ETV Bharat / state

ಅಂಬೇಡ್ಕರ್ ಪ್ರತಿಮೆಗೆ ಅವಮಾನ‌ ಪ್ರಕರಣ: ನಾಲ್ವರ ಬಂಧನ.. ದುಷ್ಕರ್ಮಿಗಳ ವಿರುದ್ಧ ಖರ್ಗೆ ಆಕ್ರೋಶ

author img

By ETV Bharat Karnataka Team

Published : Jan 24, 2024, 10:38 PM IST

Updated : Jan 24, 2024, 10:57 PM IST

ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ

ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿರುವ ಆರೋಪಿಗಳನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ : ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಪೊಲೀಸರು ನಾಲ್ವರು ಕಿಡಿಗೇಡಿಗಳನ್ನ ಬಂಧಿಸಿದ್ದಾರೆ. ಕಲಬುರಗಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಬಾಬಾ ಸಾಹೇಬರಿಗೆ ಅಪಮಾನ ಮಾಡಿದ್ದು ಮನುವಾದಿಗಳೇ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ನಿನ್ನೆ ಇಡೀ ಕಲಬುರಗಿ ನಗರ ರಣರಂಗವಾಗಿ ಮಾರ್ಪಟ್ಟಿತ್ತು. ಕಲಬುರಗಿ ಹೊರವಲಯ ಕೊಟನೂರು (ಡಿ) ಗ್ರಾಮದ ಬಳಿ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಕಿಡಿಗೇಡಿಗಳು ಅಪಮಾನ ಮಾಡಿದ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಲ್ಬರ್ಗಾ ವಿಶ್ವವಿದ್ಯಾಲಯ ಠಾಣೆ ಪೊಲೀಸರು ನಾಲ್ವರನ್ನ ಅರೆಸ್ಟ್ ಮಾಡಿದ್ದಾರೆ. 26 ವರ್ಷದ ಕಿರಣ್, 25 ವರ್ಷದ ಹನುಮಂತ, 31 ವರ್ಷದ ಮಾನು ಹಾಗೂ 38 ವರ್ಷದ ಸಂಗಪ್ಪ ಅಲಿಯಾಸ್ ಸಂಗಮೇಶ್ ಈ ನಾಲ್ವರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೋರ್ವನಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಹೇಳಿದ್ದಾರೆ.

ನಿನ್ನೆ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಘಟನೆ ಖಂಡಿಸಿ ಕಲಬುರಗಿ ಮಹಾನಗರದಲ್ಲಿ ವಿವಿಧ ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಉದ್ರಿಕ್ತರ ಗುಂಪು ಗೂಡ್ಸ್ ವಾಹನ, ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿ, ಜನರ ಆಸ್ತಿಗೆ ಹಾನಿ ಮಾಡಿದ್ರು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಗುಲ್ಬರ್ಗಾ ವಿಶ್ವವಿದ್ಯಾಲಯ ಠಾಣೆ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ ಎಂದಿದ್ದಾರೆ.

ನಿನ್ನೆ ಕೆಲವೆಡೆ ಕಲ್ಲು ತೂರಾಟ ನಡೆಸಲಾಗಿದ್ದು, ಕಲ್ಲು ತೂರಾಟ ನಡೆಸಿದವರಾರು ಅಂಬೇಡ್ಕರ್ ಅಭಿಮಾನಿಗಳಲ್ಲ ಅಂತಾ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ, ಧರಣಿ ಮಾಡುವುದಕ್ಕೆ ಅವಕಾಶವಿದೆ. ಅದು ಬಿಟ್ಟು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವುದು ಸರಿಯಲ್ಲ. ಇಂದು ಅಂಬೇಡ್ಕರ್‌ ಅವರನ್ನ ಅವಮಾನ ಮಾಡಿದ್ದವರನ್ನ ಬಂಧಿಸಲಾಗಿದ್ದು, ಪ್ರತಿಭಟನೆ ವೇಳೆ ಆಸ್ತಿಪಾಸ್ತಿ ಹಾನಿ ಮಾಡಿದವರನ್ನ ಸಹ ಅರೆಸ್ಟ್ ಮಾಡುತ್ತೇವೆ. ಇನ್ನು ಬಸವಣ್ಣ ಹಾಗೂ ಅಂಬೇಡ್ಕರ್‌ ಅವರನ್ನ ಅವಮಾನಿಸೋದು ಮನುವಾದಿಗಳ ಕೆಲಸ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

ಒಟ್ಟಿನಲ್ಲಿ ಕಲಬುರಗಿ ನಗರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಪ್ರಕರಣದಲ್ಲಿ ಸದ್ಯ ನಾಲ್ವರನ್ನ ಬಂಧಿಸಿದ್ದರು ಕೂಡ ನಗರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಇದನ್ನೂ ಓದಿ : ಅಂಬೇಡ್ಕರ್ ಪುತ್ಥಳಿಗೆ ಕಿಡಿಗೇಡಿಗಳಿಂದ ಹಾನಿ: ದಲಿತ ಸಂಘಟನೆಗಳಿಂದ ಆಕ್ರೋಶ

Last Updated :Jan 24, 2024, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.