ETV Bharat / state

ಬಿಜೆಪಿ - ಜೆಡಿಎಸ್ ಒಟ್ಟಾಗಿ ರಾಜ್ಯದ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ: ವಿಜಯೇಂದ್ರ ವಿಶ್ವಾಸ

author img

By ETV Bharat Karnataka Team

Published : Feb 8, 2024, 1:40 PM IST

ಬಿಜೆಪಿಯಿಂದ ಫೆ.9,10, 11ರಂದು 3 ದಿನಗಳ ಕಾಲ ಗ್ರಾಮ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ 28 ಸಾವಿರಕ್ಕೂ ಹೆಚ್ಚು ಹಳ್ಳಿಗಳು, 19 ಸಾವಿರ ನಗರ ಬೂತ್‍ಗಳಲ್ಲಿ 42 ಸಾವಿರ ಕಾರ್ಯಕರ್ತರು ಮೂರು ದಿನಗಳ ಕಾಲ ಈ ಅಭಿಯಾನದಲ್ಲಿ ಭಾಗವಹಿಸುವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು.

Gram Chalo program was held at H Gollahalli
ಹೆಚ್​ ಗೊಲ್ಲಹಳ್ಳಿಯಲ್ಲಿ ಗ್ರಾಮ ಚಲೋ ಕಾರ್ಯಕ್ರಮ ನಡೆಯಿತು

ಬೆಂಗಳೂರು: ಇಡೀ ದೇಶದಲ್ಲಿ ಮೋದಿ ಪರ ವಾತಾವರಣ ಇದೆ. ಸಹಜವಾಗಿ ರಾಜ್ಯದಲ್ಲಿಯೂ ಬಿಜೆಪಿ ಪರ ಅಲೆ ಇದೆ. 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಇದ್ದು, ಬಿಜೆಪಿ‌ - ಜೆಡಿಎಸ್ ಒಟ್ಟಾಗಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಹೆಚ್​ ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಇಡೀ ದೇಶದಲ್ಲಿ ನರೇಂದ್ರ ಮೋದಿ ಅವರ ಪರವಾದ ಅಲೆ ಇದೆ. ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಜನರಿಗೆ ಮನವರಿಕೆ ಆಗಿದೆ.

ಮತ ಎಣಿಕೆ ಸಂದರ್ಭದಲ್ಲಿ ಕರ್ನಾಟಕದ 28 ಸೀಟುಗಳಲ್ಲಿ ನಾವು ಒಂದೊಂದು ಸೀಟು ಗೆಲ್ಲುವಾಗ ಕಾಂಗ್ರೆಸ್‍ನವರು ಪರಿತಪಿಸುತ್ತಾರೆ. ಬಿಜೆಪಿ ಪರ ಅಂತಹ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ನಮ್ಮ ಕಾರ್ಯಕರ್ತರು ರಣೋತ್ಸಾಹದಲ್ಲಿದ್ದಾರೆ. ಮೋದಿ ಮತ್ತೊಮ್ಮೆ ಎಂಬ ವಿಷಯದಲ್ಲಿ ಮತದಾರರು ಕಾತರರಾಗಿದ್ದಾರೆ. ಬಿಜೆಪಿ- ಜೆಡಿಎಸ್ ಒಗ್ಗಟ್ಟಾಗಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದರು.

ಇಂದು ದೆಹಲಿಗೆ ತೆರಳುತ್ತಿದ್ದು, ನಾಳೆ ಅಮಿತ್ ಶಾ ಅವರ ಭೇಟಿ ಮಾಡುತ್ತೇನೆ. ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಹಾಗೂ ಪರಿಷತ್ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡುತ್ತೇನೆ. ರಾಜ್ಯಸಭೆಗೆ ಅಭ್ಯರ್ಥಿ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ವರಿಷ್ಠರ ಜತೆ ಚರ್ಚಿಸುವೆ ಎಂದರು.

ಸಿಎಂ ಮಾಂಸಾಹಾರ ಸೇವಿಸಿ ಸುತ್ತೂರು ಶ್ರೀಗಳ ಭೇಟಿ, ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ನಿನ್ನೆ ಮಧ್ಯಾಹ್ನ ದೆಹಲಿಯಲ್ಲಿ ಮಾಂಸಾಹಾರ ಸೇವಿಸಿ ರಾತ್ರಿ ಸುತ್ತೂರು ಜಗದ್ಗುರುಗಳ ಗದ್ದುಗೆಗೆ ಭೇಟಿ ಕೊಟ್ಟಿದ್ದಾರೆ. ‘ಇದು ಬಹಳ ದುರದೃಷ್ಟಕರ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳು ಎಂಬುದನ್ನು ಎಲ್ಲೋ ಒಂದು ಕಡೆ ಮರೆಯುತ್ತಿದ್ದಾರೆ ಎಂಬುದು ನನ್ನ ಭಾವನೆ. ಇದು ಮೊದಲ ಬಾರಿ ಏನಲ್ಲ. ಹಲವು ಸಂದರ್ಭಗಳಲ್ಲಿ ಈ ರೀತಿ ಘಟನೆಗಳು ಪುನರಾವರ್ತನೆ ಆಗಿವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇವರ ಬಗ್ಗೆ ಎಷ್ಟು ಭಕ್ತಿ ಭಾವನೆ ಇಟ್ಟುಕೊಂಡಿದ್ದಾರೆ ಎಂಬುದು ಬೇರೆ ಮಾತು. ಆದರೆ, ರಾಜ್ಯದ ಮುಖ್ಯಮಂತ್ರಿಯಾಗಿ ಅವರ ನಡವಳಿಕೆಯನ್ನು ಸಮಾಜ, ಪ್ರತಿಯೊಬ್ಬರೂ ಗಮನಿಸುತ್ತಾರೆ. ಈ ಘಟನೆ ನಿಜವಾಗಿಯೂ ಖಂಡನೀಯ. ಅದರಲ್ಲೂ ಸುತ್ತೂರಿನ ಪವಿತ್ರ ಗದ್ದುಗೆಗೆ ಭೇಟಿ ಕೊಟ್ಟದ್ದು ನಿಜವಾಗಲೂ ಒಂದು ದುರಂತ’ ಎಂದು ತಿಳಿಸಿದರು.

3 ದಿನಗಳ ಕಾಲ ಗ್ರಾಮ ಚಲೋ ಅಭಿಯಾನ: ಬಿಜೆಪಿಯಿಂದ ಫೆಬ್ರವರಿ 9, 10, 11ರಂದು 3 ದಿನಗಳ ಕಾಲ ಗ್ರಾಮ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಕರ್ನಾಟಕ ರಾಜ್ಯದಲ್ಲಿ 28 ಸಾವಿರಕ್ಕೂ ಹೆಚ್ಚು ಹಳ್ಳಿಗಳು, 19 ಸಾವಿರ ನಗರ ಬೂತ್‍ಗಳಲ್ಲಿ ಒಟ್ಟಾರೆ 42 ಸಾವಿರ ಕಾರ್ಯಕರ್ತರು ಮೂರು ದಿನಗಳ ಕಾಲ ನಿರಂತರವಾಗಿ ಈ ಅಭಿಯಾನದಲ್ಲಿ ಭಾಗವಹಿಸುತ್ತಾರೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.

ಇವತ್ತು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿದ್ದೇನೆ. 2047ನೇ ಇಸವಿಗೆ ಭಾರತವು ‘ವಿಕಸಿತ ಭಾರತ’ವಾಗಿ ಪರಿವರ್ತನೆ ಹೊಂದಬೇಕು; ಭಾರತವು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆ ಕಾಣಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಲು ಗ್ರಾಮಗಳೂ ಅಭಿವೃದ್ಧಿ ಹೊಂದಬೇಕಿದೆ ಎಂದು ತಿಳಿಸಿದರು.

ಈ ಅಭಿಯಾನವು ಬಿಜೆಪಿಗೆ ದೊಡ್ಡ ಶಕ್ತಿಯಾಗಲಿದೆ. ‘ಮೋದಿ ಮತ್ತೊಮ್ಮೆ’ ಎಂಬ ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಆಗಬೇಕು ಎಂಬ ಆಶಯವನ್ನು ಹೊಂದಿ ಗೋಡೆ ಬರಹ ಬರೆಯಲಾಗುವುದು. ಕಳೆದ 10 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬ ನಿಟ್ಟಿನಲ್ಲಿ ಈ ಅಭಿಯಾನ ನಡೆಯುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕರು ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಆಶಿಸುತ್ತಿದ್ದಾರೆ ಎಂದರು.

ಇದನ್ನೂಓದಿ:'2024ಕ್ಕೆ ಮತ್ತೊಮ್ಮೆ ಮೋದಿ' ಗೋಡೆ ಬರಹಕ್ಕೆ ಯಡಿಯೂರಪ್ಪ ಚಾಲನೆ


ETV Bharat Logo

Copyright © 2024 Ushodaya Enterprises Pvt. Ltd., All Rights Reserved.