್ಯ, ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸಾಥ್​ ಪಡೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಬಿರುಸಿನ ರೋಡ್ ಶೋ ನಡೆಸಿರುವ ಅಣ್ಣಾಮಲೈ, ಹಾಲಿ ಸಂಸದ ತೇಜಸ್ವಿ ಸೂರ್ಯ ಪರ ಮತ ಯಾಚನೆ ಮಾಡಿದ್ದಾರೆ. ತೆಲುಗು ಭಾಷಿಕರು ಹೆಚ್ಚಿರುವ ಕಡೆ ಪ್ರಚಾರ ನಡೆಸಿದ್ದಾರೆ.

ಇನ್ನು ಈ ಬಾರಿ ಗೋವಿಂದರಾಜನಗರ, ವಿಜಯನಗರದ ಶಕ್ತಿಯಾಗಿದ್ದ ವಿ.ಸೋಮಣ್ಣ ಅನುಪಸ್ಥಿತಿ ತೇಜಸ್ವಿ ಸೂರ್ಯ ಅವರನ್ನು ಕಾಡುತ್ತಿದೆ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಮತಸೆಳೆದು ಬಿಜೆಪಿ ಅಭ್ಯರ್ಥಿ ಗೆಲುವಿನ ಅಂತರ ಹೆಚ್ಚಳಕ್ಕೆ ಕಾರಣೀಕರ್ತರಾಗಿದ್ದಾರೆ. 2009 ರಿಂದ 2019ರ ಚುನಾವಣೆವರೆಗೆ ಅನಂತ್ ಕುಮಾರ್ ಗೆಲುವು ಹಾಗೂ ತೇಜಸ್ವಿ ಸೂರ್ಯ ಗೆಲುವಿಗೂ ಕೊಡುಗೆ ನೀಡುತ್ತಾ ಬಂದಿದ್ದಾರೆ. ಆದರೆ, ಈ ಬಾರಿ ಅವರು ತುಮಕೂರು ಅಭ್ಯರ್ಥಿಯಾಗಿರುವ ಕಾರಣದಿಂದ ಅವರ ಅನುಪಸ್ಥಿತಿ ಹಾಲಿ ಸಂಂಸದರಿಗೆ ಈ ಕ್ಷೇತ್ರಗಳ ಲೀಡ್ ಕಡಿಮೆಯಾಗುವ ಆತಂಕ ಸೃಷ್ಟಿಸಿದೆ.

ಸೋಮಣ್ಣ ಅನುಪಸ್ಥಿತಿ ಕಾಡುತ್ತಿದ್ದರೂ ಮಿತ್ರಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ತೇಜಸ್ವಿ ಪರ ಪ್ರಚಾರ ನಡೆಸಿ ಜೆಡಿಎಸ್ ಮತಗಳ ಕ್ರೋಢೀಕರಿಸುವ ಪ್ರಯತ್ನ ನಡೆಸಿದ್ದಾರೆ. ಇದರಿಂದಾಗಿ ತೇಜಸ್ವಿ ಸೂರ್ಯ ಅಲ್ಪ ನಿರಾಳರಾಗಿದ್ದಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಹಾಗೂ ಅಮಿತ್ ಶಾ ರೋಡ್ ಶೋ ಮೇಲೆ ತೇಜಸ್ವಿ ಸೂರ್ಯ ಹೆಚ್ಚಿನ ಭರವಸೆ ಹೊಂದಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ

ತೀವ್ರ ಸ್ಪರ್ಧೆ ಒಡ್ಡುತ್ತಿರುವ ಸೌಮ್ಯ ರೆಡ್ಡಿ: ಬಿಜೆಪಿ ಅನಾಯಾಸವಾಗಿ ಗೆಲ್ಲುತ್ತಿದ್ದ ಕ್ಷೇತ್ರದಲ್ಲಿ ಈ ಬಾರಿ ಬೆಂಗಳೂರಿನ ಪ್ರಭಾವಿ ಕಾಂಗ್ರೆಸ್ ನಾಯಕ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಮಾಜಿ ಶಾಸಕಿ ಸೌಮ್ಯರೆಡ್ಡಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ವಿಧಾನಸಭೆ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳಲು ಸೌಮ್ಯರೆಡ್ಡಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಅವಿರತವಾಗಿ ಕ್ಷೇತ್ರದ ತುಂಬಾ ಓಡಾಡುತ್ತಾ ಪ್ರಚಾರದಲ್ಲಿ ತೊಡಗಿದ್ದಾರೆ. ಸ್ವತಃ ರಾಮಲಿಂಗಾರೆಡ್ಡಿಗೂ ಇದು ಪ್ರತಿಷ್ಠೆಯ ಚುನಾವಣೆ. ಹಾಗಾಗಿ ಅವರೂ ಹಗಲಿರುಳು ಪುತ್ರಿಯ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಇವರ ಬೆನ್ನೆಲುವಾಗಿ ಡಿಸಿಎಂ ಡಿಕೆ ಶಿವಕುಮಾರ್ ನಿಂತಿದ್ದು, ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಧ್ವಜ ಹಾರಿಸುವ ಪಣ ತೊಟ್ಟಿದ್ದಾರೆ. ಹೀಗಾಗಿ ಕಳೆದ ಲೋಕಸಭಾ ಚುನಾವಣೆಗಿಂತ ಈ ಬಾರಿ ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಚಟುವಟಿಕೆಗಳು ಹೆಚ್ಚಿವೆ.

ಬಿಜೆಪಿಗೆ ಕೌಂಟರ್ ಎಂಬಂತೆ ಕಾಂಗ್ರೆಸ್ ಮನೆ ಮನೆ ಪ್ರಚಾರ, ಅಬ್ಬರದ ರೋಡ್ ಶೋಗಳು ಹಾಗೂ ಭಿನ್ನ ಸ್ವರೂಪದ ಕಾರ್ಯತಂತ್ರಗಳನ್ನು ರೂಪಿಸಿಕೊಂಡಿದೆ. ಬಿಜೆಪಿ ತಮಿಳು ಭಾಷಿಕರ ಟಾರ್ಗೆಟ್ ಮಾಡಿದರೆ, ಕಾಂಗ್ರೆಸ್ ತೆಲುಗು ಭಾಷಿಕರ ಟಾರ್ಗೆಟ್ ಮಾಡಿದೆ. ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕರೆತಂದು ಪ್ರಚಾರ ನಡೆಸಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ

ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಗೋವಿಂದರಾಜನಗರ, ವಿಜಯನಗರ, ಬಿಟಿಎಂ ಲೇಔಟ್​​ನಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಜಯಜಗರ ಹಾಗೂ ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಶಾಸಕರಿದ್ದಾರೆ. ಕ್ಷೇತ್ರವಾರು ನೋಡಿದರೆ ಬಿಜೆಪಿಗೆ ಹೆಚ್ಚಿನ ಅವಕಾಶ ಸ್ಪಷ್ಟವಾಗಿದೆ. ಆದರೂ, ವಿಜಯನಗರ ಮತ್ತು ಗೋವಿಂದರಾಜನಗರದಲ್ಲಿ ಕೃಷ್ಣಪ್ಪ, ಪ್ರಿಯಾಕೃಷ್ಣಾ ಅಪ್ಪ - ಮಕ್ಕಳ ಜೋಡಿ ಬಿಜೆಪಿಯ ಸೋಮಣ್ಣ ಅನುಪಸ್ಥಿತಿಯಲ್ಲಿ ಅತಿ ಹೆಚ್ಚಿನ ಲೀಡ್ ಕಾಂಗ್ರೆಸ್​ಗೆ ಕೊಡಿಸಲು ಶ್ರಮಿಸುತ್ತಿದ್ದಾರೆ,. ರಾಮಲಿಂಗಾರೆಡ್ಡಿ ಕೂಡ ತಮ್ಮ ಕ್ಷೇತ್ರ ಬಿಟಿಎಂ ಲೇಔಟ್​ನಲ್ಲಿ ಭಾರೀ ಲೀಡ್​ಗೆ ಯತ್ನಿಸುತ್ತಿದ್ದಾರೆ. ಇದರ ಜೊತೆಗೆ ತೇಜಸ್ವಿ ಸೂರ್ಯ ವಿರುದ್ಧದ ಆರೋಪಗಳ ಪ್ರಸ್ತಾಪಿಸುತ್ತಾ ವಾಗ್ದಾಳಿ ನಡೆಸುತ್ತಲೇ ಕಾಂಗ್ರೆಸ್​ನ ಗ್ಯಾರಂಟಿ ಅಲೆಯ ಲಾಭ ಪಡೆಯುವುದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ನಿರತರಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಅಮಿತ್ ಶಾ ರೋಡ್ ಶೋ ನಡೆಸಿದರೆ, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಪರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರ ನಡೆಸಿದ್ದಾರೆ. ಒಂದು ಕಡೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕಾಂಗ್ರೆಸ್ ಪರ, ತಮಿಳುನಾಡಿನ ಅಣ್ಣಾಮಲೈ ಬಿಜೆಪಿ ಪರ ಪ್ರಚಾರ ನಡೆಸಿ ನೆರೆ ರಾಜ್ಯದ ಪೊಲಿಟಿಕಲ್ ಸ್ಟಾರ್​ಗಳಿಂದ ಕ್ಯಾಂಪೇನ್ ವಾರ್ ನಡೆಸಲಾಗಿದೆ. ತೇಜಸ್ವಿ ಪರ ಕುಮಾರಸ್ವಾಮಿ, ಸೌಮ್ಯರೆಡ್ಡಿ ಪರ ಡಿಕೆ ಶಿವಕುಮಾರ್ ಒಕ್ಕಲಿಗ ಅಗ್ರ ನಾಯಕರ ಪ್ರಚಾರ, ಮತ್ತೊಂದು ಕಡೆ ಕುಟುಂಬದ ಪ್ರತಿಷ್ಠೆಯಂತ ಕಾಂಗ್ರೆಸ್​ನಿಂದ ಶಾಸಕರ ಮಗಳು, ಬಿಜೆಪಿಯಿಂದ ಶಾಸಕರ ಅಣ್ಣನ ಮಗ ಅಭ್ಯರ್ಥಿ ಆಗಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ಈ ಬಾರಿ ಸಮ ಬಲದ ಹೋರಾಟ ಕಾಣುತ್ತಿದೆ.

ಅಭ್ಯರ್ಥಿಗಳ ಪ್ರಚಾರ ವೈಖರಿ: ಮೋದಿ ಸರ್ಕಾರದ 10 ವರ್ಷದ ಸಾಧನೆ, ಉಪನಗರ ರೈಲು ಯೋಜನೆ, ಮೆಟ್ರೋ ಮಾರ್ಗ ವಿಸ್ತರಣೆ, ರಿಂಗ್ ರಸ್ತೆ, ಯುಎಸ್ ಕಾನ್ಸುಲೇಟ್ ಕಚೇರಿ ಮುಂಜೂರು, ರಾಷ್ಟ್ರೀಯ ತನಿಖಾ ದಳದ ಪ್ರಾದೇಶಿಕ ಕಚೇರಿ ಸ್ಥಾಪನೆ, ಕೇಂದ್ರದ ವಸತಿ, ಸಾಲ ಸೌಲಭ್ಯದ ಯೋಜನೆಗಳ ಮೂಲಕ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮತ ಯಾಚನೆ ಮಾಡುತ್ತಿದ್ದಾರೆ.

ಐದು ವರ್ಷದಲ್ಲಿ ನಿಮ್ಮ ಸಂಸದರನ್ನು ಕ್ಷೇತ್ರದಲ್ಲಿ ನೋಡಿದ್ದೀರಾ? ನಿಮ್ಮ ಕಷ್ಟಸುಖವನ್ನು ಅವರು ಕೇಳಿದ್ದಾರಾ? ಸಂವಿಧಾನ ಬದಲಾವಣೆ ಮಾಡಲು ಹೊರಟಿರುವವರು ಬಿಜೆಪಿಯವರು, ಸರ್ವರೂ ಸಹಬಾಳ್ವೆ ನಡೆಸಲು ಪೂರಕವಾಗಿರುವ ಸಂವಿಧಾನ ಬದಲಾವಣೆಗೆ ಅವಕಾಶ ನೀಡಬಾರದು, ಎಲ್ಲ ಜಾತಿ, ಧರ್ಮದವರು ಸಹಬಾಳ್ವೆಯಿಂದ ಇದ್ದೇವೆ ಹೀಗೆ ಇರಲು ನನಗೆ ಆಶೀರ್ವಾದ ಮಾಡಿ ಬೆಂಬಲ ನೀಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುವ ಅನ್ಯಾಯ, ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳ ಜೊತೆ ಕಾಂಗ್ರೆಸ್ ನ ಗ್ಯಾರಂಟಿಗಳ ಪ್ರಸ್ತಾಪದೊಂದಿಗೆ ಮತಭೇಟೆಯಲ್ಲಿ ತೊಡಗಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ

ಒಟ್ಟಿನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಒಂದು ಕಡೆ ಮೋದಿ ಅಲೆ, ಅಭಿವೃದ್ಧಿ ಕಾರ್ಯಗಳ ಜಪದೊಂದಿಗೆ ಬಿಜೆಪಿ ಮುನ್ನುಗ್ಗುತ್ತಿದ್ದರೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಲೆ ಬೀಸಿ ಕಾಂಗ್ರೆಸ್ ಯಾತ್ರೆ ಹೊರಟಿದೆ, ಬಿಜೆಪಿ ಭದ್ರಕೋಟೆ ಭದ್ರವಾಗುತ್ತಾ? ಕೇಸರಿ ಕೋಟೆಗೆ ಕಾಂಗ್ರೆಸ್ ಲಗ್ಗೆ ಇಡುತ್ತಾ ಎನ್ನುವುದನ್ನು ಮತದಾರರು ಈ ಬಾರಿಯ ಚುನಾವಣೆಯಲ್ಲಿ ಮತದಾನದ ಮೂಲಕ ನಿರ್ಧಾರ ಮಾಡಲಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ ಗೆಲುವಿಗಾಗಿ ಕೈ - ಕಮಲ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ: ಹೀಗಿದೆ ಬೆಣ್ಣೆ ನಗರಿ ಜನರ ನಾಡಿಮಿಡಿತ - Opinion Of Voters

Last Updated : Apr 24, 2024, 11:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.