ETV Bharat / state

ಶಿವಮೊಗ್ಗ ಲೋಕಸಭೆಗೆ ಈಶ್ವರಪ್ಪ ನಾಮಪತ್ರ ಸಲ್ಲಿಕೆ: ಎದುರಾಳಿಗಳಿಗೆ ತಿರುಗೇಟು - Eshwarappa Nomination

author img

By ETV Bharat Karnataka Team

Published : Apr 12, 2024, 2:05 PM IST

Updated : Apr 12, 2024, 7:12 PM IST

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಉಮೇದುವಾರಿಕೆ ಸಲ್ಲಿಸಿದ್ದಾರೆ.

Former DCM K S Eshwarappa filed nomination in Shivamogga
ಶಿವಮೊಗ್ಗ ಲೋಕಸಭೆಗೆ ಈಶ್ವರಪ್ಪ ನಾಮಪತ್ರ ಸಲ್ಲಿಕೆ: ಎದುರಾಳಿಗಳಿಗೆ ತಿರುಗೇಟು

ಶಿವಮೊಗ್ಗ ಲೋಕಸಭೆಗೆ ಈಶ್ವರಪ್ಪ ನಾಮಪತ್ರ ಸಲ್ಲಿಕೆ

ಶಿವಮೊಗ್ಗ: ರಾಜ್ಯ ಬಿಜೆಪಿಯ ಬಂಡಾಯ ನಾಯಕ ಕೆ.ಎಸ್.ಈಶ್ವರಪ್ಪನವರು ಇಂದು ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇಂದು ಬೆಳಗ್ಗೆ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್​​ನಲ್ಲಿನ ಗಣಪನಿಗೆ ಬೆಂಬಲಿಗರು ಮತ್ತು ಕುಟುಂಬ ಸಮೇತ ಈಶ್ವರಪ್ಪ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಈಶ್ವರಪ್ಪ ಗೆಲುವಿಗೆ ಗಣಪನ ಭಜನೆ ಮಾಡಲಾಯಿತು.

ಪೂಜೆ ಬಳಿಕ ಅಲ್ಲಿಂದ ಜನ ಸಾಗರದ ಮೂಲಕ ನಾಮಪತ್ರ ಸಲ್ಲಿಸಲು ಈಶ್ವರಪ್ಪ ಮರೆವಣಿಗೆ ನಡೆಸಿದರು. ಗಾಂಧಿ ಬಜಾರ್​​ನ ಬಸವಣ್ಣನ ದೇವಾಲಯದ ಬಳಿ ಮೆರವಣಿಗೆ ಬರುವಷ್ಟರಲ್ಲಿ ನಾಮಪತ್ರ ಸಲ್ಲಿಕೆಯ ಮುಹೂರ್ತ ಮೀರುತ್ತಿದ್ದ ಹಿನ್ನೆಲೆಯಲ್ಲಿ ಮೆರವಣಿಗೆಯನ್ನು ಮಧ್ಯದಲ್ಲಿಯೇ ಬಿಟ್ಟು ಜಿಲ್ಲಾಧಿಕಾರಿಗಳ ಕಚೇರಿಗೆ ದೌಡಾಯಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಈಶ್ವರಪ್ಪನವರ ಪತ್ನಿ ಜಯಲಕ್ಷ್ಮೀ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಸಿದ್ದಲಿಂಗ ಶಾಸ್ತ್ರಿ ಹಾಗೂ ಉಮಾ ಎಂಬುವರು ಹಾಜರಿದ್ದರು.

ನಾಮಪತ್ರ ಸಲ್ಲಿಕೆಯ ನಂತರ ಮಾತನಾಡಿದ ಈಶ್ವರಪ್ಪನವರು, ''ಶಿವಮೊಗ್ಗ ಲೋಕಸಭಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ಸಲ್ಲಿಕೆಗೂ ಮುನ್ನ 8 ವಿಧಾನಸಭೆ ಕ್ಷೇತ್ರದಿಂದ ಜನರು ಬಂದಿದ್ದಾರೆ. ಮನೆ, ಮನೆಗೆ ಕಾರ್ಯಕರ್ತರು ಹೋಗಿ ಹಿಂದುತ್ವಕ್ಕೆ ಅನ್ಯಾಯ ಆಗಿರುವ ಬಗ್ಗೆ ಹೇಳುತ್ತಾರೆ. ಶಿವಮೊಗ್ಗದ ಜನರು ನನಗೆ ಬೆಂಬಲ ಕೊಡುತ್ತಾರೆ. ಈಗಾಗಲೇ 25-30 ಸಾವಿರ ಜನ ಬಂದು ಬೆಂಬಲ ಸೂಚಿಸಿದ್ದಾರೆ. ನಾಮಪತ್ರ ಸಲ್ಲಿಸಲ್ಲ ಎಂದವರಿಗೆ ಮೆರವಣಿಗೆಯೇ ಉತ್ತರ'' ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಈಶ್ವರಪ್ಪ ನಾಮಪತ್ರ ಹಿಂದಕ್ಕೆ ಪಡೆಯಲು ಇನ್ನೂ ಅವಕಾಶವಿದೆ: ವಿಜಯೇಂದ್ರ - B Y Vijayendra

ಕೇಸರಿಮಯವಾಗಿದ್ದ ಮೆರವಣಿಗೆ: ಈಶ್ವರಪ್ಪ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಕೇಸರಿ ಬಾವುಟಗಳು ರಾರಾಜಿಸಿದವು. ಮೆರವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲುವ ತದ್ರೂಪಿಯೊಬ್ಬರು ಭಾಗವಹಿಸಿದ್ದು ವಿಶೇಷವಾಗಿತ್ತು. ಜೊತೆಗೆ ಮೆರವಣಿಗೆಯಲ್ಲಿ ವಿವಿಧ ಸಾಂಪ್ರದಾಯಿಕ ಕಲಾ ತಂಡಗಳು ಪಾಲ್ಗೊಂಡಿದ್ದವು.

ಶಿವಮೊಗ್ಗ ಲೋಕಸಭೆಗೆ ಈಶ್ವರಪ್ಪ ನಾಮಪತ್ರ ಸಲ್ಲಿಕೆ

ಗದಗ, ವಿಜಯಪುರ, ಹಾವೇರಿ, ರಾಯಚೂರು ಸೇರಿದಂತೆ ವಿವಿಧ ಭಾಗಗಳಿಂದ ಈಶ್ವರಪ್ಪ ಅವರ ಅಭಿಮಾನಿಗಳು ಆಗಮಿಸಿದ್ದರು. ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಈ.ವಿಶ್ವಾಸ್, ಆರತಿ ಪ್ರಕಾಶ್, ಸುವರ್ಣ ಶಂಕರ್, ಗನ್ನಿ ಶಂಕರ್, ಲತಾ ಗಣೇಶ್ ಸೇರಿದಂತೆ ಇತರೆ ಸ್ಥಳೀಯ ಮುಖಂಡರು ಈ ವೇಳೆ ಹಾಜರಿದ್ದರು.

ಯಡಿಯೂರಪ್ಪ ಹಾಗೂ ಅವರ ಪುತ್ರರ ವಿರುದ್ಧ ಸ್ಪರ್ಧೆ: ಯಡಿಯೂರಪ್ಪ ಹಾಗೂ ಅವರ ಮಕ್ಕಳ ಕೈಯಲ್ಲಿ ಬಿಜೆಪಿ ಸಿಲುಕಿದೆ. ಇವರ ಕೈಯಿಂದ ಪಕ್ಷವನ್ನು ಮುಕ್ತ ಮಾಡಲು ಕುಟುಂಬ ರಾಜಕೀಯವನ್ನು ಹೊರ ತರಲು ನನ್ನ ಸ್ಪರ್ಧೆ. ಹಿಂದೂತ್ವವಾದಿಗಳಿಗೆ ಪಕ್ಷದಲ್ಲಿ ಮನ್ನಣೆ ಸಿಗುತ್ತಿಲ್ಲ. ಬಿಜೆಪಿ ಪಕ್ಷ ಶುದ್ಧೀಕರಣ ಸೇರಿದಂತೆ ಪಕ್ಷದಲ್ಲಿನ ನೊಂದವರ ಪರವಾಗಿ ಸ್ಪರ್ಧೆ ಮಾಡುತ್ತಿರುವುದಾಗಿ ಈಶ್ಬರಪ್ಪ ಹೇಳುತ್ತಿದ್ದಾರೆ.

ಬಿಜೆಪಿ ನಾಯಕರಿಂದ ಮನವೊಲಿಕೆ ವಿಫಲ: ಈಶ್ವರಪ್ಪನವರನ್ನು ಪಕ್ಷೇತರವಾಗಿ ಸ್ಪರ್ಧೆ ಮಾಡುವುದನ್ನು ತಡೆಯಲು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಗರವಾಲ ಹಾಗೂ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರ ಮನವೊಲಿಕೆ ಪ್ರಯತ್ನವೂ ವಿಫಲವಾಗಿತ್ತು. ನಂತರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ದೆಹಲಿಗೆ ಮಾತುಕಥೆಗೆ ಬರಲು ಹೇಳಿ ಕರೆಯಿಸಿ, ಈಶ್ವರಪ್ಪನವರ ಜೊತೆ ಮಾತನಾಡದೆ ವಾಪಸ್ ಕಳುಹಿಸಿದ್ದರು.

ಈಶ್ವರಪ್ಪ ಜೊತೆಗೆ ಬಿಜೆಪಿಯ ಶಿವಮೊಗ್ಗ ನಗರ ನಾಯಕರು ಅಥವಾ ಜಿಲ್ಲಾ‌ ಮಟ್ಟದ ನಾಯಕರು ಬಂದಿಲ್ಲ. ಹಾಗೆಯೇ ಶಿವಮೊಗ್ಗ‌ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಇತರೆ ಪಾಲಿಕೆ ಸದಸ್ಯರು, ಈಶ್ವರಪ್ಪನವರ ಆಪ್ತನಂತಿದ್ದ ಜ್ಞಾನೇಶ್ ಅವರು ಕೂಡ ಈಶ್ವರಪ್ಪ ಅವರಿಗೆ ಈವರೆಗೆ ಬೆಂಬಲ ನೀಡಿಲ್ಲ.

ಇದನ್ನೂ ಓದಿ: ಈಶ್ವರಪ್ಪ ನಾಮಪತ್ರ ಹಿಂದಕ್ಕೆ ಪಡೆಯಲು ಇನ್ನೂ ಅವಕಾಶವಿದೆ: ವಿಜಯೇಂದ್ರ - B Y Vijayendra

Last Updated :Apr 12, 2024, 7:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.