ETV Bharat / state

ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್‌ನಿಂದ ಕುಣಿಗಲ್ ಮುಖಾಂತರ ಮಾಗಡಿಗೆ ನೀರು: ಮಾಧುಸ್ವಾಮಿ ವಿರೋಧ

author img

By ETV Bharat Karnataka Team

Published : Mar 5, 2024, 4:20 PM IST

ಡಿಸಿಎಂ ಡಿ ಕೆ ಶಿವಕುಮಾರ್ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ನೆಪದಲ್ಲಿ ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ಪ್ಲಾನ್ ಮಾಡಿದ್ದಾರೆ ಎಂದು ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ.

former-minister-jc-madhuswamy-reaction-on-hemavati-express-canal
ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್‌ನಿಂದ ಕುಣಿಗಲ್ ಮುಖಾಂತರ ಮಾಗಡಿಗೆ ನೀರು: ಮಾಧುಸ್ವಾಮಿ ವಿರೋಧ

ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್‌ನಿಂದ ಕುಣಿಗಲ್ ಮುಖಾಂತರ ಮಾಗಡಿಗೆ ನೀರು: ಮಾಧುಸ್ವಾಮಿ ವಿರೋಧ

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್‌ನಿಂದ ಕುಣಿಗಲ್ ಮುಖಾಂತರ ಮಾಗಡಿಗೆ ನೀರು ಹರಿಸುವ ಯೋಜನೆಗೆ ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಕ್ಸ್‌ಪ್ರೆಸ್ ಕೆನಾಲ್‌ನಿಂದ ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ಯೋಜಿಸುತ್ತಿರುವುದು ತುಮಕೂರು ಜಿಲ್ಲೆಗೆ ಮಾಡಿದ ಅನ್ಯಾಯ. ಈಗಾಗಲೇ ಕುಣಿಗಲ್‌ಗೆ 2 ಟಿಎಂಸಿ ನೀರು ಹರಿಯುತ್ತಿದೆ. ಡಿಸಿಎಂ ಡಿ ಕೆ ಶಿವಕುಮಾರ್ ಎಕ್ಸ್‌ಪ್ರೆಸ್ ಕೆನಾಲ್ ನೆಪದಲ್ಲಿ ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ಪ್ಲಾನ್ ಮಾಡಿದ್ದಾರೆ. ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಗೆಲ್ಲಲು ತುಮಕೂರು ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ಲಿಂಕಿಂಗ್ ಕೆನಾಲ್​​ನಿಂದ ತುಮಕೂರು ಜಿಲ್ಲೆಗೆ ಅನ್ಯಾಯ: ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್​ಗೆ​ ಯಾಕೋ ಶಕ್ತಿ ಕಡಿಮೆಯಾಗಿದೆ. ಕಳೆದ ಬಾರಿ ಅವರೇ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಕೂಡ ವಿರೋಧಿಸಿದ್ದರು. ಈಗ ಯಾವುದೋ ಒತ್ತಡದಿಂದ ಅವರಿಬ್ಬರೂ ಸುಮ್ಮನಿದ್ದಾರೆ. ಡಿ ಕೆ ಶಿವಕುಮಾರ್ ರಾಜ್ಯದ ಜನತೆ ತಮ್ಮ ಮಾತು ಕೇಳಬೇಕು ಎಂಬ ಸ್ವಭಾವ ಬಿಡಬೇಕು. ಲಿಂಕಿಂಗ್ ಕೆನಾಲ್​​ನಿಂದ ತುಮಕೂರು ಜಿಲ್ಲೆಗೆ ಅನ್ಯಾಯವಾಗಲಿದೆ. ನಾವು ಈ ಕುರಿತು ಹೋರಾಟ ರೂಪಿಸುತ್ತೇವೆ. ಅನಿವಾರ್ಯವಿದ್ದರೆ ಕೋರ್ಟ್​ಗೂ ಹೋಗುತ್ತೇವೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.

ಕೆಡಿಪಿ ಸಭೆಯಲ್ಲಿ ಬಿಜೆಪಿ, ಜೆಡಿಎಸ್ ಶಾಸಕರು ಎಕ್ಸ್​ಪ್ರೆಸ್ ಕೆನಾಲ್‌ಗೆ ವಿರೋಧ ವ್ಯಕ್ತಪಡಿಸಿದ್ದು, ಅದಕ್ಕೆ ಸಚಿವ ಡಾ ಜಿ ಪರಮೇಶ್ವರ್ ಕೂಡಾ ಮಣಿಯಲೇಬೇಕಿರುವ ಅನಿವಾರ್ಯ ಹಾಗೂ ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ ಮಾಧ್ಯಮಗೋಷ್ಠಿ ಮೂಲಕ ವಿರೋಧ ವ್ಯಕ್ತಪಡಿಸಿದ ಬೆಳವಣಿಗೆ ಎರಡೂ ಏಕಕಾಲದಲ್ಲಿ ನಡೆದಿದೆ. ಹಾಲಿ - ಮಾಜಿಗಳು ಸೇರಿದಂತೆ ಜಿಲ್ಲೆಯ ಜನಪ್ರನಿಧಿಗಳ ನಿಲುವು ಎಕ್ಸ್‌ಪ್ರೆಸ್ ಕೆನಾಲ್ ವಿಚಾರದಲ್ಲಿ ಪ್ರತ್ಯಕ್ಷ- ಪರೋಕ್ಷವಾಗಿ ಒಮ್ಮತ ಇರುವುದು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಪ್ಲಾನ್​ಗೆ ಟಕ್ಕರ್ ನೀಡಿದಂತೆ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನ ಜನತೆಗೆ ನೀರು ಪೂರೈಸುವುದು ಸರ್ಕಾರದ ಕರ್ತವ್ಯ, ಯಾರೂ ಗಾಬರಿಯಾಗಬೇಡಿ: ಡಿಸಿಎಂ

ವೃಷಭಾವತಿ ವ್ಯಾಲಿ ಯೋಜನೆಗೆ ಸಿಎಂ ಚಾಲನೆ(ನೆಲಮಂಗಲ): ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಬಯಲು ಸೀಮೆ ಜಿಲ್ಲೆಗಳ ಅಂತರ್ಜಲ ಅಭಿವೃದ್ದಿಗಾಗಿ ಕೈಗೊಂಡಿರುವ ವೃಷಭಾವತಿ ಯೋಜನೆ ಹಾಗೂ ಸುಮಾರು 869 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸೋಮವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿದ್ದರು. ವೇದಿಕೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ವೃಷಭಾವತಿ ಏತ ನೀರಾವರಿ ಯೋಜನೆಯ ಕೆರೆ ತುಂಬಿಸುವ ಕೆಲಸಕ್ಕೆ ಮುಂದಾಗಿದ್ದೇವೆ. ಮೊದಲನೇ ಹಂತದಲ್ಲಿ ಒಂದು ಸಾವಿರ ಕೋಟಿಗೂ ಹೆಚ್ಚು ವೆಚ್ಚದಲ್ಲಿ 70 ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತದೆ ಎಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.