ETV Bharat / state

ಬೆಳಗಾವಿ ಮಹಿಳೆ ವಿವಸ್ತ್ರ ಪ್ರಕರಣ: ಸಂತ್ರಸ್ತೆಗೆ ಸರ್ಕಾರದಿಂದ ಜಮೀನು ಮಂಜೂರು, ಕ್ರಯಪತ್ರ ವಿತರಣೆ

author img

By ETV Bharat Karnataka Team

Published : Feb 15, 2024, 10:50 PM IST

ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಸಂಬಂಧ ಸಂತ್ರಸ್ತೆಗೆ ಜಮೀನು ಮಂಜೂರು ಮಾಡಿ, ಕ್ರಯಪತ್ರ ನೀಡಿರುವ ಬಗ್ಗೆ ಹೈಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿದೆ.

government-informed-high-court-about-action-in-belagavi-woman-assault-case
ಮಹಿಳೆ ವಿವಸ್ತ್ರ ಪ್ರಕರಣ: ಸರ್ಕಾರದಿಂದ ಜಮೀನು ಮಂಜೂರು, ಕ್ರಯಪತ್ರ ವಿತರಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಯೋಜನೆಯಡಿ ಘೋಷಿಸಿದಂತೆ ಸಂತ್ರಸ್ತೆಗೆ ಜಮೀನು ಮಂಜೂರು ಮಾಡಿದ್ದು, ಅದರ ಕ್ರಯಪತ್ರವನ್ನೂ ಸಹ ಹಸ್ತಾಂತರಿಸಲಾಗಿದೆ ಎಂದು ಹೈಕೋರ್ಟ್‌ಗೆ ಸರ್ಕಾರ ತಿಳಿಸಿದೆ.

ಪ್ರಕರಣ ಸಂಬಂಧ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಮತ್ತು ಟಿ.ಜಿ.ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ಹಾಜರಾಗಿದ್ದ ರಾಜ್ಯ ಅಡ್ವೋಕೇಟ್ ಜನರಲ್ ಕೆ.ಶಿಶಿಕಿರಣ್‌ ಶೆಟ್ಟಿ ಮಾಹಿತಿ ನೀಡಿದರು.

ಅಲ್ಲದೆ, ಪರಿಹಾರ ಹಣ ಪಾವತಿಯ ಹೊರತಾಗಿಯೂ ಸರ್ಕಾರ ಈ ಹಿಂದೆ ಘೋಷಿಸಿದಂತೆ ಪ್ರಕರಣದ ಸಂತ್ರಸ್ತೆಗೆ ಎರಡು ಎಕರೆ ಜಮೀನು ಮಂಜೂರು ಮಾಡಲಾಗಿದೆ. ಜೊತೆಗೆ, ಜಮೀನಿನ ಕ್ರಯಪತ್ರ ಸಹ ಹಸ್ತಾಂತರಿಸಲಾಗಿದೆ ಎಂದು ಅಡ್ವೋಕೇಟ್‌ ಜನರಲ್‌ ತಿಳಿಸಿದರು.

ಇದೊಂದು ಸೂಕ್ಷ್ಮ ಪ್ರಕರಣ. ಸಂತ್ರಸ್ತೆ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಕ್ರಿಮಿನಲ್‌ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಪೂರೈಸಲು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಇದೇ ವೇಳೆ ಅಡ್ವೋಕೇಟ್‌ ಜನರಲ್‌ ನ್ಯಾಯಪೀಠವನ್ನು ಕೋರಿದರು. ಈ ಎಲ್ಲಾ ಅಂಶ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಬೆಳಗಾವಿ ತಾಲೂಕಿನ ಗ್ರಾಮದಲ್ಲಿ 24 ವರ್ಷದ ಯುವಕ ಮತ್ತು 18 ವರ್ಷದ ಯುವತಿ ಪ್ರೀತಿಸುತ್ತಿದ್ದರು. ಯುವತಿಗೆ ಆಕೆಯ ಕುಟುಂಬದವರು ಬೇರೊಬ್ಬ ಯುವಕನೊಂದಿಗೆ ಮದುವೆ ನಿಗದಿಪಡಿಸಿ ನಿಶ್ಚಿತಾರ್ಥ ಇಟ್ಟುಕೊಂಡಿದ್ದರು. ನಿಶ್ಚಿತಾರ್ಥದ ಹಿಂದಿನ ದಿನ ಮಧ್ಯರಾತ್ರಿ ಪ್ರೇಮಿಗಳಿಬ್ಬರು ಮನೆಬಿಟ್ಟು ಪರಾರಿಯಾಗಿದ್ದಾರೆಂದು ಸಿಟ್ಟಿಗೆದ್ದ ಯುವತಿಯ ಕುಟುಂಬದವರು, ಯುವಕನ ತಾಯಿಯನ್ನು (ಸಂತ್ರಸ್ತೆ) ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ್ದರು. ಈ ಘಟನೆಯನ್ನು ಮಾಧ್ಯಮಗಳ ವರದಿ ಮಾಡಿದ್ದವು. ಈ ವರದಿ ಆಧರಿಸಿ ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಯೋಜನೆಯಡಿ ಘೋಷಣೆ ಮಾಡಿದಂತೆ ಸಂತ್ರಸ್ತೆಗೆ ಎರಡು ಎಕರೆ ಜಮೀನು ಮಂಜೂರು ಮಾಡಿ ಕ್ರಯಪತ್ರವನ್ನು ಹಸ್ತಾಂತರಿಸಬೇಕು ಎಂದು 2024ರ ಜನವರಿ 17ರಂದು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿತ್ತು.

ಇದನ್ನೂ ಓದಿ: ಸುಗ್ರೀವಾಜ್ಞೆ ಮೂಲಕ ಬಿಡಿಎ ಮುಚ್ಚುವುದೇ ಲೇಸು: ಹೈಕೋರ್ಟ್ ಮೌಖಿಕ ಅಭಿಪ್ರಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.