ETV Bharat / state

ಪ್ರಯಾಣಿಕರ ಕುಟುಂಬಕ್ಕೂ ಕೆಎಸ್ಆರ್​ಟಿಸಿಯಿಂದ ಆರ್ಥಿಕ ಭದ್ರತೆ: ಅಪಘಾತದಲ್ಲಿ ಮೃತಪಟ್ಟವರ ಅವಲಂಬಿತರಿಗೆ ₹ 10 ಲಕ್ಷ ಪರಿಹಾರ

author img

By ETV Bharat Karnataka Team

Published : Feb 19, 2024, 6:35 PM IST

ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ಕುಟುಂಬಕ್ಕೆ ಕೆಎಸ್‌ಆರ್‌ಟಿಸಿಯಿಂದ ಆರ್ಥಿಕ ನೆರವು ನೀಡಿದೆ.

ಕೆಎಸ್ಆರ್​ಟಿಸಿ
ಕೆಎಸ್ಆರ್​ಟಿಸಿ

ಬೆಂಗಳೂರು : ಕೆಎಸ್ಆರ್​ಟಿಸಿ ಪ್ರಯಾಣ ಆರಾಮದಾಯಕ ಮಾತ್ರವಲ್ಲ, ಆರ್ಥಿಕ ಭದ್ರತೆಯೂ ಆಗಿದೆ. ಅಪಘಾತದಲ್ಲಿ ಮೃತಪಟ್ಟವರಿಗೆ ಸಾರಿಗೆ ನಿಗಮದ ಸಿಬ್ಬಂದಿಯ ಕುಟುಂಬಕ್ಕೆ ಆರ್ಥಿಕ ಬಲ ನೀಡುತ್ತಿರುವ ಕೆಎಸ್ಆರ್​ಟಿಸಿ ತನ್ನ ಪ್ರಯಾಣಿಕರ ಕುಟುಂಬದ ಹಿತವನ್ನು ಕಾಯಲು ಮುಂದಾಗಿದೆ.

ಈಗಾಗಲೇ ಅಪಘಾತದಲ್ಲಿ ಸಾವನ್ನಪ್ಪಿದ ಸಾರಿಗೆ ಸಿಬ್ಬಂದಿಯ ಕುಟುಂಬಗಳಿಗೆ ಒಂದು ಕೋಟಿ ರೂ. ಅಪಘಾತ ವಿಮೆ ಮಾಡಿಸುವ ಮೂಲಕ ಆರ್ಥಿಕ ಭದ್ರತೆಯನ್ನು ಕೆಎಸ್ಆರ್​ಟಿಸಿ ಕಲ್ಪಿಸಿದೆ. ಇದೇ ಮೊದಲ ಬಾರಿಗೆ ನಿಗಮದ ಬಸ್ ಅಪಘಾತದಲ್ಲಿ ಮೃತಪಡುವ ಪ್ರಯಾಣಿಕರ ಕುಟುಂಬಕ್ಕೆ 10 ಲಕ್ಷ ರೂ.ಗಳ ಪರಿಹಾರವನ್ನು ಕೆಎಸ್ಆರ್​ಟಿಸಿ ನೀಡಿದೆ. ಪರಿಹಾರದ ಚೆಕ್ ಅನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕೆಎಸ್ಆರ್​ಟಿಸಿ ಅಧ್ಯಕ್ಷ ಎಸ್.ಆರ್ ಶ್ರೀನಿವಾಸ್ ಅವರು ಸೋಮವಾರ ವಿತರಿಸಿದರು.

ಈ ಹಿಂದೆ ನಿಗಮದ ಬಸ್​ಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ​ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ 3 ಲಕ್ಷ ರೂ. ಪರಿಹಾರ ಚೆಕ್​ಅನ್ನು ನೀಡಲಾಗುತ್ತಿತ್ತು. ಇದೀಗ ಅವಲಂಬಿತರಿಗೆ ಹೆಚ್ಚಿನ ಆರ್ಥಿಕ ಸೌಲಭ್ಯವನ್ನು ಒದಗಿಸುವ ದೃಷ್ಟಿಯಿಂದ 2024ರ ಜನವರಿ 1 ರಿಂದ ಜಾರಿಗೆ ಬರುವಂತೆ ಈ ಪರಿಹಾರ ಮೊತ್ತವನ್ನು 10 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿತ್ತು.

ಅದರಂತೆ 2024 ರ ಫೆಬ್ರವರಿ 4 ರಂದು ಹಾಸನ ವಿಭಾಗದ ಚನ್ನರಾಯಪಟ್ಟಣ ಘಟಕದ ವಾಹನ ಸಂಖ್ಯೆ ಕೆಎ-13-ಎಫ್-2261 ಬಸ್ ಬೆಂಗಳೂರು ಧರ್ಮಸ್ಥಳ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿರುವಾಗ ಸಕಲೇಶಪುರದ ಸಮೀಪ ಬಾಗೆ ಎಂಬ ಸ್ಥಳದ ತಿರುವಿನಲ್ಲಿ ಅಪಘಾತ ಸಂಭವಿಸಿತ್ತು. ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಜಿ.ಎನ್ ಅಮೃತ್, (34 ವರ್ಷ) ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಹೀಗಾಗಿ ಮೃತರ ತಂದೆ ಜಿ.ಡಿ ನಾಗರಾಜು ಅವರಿಗೆ ಇಂದು 10 ಲಕ್ಷ ರೂ. ಗಳ ಅಪಘಾತ ಪರಿಹಾರದ ಚೆಕ್ ಅನ್ನು ವಿತರಿಸಿದ ರಾಮಲಿಂಗಾರೆಡ್ಡಿ ಮತ್ತು ಶ್ರೀನಿವಾಸ್ ಅವರು​ ಸಾಂತ್ವನ ಹೇಳಿದರು.

ಅಪಘಾತಗಳು ಆಕಸ್ಮಿಕವೇ ಆದರೂ ಅದರಿಂದಾಗುವ ಪ್ರಾಣ ಹಾನಿ ಮತ್ತು ಕುಟುಂಬಕ್ಕೆ ಉಂಟಾಗುವ ನಷ್ಟವನ್ನು ಭರಿಸಲು ಅಸಾಧ್ಯ. ಆದರೂ ನಿಗಮವು ಪ್ರಯಾಣಿಕರೆಡೆಗಿನ ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಜಾರಿಗೊಳಿಸಿರುವುದಾಗಿದೆ. ಇತ್ತೀಚೆಗಷ್ಟೇ ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ರಾತ್ರಿ ಪಾಳಿಯ ಬಸ್​ಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರಿಗೆ ಫ್ಲಾಸ್ಕ್ (ಕಾಪಿ/ಟೀ/ಬಿಸಿನೀರು ಕುಡಿಯಲು ಅನುವಾಗುವಂತೆ) ನೀಡಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಈ ಸಂದರ್ಭದಲ್ಲಿ ಕೆಎಸ್ಆರ್​ಟಿಸಿ ಎಂಡಿ ವಿ.ಅನ್ಬುಕುಮಾರ್, ನಿರ್ದೇಶಕಿ ಡಾ. ನಂದಿನಿ ದೇವಿ ಹಾಗು ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಇದನ್ನೂ ಓದಿ : 50 ನೂತನ ಬಸ್​ಗಳ ಲೋಕಾರ್ಪಣೆ; ಅಪಘಾತ ರಹಿತ 38 ಚಾಲಕರಿಗೆ ಸಚಿವ ರಾಮಲಿಂಗಾರೆಡ್ಡಿ ಸನ್ಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.