ETV Bharat / state

ಜಾತಿಗಣತಿ ವರದಿ ಕುರಿತು ಯಾವುದೇ ಕ್ರಮ ಇಲ್ಲ: ಸರ್ಕಾರದಿಂದ ಹೈಕೋರ್ಟ್​ಗೆ ಮಾಹಿತಿ - High Court

author img

By ETV Bharat Karnataka Team

Published : Mar 21, 2024, 9:21 PM IST

ಸರ್ಕಾರದ ಜಾತಿಗಣತಿ ವರದಿ ಆಕ್ಷೇಪಿಸಿ ಸಮಾಜ ಸಂಪರ್ಕ ವೇದಿಕೆ (ರಿ) ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​ಗೆ ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಅರ್ಜಿಯನ್ನು ವಿಚಾರಣೆ ನಡೆಸಿತು.

highcourt
ಹೈಕೋರ್ಟ್​

ಬೆಂಗಳೂರು: ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ (ಜಾತಿ ವರದಿ) ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಜೂನ್ 6ರ ವರೆಗೆ ರಾಜ್ಯ ಸರ್ಕಾರದಿಂದ ಯಾವುದೇ ಕ್ರಮ ಆಗುವುದಿಲ್ಲ ಎಂದು ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜ್ ಆಯೋಗದ ಅಂಕಿ - ಅಂಶಗಳನ್ನು ಆಧರಿಸಿ ಸಿದ್ದಪಡಿಸಲಾದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಆಕ್ಷೇಪಿಸಿ ಸಮಾಜ ಸಂಪರ್ಕ ವೇದಿಕೆ (ರಿ) ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹಾಜರಿದ್ದ ಅಡ್ವೋಕೇಟ್ ಜನರಲ್, ಆಯೋಗದ ಅವಧಿ ಮುಗಿದ ಹಿನ್ನೆಲೆ ಸರ್ಕಾರ ವರದಿ ಸ್ವೀಕರಿಸಿದೆ. ಚುನಾವಣೆ ಘೋಷಣೆಯಾಗುವ ಸಾಕಷ್ಟು ಮುಂಚೆ ವರದಿ ಸಲ್ಲಿಸಲಾಗಿದೆ. ಚುನಾವಣೆ ಘೋಷಣೆಗೂ, ಚುನಾವಣೆ ಜರುಗುವುದಕ್ಕೂ ವರದಿಯನ್ನು ಸರ್ಕಾರ ಸ್ವೀಕರಿಸುವುದಕ್ಕೂ ಸಂಬಂಧವಿಲ್ಲ. ಈಗ ಆತುರ ಮಾಡುತ್ತಿರುವ ಅರ್ಜಿದಾರರು 2014ರಲ್ಲಿ ತಿದ್ದುಪಡಿಯಾದ ಕಾಯ್ದೆಯನ್ನು 2024ರಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

ಅಷ್ಟಕ್ಕೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದು ಎಲ್ಲರಿಗೂ ತಿಳಿದ ವಿಚಾರ. ನೀತಿ ಸಂಹಿತೆ ಜಾರಿ ಇರುವಾಗ ಸಚಿವ ಸಂಪುಟ ಸಭೆ ನಡೆಸಲಾಗುವುದಿಲ್ಲ. ಹೀಗೆ ಸಮೀಕ್ಷೆಯ ವರದಿಗೆ ಸಂಬಂಧಿಸಿದಂತೆ ಜೂನ್ 6ರವರೆಗೆ ಸರ್ಕಾರದಿಂದ ಯಾವ ಕ್ರಮವೂ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ರವಿವರ್ಮ ಕುಮಾರ್, ಜನಗಣತಿ ಕಾಯ್ದೆಯಡಿ ಗಣತಿ ಮಾಡಲಾಗಿದೆಯೇ ಅನ್ನುವುದು ಇಲ್ಲಿರುವ ಪ್ರಶ್ನೆ. ಆದರೆ, ಅದು ಕೇಂದ್ರ ಸರ್ಕಾರದ ವ್ಯಾಪ್ತಿ ಹಿಂದುಳಿದ ವರ್ಗಗಳ ಆಯೋಗ ಜನಗಣತಿ ನಡೆಸಿಲ್ಲ. 54 ಅಂಶಗಳನ್ನು ಆಧರಿಸಿ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ-1995ರ ಸೆಕ್ಷನ್11ರ ಪ್ರಕಾರ ಸಮೀಕ್ಷಾ ವರದಿಗೆ ಶಾಸನ ಬದ್ಧತೆ ಇದೆ. ಬಿಹಾರದಲ್ಲಿ ಇಂತಹ ಸಮೀಕ್ಷೆ ಆಗಿದೆ, ಒಡಿಶಾದಲ್ಲಿ ನಡೀತಿದೆ, ತಮಿಳುನಾಡಿನಲ್ಲಿ ಪ್ರಾರಂಭವಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರ ಅಭಿಷೇಕ್ ಕುಮಾರ್, ಎಚ್. ಕಾಂತರರಾಜ್ ವರದಿ ಸಲ್ಲಿಸುವಾಗ ಆಯೋಗದ ಕಾರ್ಯದರ್ಶಿ ಸಹಿ ಇರಲಿಲ್ಲ. ಅದೇ ಆಧಾರದಲ್ಲಿ ಈಗ ವರದಿ ಸಲ್ಲಿಸಲಾಗಿದೆ. ನಮಗೆ ವರದಿ ಬಗ್ಗೆ ಆತಂಕವಿದೆ. ಆಯೋಗ ಸ್ವತಂತ್ರವಾಗಿ ಸಮೀಕ್ಷೆ ನಡೆಸಿದೆಯೋ ಅಥವಾ ಸರ್ಕಾರದ ಅಣತಿಯಂತೆ ಆಗಿದೆಯೇ ಎಂಬ ಅನುಮಾನವಿದೆ. ವರದಿಯು ಚುನಾವಣೆ ಮೇಲೆ ಇದು ಪರಿಣಾಮ ಬೀರಬಹುದು. ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ವರದಿ ಸ್ವೀಕರಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಾದ ಆಲಿಸಿದ ನ್ಯಾಯಪೀಠ ಕೇಂದ್ರ ಸರ್ಕಾರದ ಗೃಹ ಕಾರ್ಯದರ್ಶಿ, ಭಾರತೀಯ ಜನಗಣತಿ ಆಯೋಗ, ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಇತರ ಅರ್ಜಿಗಳ ಜೊತೆಗೆ ಸಮಾಜ ಸಂಪರ್ಕ ವೇದಿಕೆ (ರಿ) ಅರ್ಜಿ ವಿಚಾರಣೆಗೆ ಪರಿಗಣಿಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಎಚ್. ಕಾಂತರಾಜು ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ಸಿದ್ದಪಡಿಸಿರುವ ವರದಿಯ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸೂಚಿಸಬೇಕು. ಸಮೀಕ್ಷೆ ನಡೆಸಲು ಎಚ್. ಕಾಂತರಾಜ್ ಆಯೋಗಕ್ಕೆ 2014ರ ಜ.21ರಂದು ಸರ್ಕಾರ ನೀಡಿದ್ದ ಆದೇಶ ರದ್ದುಪಡಿಸಬೇಕು. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ-1995ರ ಸೆಕ್ಷನ್ 9(1) ಹಾಗೂ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ (ತಿದ್ದುಪಡಿ)2014ರ ಸೆಕ್ಷನ್ 3ನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಇದನ್ನೂಓದಿ:ಬಿಬಿಎಂಪಿ ಸಹಾಯಕ ಎಂಜಿನಿಯರ್‌ಗಳ ನೇಮಕಾತಿ ವಿಳಂಬ: ಕೆಪಿಎಸ್‌ಸಿಗೆ ಹೈಕೋರ್ಟ್ ನೋಟಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.