ETV Bharat / state

ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಅನುಷ್ಠಾನ ಮಾಡುವಂತೆ ಸರ್ಕಾರಕ್ಕೆ ಬಡಿಗೆ ಹಿಡಿದು ಕೇಳುತ್ತೇವೆ: ಬಸವರಾಜ ಬೊಮ್ಮಾಯಿ

author img

By ETV Bharat Karnataka Team

Published : Jan 20, 2024, 1:05 AM IST

ಎಸ್ಟಿ ಸಮುದಾಯಕ್ಕೆ ಶೇ 7 ರಷ್ಟು ಮೀಸಲಾತಿ ಹೆಚ್ಚಳವನ್ನು ಮೋದಿ ಸರ್ಕಾರ ಮಾಡಿದ ಮೇಲೆ ರಾಜ್ಯದಲ್ಲಿ ಶೇ.7ರಷ್ಟು ಮೀಸಲಾತಿ ಬೇಕು ಎಂದು ಆಗ್ರಹ ಶುರುವಾಯಿತು. ಹಿಂದುಳಿದ ವರ್ಗದ ಆಯೋಗಕ್ಕೆ ಸಂವಿಧಾನಬದ್ಧ ಅಧಿಕಾರ ‌ಕೊಟ್ಟಿದ್ದು ನರೇಂದ್ರ ಮೋದಿ ಸರ್ಕಾರ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Etv Bharat
Etv Bharat

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್ಟಿ ಸಮುದಾಯದ ಮೀಸಲಾತಿಯನ್ನು ಶೇ 3 ರಿಂದ 7ಕ್ಕೆ ಹೆಚ್ಚಳ ಮಾಡಿರುವುದನ್ನು ಅನುಷ್ಠಾನ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಬಡಿಗೆ ಹಿಡಿದು ಕೇಳುತ್ತೇನೆ. ಎಸ್ಟಿ ಸಮುದಾಯದವರು ಬಿಟ್ಟರೂ, ನಾನು ಈ ಸಮದಾಯಕ್ಕೆ ನ್ಯಾಯ ಕೊಡಿಸುವವರೆಗೆ ಬಿಡುವುದಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾಷಣದಿಂದ‌ ಯಾವುದೇ ಸಮಾಜ ಉದ್ಧಾರ ಆಗಿಲ್ಲ. ಸಾಮಾಜಿಕ ನ್ಯಾಯ ಕೆಲವೇ ಕೆಲವು ಜನರಿಗೆ ಮೀಸಲಾಗಿದೆ. ಈ ಸಮಾಜದ ಕಡು ಬಡವರಿಗೆ, ಗ್ರಾಮೀಣ ಜನರಿಗೆ ಇದರ ಪ್ರಯೋಜನ‌ ಸಿಕ್ಕಿಲ್ಲ. ಅವರ ಅಪ್ಪನಿಗೆ, ಮಗನಿಗೆ ಸೊಸೆಗೆ ಸಿಕ್ಕಿದೆ. ಸ್ವಾತಂತ್ರ್ಯ ಬಂದು ಎಪ್ಪತೈದು ವರ್ಷ ಆಯಿತು. ಸಮಾಜದ ಕಟ್ಟ ಕಡೆಯ ಜನರಿಗೆ ತಲುಪದಿರುವುದು ದುರಂತ. ಇಷ್ಟು ವರ್ಷ ಯಾವ ರೀತಿಯ ಆಡಳಿತ ನಡೆಸಿದ್ದಾರೆ ಅಂಥ ತಾವು ಯೋಚಿಸಿ, ಎಸ್ಸಿ ಎಸ್ಟಿಗೆ ಕೇವಲ ಜಾತಿಗಳನ್ನು ಸೇರಿಸಿದರು ಹೊರತು ಮೀಸಲಾತಿ ಹೆಚ್ಚಳ ಮಾಡಲಿಲ್ಲ ಎಂದು ಆರೋಪಿಸಿದರು.

ಎಸ್ಟಿ ಸಮುದಾಯಕ್ಕೆ ಶೇ 7 ರಷ್ಟು ಮೀಸಲಾತಿಯನ್ನು ಮೋದಿ ಸರ್ಕಾರ ಮಾಡಿದ ಮೆಲೆ ರಾಜ್ಯದಲ್ಲಿ ಶೇ 7% ಮೀಸಲಾತಿ ಬೇಕು ಎಂದು ಆಗ್ರಹ ಶುರುವಾಯಿತು. ಹಿಂದುಳಿದ ವರ್ಗದ ಆಯೋಗಕ್ಕೆ ಸಂವಿಧಾನ ಬದ್ದ ಅಧಿಕಾರ ‌ಕೊಟ್ಟಿದ್ದು ನರೇಂದ್ರ ಮೋದಿ ಸರ್ಕಾರ. ಡೋಂಗಿ ಸಾಮಾಜಿಕ ನ್ಯಾಯದ ನಾಯಕರು ಈ ಎಸ್ಟಿ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ಯಾರು ನಮಗೆ ನ್ಯಾಯ ಕೊಡುತ್ತಾರೆ. ಯಾರು ನಮಗೆ ಅವಕಾಶ ಕೊಡುತ್ತಾರೆ ಅವರ ಶಕ್ತಿಗೆ ನಿಮ್ಮ ಶಕ್ತಿ ಜೋಡಿಸಬೇಕು. 15 ಜನ ಎಸ್ಟಿ ಶಾಸಕರು ಸೋತರು, ಅದಕ್ಕೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮೀಸಲಾತಿ ಹೆಚ್ಚಳಕ್ಕೆ ಸ್ವಾಮೀಜಿಗಳು ಸಮಾಜದ ಮುಖಂಡರು ಹೋರಾಟ ಮಾಡಿದ್ದೀರಿ ಆದರೆ, ಕಾಂಗ್ರೆಸ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಮ್ಮ ಸರ್ಕಾರ ಬಂದಾಗ ಮಹರ್ಷಿ ವಾಲ್ಮೀಕಿ ಉತ್ಸವವನ್ನು ಸರ್ಕಾರದಿಂದ ಆಚರಿಸುವಂತೆ ಕಲಬುರ್ಗಿ ಕ್ಯಾಬಿನೆಟ್‌ನಲ್ಲಿ ಸಚಿವರು ಪ್ರಸ್ತಾಪ ಮಾಡಿದರು. ಅದೇ ಸಂಪುಟದಲ್ಲಿ ತೀರ್ಮಾನ ಮಾಡಲಾಯಿತು. ಅದರ ಪರಿಣಾಮ ಸಮುದಾಯ ಸಂಘಟಿತವಾಗಿ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಮಾಡಲು ಸಾಧ್ಯವಾಯಿತು. ನಮ್ಮ ಅವಧಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಲು ತೀರ್ಮಾನ ಮಾಡಿದಾಗ‌ ಜೇನುಗೂಡಿಗೆ ಕೈಹಾಕಬೇಡಿ ಅಂತ ಹೇಳಿದರು.

ನನಗೆ ಜೇನು ಕಡಿದರೂ ಅವರಿಗೆ ಜೇನು ಕೊಡುತ್ತೇನೆ, ಅಂತ ಮೀಸಲಾತಿ ಹೆಚ್ಚಳ ಮಾಡುವ ತೀರ್ಮಾನ ಮಾಡಿದೆ. ಅದರ ಪರಿಣಾಮ ಮೆಡಿಕಲ್ ಎಂಜನಿಯರಿಂಗ್ ಕಾಲೇಜುಗಳಲ್ಲಿ ಎಸ್ಟಿ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೀಟು ಸಿಗುತ್ತಿವೆ. ಮಿಸಲಾತಿ ಹೆಚ್ಚಳದ ನಿರ್ಣಯ ನಾವು ಮಾಡಿದ್ದೇವೆ. ಅದನ್ನು ಸರಿಯಾಗಿ ಅನುಷ್ಠಾನ ಮಾಡುವಂತೆ ಸರ್ಕಾರಕ್ಕೆ ಬಡಿಗೆ ಹಿಡಿದು ನಿಲ್ಲುತ್ತೇವೆ. ಎಸ್ಟಿ ಸಮುದಾಯದವರು ಬಿಟ್ಟರು ನಾನು ಈ ಸಮದಾಯಕ್ಕೆ ನ್ಯಾಯ ಕೊಡಿಸುವವರೆಗೂ ಬಿಡುವುದಿಲ್ಲ. ಎಸ್ಟಿ ಸಮುದಾಯಕ್ಕೆ ನ್ಯಾಯ ಕೊಡಿಸಿರುವ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಬೋಗಸ್ ಒಳ ಮೀಸಲಾತಿ: ಕಾಂಗ್ರೆಸ್ ನವರು ಈಗ ಸದಾಶಿವ ಆಯೋಗದ ವರದಿ ಜಾರಿ ಮಾಡುವುದಾಗಿ ಹೇಳುತ್ತಾರೆ. ಮತ್ತೊಂದೆಡೆ ಕೇಂದ್ರಕ್ಕೆ ಶಿಪಾರಸು ಮಾಡುವುದಾಗಿ ಹೇಳುತ್ತಾರೆ. ಈಗ ಚುನಾವಣೆ ಬರುತ್ತಿದೆ ಅಂತ ಎಸ್ಸಿ ಸಮುದಾಯದ ಜನರು ತಮ್ಮನ್ನು ಕೇಳುತ್ತಾರೆ ಎಂದು ಈಗ ವರದಿ ಜಾರಿ ಮಾಡುವುದಾಗಿ ಹೇಳುತ್ತಾರೆ. ಈಗ ಮಾಡುತ್ತಿರುವುದು ಎಲ್ಲವೂ ಬೋಗಸ್ ಒಳ ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ಇದೆ. ಅದನ್ನು ಈಗ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಆಪಾದಿಸಿದರು.

ನಿಮ್ಮ ಸಮುದಾಯದಲ್ಲಿ ನಾಯಕರನ್ನು ಹುಟ್ಟು ಹಾಕಿ, ಅನೇಕ ನಾಯಕರಿದ್ದಾರೆ. ಬೇರೆಯವರ ಭಾಷಣಕ್ಕೆ ಉಧೊ ಉಧೊ ಅನ್ನುವ ಬದಲು ನಿಮ್ಮಲ್ಲೆ ನಾಯಕರನ್ನು ಹುಟ್ಡು ಹಾಕಿ. ವಿಜಯನಗರ ಸಾಮ್ರಾಜ್ಯ ಉಳಿಸಿರುವ ಸಮುದಾಯ ಇದು. ಮದಕರಿ ನಾಯಕನಿಂದ ಹಿಡಿದು ಸುರಪುರದ ನಾಯಕರ ವರೆಗೂ ವಿಜಯನಗರ ಸಾಮ್ರಾಜ್ಯ ಉಳಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲೂ ಮುಂಚೂಣಿಯಲ್ಲಿರುವ ಸಮುದಾಯ ಇದು. ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿ ಆಗುವುದು ನಿಶ್ಚಿತ. ಅದರಲ್ಲಿ ಕರ್ನಾಟಕದ ಪಾಲು ಎಷ್ಟು ಎನ್ನುವುದು ಮುಖ್ಯ. ಅದಕ್ಕಾಗಿ 28 ಸ್ಥಾನ ಗೆಲ್ಲಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

----

ಕೀ ವರ್ಡ್​

ಎಸ್ಟಿ ಸಮುದಾಯ

ಮೀಸಲಾತಿ

ಬಸವರಾಜ ಬೊಮ್ಮಾಯಿ

ಒಳ ಮೀಸಲಾತಿ

state govt

Conclusion:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.