ETV Bharat / state

ಪುತ್ತೂರು: ಗೋ ವಿಹಾರ ಧಾಮದಲ್ಲಿ ಗೋಲೋಕೋತ್ಸವ; ಜನರನ್ನು ಆಕರ್ಷಿಸಿದ ದೇಶಿ ತಳಿಗಳ ಪ್ರದರ್ಶನ

author img

By ETV Bharat Karnataka Team

Published : Feb 4, 2024, 6:42 PM IST

Updated : Feb 4, 2024, 10:56 PM IST

ಪುತ್ತೂರು ತಾಲೂಕು ಕುರಿಯ ಗ್ರಾಮದ ಸಂಪ್ಯದಮೂಲೆಯಲ್ಲಿ ಗೋಲೋಕೋತ್ಸವ ಅದ್ಧೂರಿಯಾಗಿ ನಡೆಯಿತು. ಈ ಗೋಲೋಕೋತ್ಸವದಲ್ಲಿ ಆಹಾರ ಮತ್ತು ಔಷಧದ ನೆಲೆಯಲ್ಲಿ ದೇಶಿ ಹಸು ತಳಿಗಳ ಮಹತ್ವ, ಪಾಲನೆ ಸಹಿತ ಸನಾತನ ಸಂಸ್ಕೃತಿಯೊಂದಿಗೆ ಅವುಗಳಿಗೆ ಇರುವ ನಂಟು ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು.

golokotsava
ಆಕರ್ಷಿಸಿದ ದೇಸಿ ಹಸು ತಳಿ ಪ್ರದರ್ಶನ

ಕುರಿಯ ಗ್ರಾಮದ ಸಂಪ್ಯದಮೂಲೆಯಲ್ಲಿ ಗೋಲೋಕೋತ್ಸವ ಹಮ್ಮಿಕೊಳ್ಳಲಾಗಿತ್ತು.

ಪುತ್ತೂರು (ದಕ್ಷಿಣ ಕನ್ನಡ): ಪುತ್ತೂರು ತಾಲೂಕು ಕುರಿಯ ಗ್ರಾಮದ ಸಂಪ್ಯದಮೂಲೆಯಲ್ಲಿ ಗೋಲೋಕೋತ್ಸವ ಅದ್ಧೂರಿಯಾಗಿ ನಡೆಯಿತು. ಗೋ ವಿಹಾರ ಧಾಮದಲ್ಲಿ ವಿವಿಧ ಜಾತಿ ಗೋವುಗಳು., ಇನ್ನೊಂದೆಡೆ ದೇಶಿ ಹಸುಗಳ ತ್ಯಾಜ್ಯದಿಂದ ತಯಾರಿಸಿದ ಉತ್ಪನ್ನ ಮಾರಾಟ, ಹಾಲಿನ ಉತ್ಪನ್ನಗಳಿಂದ ಸಿದ್ಧಗೊಳಿಸಿರುವ ಶುಚಿ ಶುಚಿಯಾದ ಖಾದ್ಯ, ಸಿಹಿತಿಂಡಿಗಳು ಜನರ ಗಮನ ಸೆಳೆದವು.

ದೇಶಿ ತಳಿಗಳನ್ನು ಸಂರಕ್ಷಿಸಿ ಪೋಷಿಸುವ ನಿಟ್ಟಿನಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ದೇವಳದ ಗೋ ಸೇವಾ ಬಳಗದ ಆಶ್ರಯದಲ್ಲಿ ಎರಡು ದಿನಗಳ ಗೋಲೋಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಗೋಲೋಕೋತ್ಸವ ಪ್ರಯುಕ್ತ ಪುತ್ತೂರು ನಗರದಿಂದ 4 ಕಿ.ಮೀ ದೂರದ ಸಂಪ್ಯದ ಮೂಲೆ ಗೋ ವಿಹಾರಧಾಮ ಇಂದು ಕಳೆಗಟ್ಟಿತ್ತು.

ಸುಮಾರು 10 ರಿಂದ 15 ವಿವಿಧ ಜಾತಿಯ ದೇಶಿ ಗೋ ತಳಿಗಳು ಗೋಲೋಕೋತ್ಸವದಲ್ಲಿ ಭಾಗವಹಿಸಿದ್ದವು. ಈ ತಳಿಗಳ ಬಗ್ಗೆ ರೈತಾಪಿ ಜನರು ಮಾಹಿತಿ ಪಡೆದುಕೊಂಡರು. ಆಹಾರ ಮತ್ತು ಔಷಧದ ನೆಲೆಯಲ್ಲಿ ದೇಶಿ ಹಸು ತಳಿಗಳ ಮಹತ್ವ, ಪಾಲನೆ ಸಹಿತ ಸನಾತನ ಸಂಸ್ಕೃತಿಯೊಂದಿಗೆ ಇವುಗಳಿಗೆ ಇರುವ ನಂಟು ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು. ಪ್ರದರ್ಶನದಲ್ಲಿದ್ದ ಮಲ್ನಾಡು ಗಿಡ್ಡ, ಗಿರ್ ಭಾವನಗರ್, ಪುಂಗನೂರು ಗೋವುಗಳ ಸಾಕಣೆಗೆ ಹೆಚ್ಚು ಜನರು ಒಲವು ತೋರುತ್ತಿರುವುದು ಕಂಡು ಬಂದಿತು. ಭಾನುವಾರ ರಜೆ ಇದ್ದಿದ್ದರಿಂದ ಅಪಾರ ಸಂಖ್ಯೆಯಲ್ಲಿ ಜನರು ಈ ಮೇಳದಲ್ಲಿ ಭಾಗವಹಿಸಿದ್ದರು.

ದೇಶಿ ತಳಿ ಗೋವುಗಳನ್ನು ಸಂರಕ್ಷಿಸಿ, ಬೆಳೆಸುವ ಕುರಿತು ಜಾಗೃತಿ ಮೂಡಿಸಲು ಕುರಿಯ ಗ್ರಾಮದ ಸಂಪ್ಯದಮೂಲೆಯಲ್ಲಿ ಗೋಲೋಕೋತ್ಸವ ಹಮ್ಮಿಕೊಂಡಿದ್ದೇವೆ. ಇಂದಿನ ಕಾಲದಲ್ಲಿ ಗೋವು ಸಾಕಣೆ ಕಮ್ಮಿಯಾಗುತ್ತಿದೆ. ನಮ್ಮ ಸನಾತನ ಸಂಸ್ಕೃತಿಯ ಪ್ರತೀಕ ದೇಶಿ ಗೋ ಸಂಪತ್ತು ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗೋ ಸೇವಾ ಬಳಗ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ವಿವಿಧ ಸಂಘ ಸಂಸ್ಥೆಗಳು ಸೇರಿ ಗೋ ವಿಹಾರಧಾಮದಲ್ಲಿ ದೇಶಿ ತಳಿ ಗೋವು ಸಂರಕ್ಷಣೆಗಾಗಿ ವಿವಿಧ ಯೋಜನೆ ಹಾಕಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ 200 ದೇಶಿ ಹಸು ಒಳಗೊಂಡ ಗೋ ಶಾಲೆ ಆರಂಭಿಸಬೇಕೆಂದು ವಿಚಾರವೂ ಇದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮಾಹಿತಿ ನೀಡಿದರು.

ಆಯೋಜಕ ಸಂತೋಷ್ ಈಟಿವಿ ಭಾರತ್ ದೊಂದಿಗೆ ಮಾತನಾಡಿ, ಪುತ್ತೂರು ತಾಲೂಕಿನ ಪರಿಸರದಲ್ಲಿ ಸಾಕಣೆ ಮಾಡಿದ್ದ, 12 ದೇಶಿ ಗೋವು ತಳಿಗಳನ್ನು ತಂದು ಪ್ರದರ್ಶನಕ್ಕೆ ಇಡಲಾಗಿದೆ. ಉತ್ತರ ಭಾರತ ದೇಶಿ ತಳಿ ಪುಂಗನೂರು, ಸಾಹಿವಾಲ್, ಗಿರ್ ಸೇರಿದಂತೆ ವಿವಿಧ ದೇಶಿ ತಳಿಗಳು ಪ್ರದರ್ಶನದಲ್ಲಿ ಇವೆ. ನಮ್ಮ ಪರಿಸರಕ್ಕೆ ಹೊಂದಿಕೊಳ್ಳುಂತಹ ನಾಟಿ ತಳಿ ಅಂದ್ರೆ ಮಲೆನಾಡ್ ಗಿಡ್ಡ ತಳಿ. ಇದು ಹಾಲು, ಗೊಬ್ಬರ ಉತ್ಪಾದನೆಗೆ ಸಹಕಾರಿಯಾಗಿದೆ. ಉತ್ತರ ಭಾರತದ ದೇಶಿ ತಳಿಗಳು ಹೆಚ್ಚು ಹಾಲು ನೀಡುತ್ತವೆ ಎಂದು ತಿಳಿಸಿದರು.

ಗೋಲೋಕೋತ್ಸವದಲ್ಲಿ ವಿಶೇಷವಾಗಿ ಮಕ್ಕಳು ಕುದುರೆ ಸವಾರಿಯನ್ನು ಇಷ್ಟಪಟ್ಟರು. ಪ್ರದರ್ಶನಕ್ಕಿಟ್ಟಿದ್ದ ಕೆಎಂಎಫ್ ಉತ್ಪನ್ನಗಳು, ಬಾದಾಮಿ ಹಾಲು, ಲಸ್ಸಿ, ಮಜ್ಜಿಗೆ ಹಾಗೂ ಗೋವಿನ ಉತ್ಪನ್ನ ಖಾದ್ಯಗಳನ್ನು ಜನರು ಸವಿದು ಖುಷಿಪಟ್ಟರು.

ಗೋಮೂತ್ರದಿಂದ ತಯಾರಿಸಲ್ಪಟ್ಟ ವಿವಿಧ ಕ್ರಿಮಿನಾಶಕಗಳು, ಔಷಧಿ ಮಳಿಗೆ, ಎತ್ತಿನ ಗಾಣದಿಂದ ಕಬ್ಬಿನ ಹಾಲು, ಎಣ್ಣೆಯನ್ನು ತೆಗೆಯುವುದು ಮತ್ತು ಮಾರಾಟ, ಖಾದ್ಯಮೇಳ, ದೇಶಿ ಆಹಾರ ಮೇಳದ ಪ್ರದರ್ಶನ, ಊಟೋಪಚಾರದ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ಮಾಡಲಾಗಿತ್ತು. ಗೋಲೋಕೋತ್ಸವದಲ್ಲಿ ವೈಯುಕ್ತಿಕ ಗೋಪೂಜೆ, ಗೋವಿಗೆ ಆರತಿ ಮಾಡಲು ಅವಕಾಶವಿತ್ತು.

ಇಂದಿನ ದಿನಗಳಲ್ಲಿ ಕಣ್ಮರೆ ಆಗುತ್ತಿರುವ ದೇಶಿ ಗೋ ಸಂಪತ್ತು ಸಂರಕ್ಷಣೆ, ದೇಶಿ ಹಸು ಹಾಲು, ಗೋ ಮೂತ್ರದಿಂದ ತಯಾರಾದ ವಿವಿಧ ಉತ್ಪನ್ನಗಳು ಪ್ರದರ್ಶನಕ್ಕೆ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಗೋವಿಹಾರ ಧಾಮ ಸಾಕ್ಷಿಯಾಯಿತು.

ಇದನ್ನೂ ಓದಿ: ಹಾವೇರಿ ಸಹೋದರರ ಬದುಕು ಬದಲಿಸಿದ ಹೈನುಗಾರಿಕೆ

Last Updated : Feb 4, 2024, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.