ETV Bharat / state

ಸಮಾಜ ವಿರೋಧಿ ಚಟುವಟಿಕೆಗಳಿಂದ ದೇಶವನ್ನು ರಕ್ಷಿಸುವುದು ನ್ಯಾಯಾಲಯಗಳ ಕರ್ತವ್ಯ: ಹೈಕೋರ್ಟ್

author img

By ETV Bharat Karnataka Team

Published : Mar 1, 2024, 9:34 PM IST

ಸಮಾಜ ವಿರೋಧಿ ಚಟುವಟಿಕೆಗಳಿಂದ ದೇಶವನ್ನು ರಕ್ಷಿಸುವುದು ಸಾಂವಿಧಾನಿಕವಾಗಿ ರಚನೆಯಾಗಿರುವ ನ್ಯಾಯಾಲಯಗಳ ಕರ್ತವ್ಯವೆಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ದೇಶವಿಲ್ಲದೇ ಸಂವಿಧಾನ ಇರಲು ಸಾಧ್ಯವಿಲ್ಲ. ರಾಷ್ಟ್ರ ಮತ್ತು ಸಮಾಜ ವಿರೋಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಜನರಿಂದ ದೇಶವನ್ನು ರಕ್ಷಿಸುವುದು ಸಾಂವಿಧಾನಿಕವಾಗಿ ರಚನೆಯಾಗಿರುವ ನ್ಯಾಯಾಲಯಗಳ ಕರ್ತವ್ಯ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ನಿಷೇಧಿತ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿಯಲ್ಲಿ ಆರೋಪ ಎದುರಿಸುತ್ತಿರುವ ಮಜೀನ್ ಅಬ್ದುಲ್ ರೆಹಮಾನ್ ಎಂಬವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‌ ಕುಮಾರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ. ರಾಷ್ಟ್ರದ ಸೌರ್ವಭೌಮತೆ, ಏಕತೆಗೆ ಅಪಾಯ ಉಂಟುಮಾಡುವವರ ರಕ್ಷಣೆಗೆ ಸಂವಿಧಾನದ ಕಲಂ 21 (ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವನದ ಹಕ್ಕು) ಬಳಕೆ ಮಾಡಲಾಗದು ಎಂದು ತಿಳಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಕಾನೂನಿನ ಕುರಿತಂತೆ ಕಾಳಜಿ ನೀಡದವರಿಗೆ ಮತ್ತು ದೇಶದ ಸಾರ್ವಭೌಮತ್ವ ಹಾಗೂ ಸಮಗ್ರತೆಗೆ ಅಪಾಯವೊಡ್ಡುವವರ ರಕ್ಷಣೆ ಮಾಡುವುದಕ್ಕಾಗಿ ಸಂವಿಧಾನದ ಪರಿಚ್ಛೇದ 21 ಅನ್ನು ಬಳಕೆ ಮಾಡುವುದಕ್ಕೆ ಸಾಧ್ಯವಿಲ್ಲ. ಸಂವಿಧಾನದ ಪರಿಚ್ಛೇದ 51 (ಎ)(ಎ) ಪ್ರಕಾರ ಭಾರತ ದೇಶದ ಪ್ರತಿಯೊಬ್ಬರೂ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು ಮತ್ತು ಅದರ ತತ್ವಗಳು ಮತ್ತು ಸಂಸ್ಥೆಗಳನ್ನು, ರಾಷ್ಟ್ರೀಯ ಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಬೇಕು. ಅದೇ ಕಲಂನ ಸಿ ವಿಭಾಗದಲ್ಲಿ ದೇಶದ ಸಾರ್ವಭೌಮತೆ, ಏಕತೆ ಮತ್ತು ಘನತೆಯನ್ನು ಎತ್ತಿಹಿಡಿದು ರಕ್ಷಿಸಬೇಕು. ಇವು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯಗಳಾಗಿವೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಈ ಪ್ರಕರಣದಲ್ಲಿ ಅರ್ಜಿದಾರ ಭಾರತ ಪ್ರಜೆಯಾಗಿದ್ದರೂ ತಮ್ಮ ಕರ್ತವ್ಯಗಳನ್ನು ಪಾಲಿಸುವುದನ್ನು ಬಿಟ್ಟು, ನಿಷೇಧಿತ ಸಂಘಟನೆಯೊಂದರ ಸದಸ್ಯರಾಗಿ ಭಾರತದ ವಿರುದ್ಧ ಸಮರ ಹೂಡಿದ್ದಾರೆ. ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ಆದರೂ ಸಂವಿಧಾನದಡಿ ರಕ್ಷಣೆ ಕೋರುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಪ್ರೇಮ್ ಸಿಂಗ್​ ಎಂಬುವರಿಗೆ ಇರಿದಿದ್ದ ಆರೋಪದಲ್ಲಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಪೊಲೀಸರಿಗೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಚು ರೂಪಿಸುವುದಕ್ಕಾಗಿ ಸಿದ್ದತೆ ಮಾಡಿಕೊಂಡಿದ್ದರು ಎಂಬ ಅಂಶ ಬಹಿರಂಗಗೊಂಡಿತ್ತು. ಈ ವರದಿಯ ಆಧಾರದಲ್ಲಿ ಪ್ರತ್ಯೇಕ ಎಫ್​ಐಆರ್​ ದಾಖಲು ಮಾಡಲಾಗಿತ್ತು.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ(ಎನ್​ಐಎ) ವಹಿಸಲಾಗಿತ್ತು. ಬಳಿಕ ಯುಎಪಿಎ ಕಾಯಿದೆಯಡಿ ಪ್ರಕರಣವನ್ನು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ಅರ್ಜಿದಾರರು ಆರನೇ ಆರೋಪಿಯಾಗಿದ್ದರು.

ಅಲ್ಲದೆ, ತನಿಖೆಯ ವೇಳೆ ಆರೋಪಿ ದೂರವಾಣಿ ಕರೆ ದಾಖಲೆಗಳು, ಸೇರಿದಂತೆ ಹಲವು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಲಾಗಿತ್ತು. ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಹಾಗಾಗಿ ಆತ ಹೈಕೋರ್ಟ್ ಮೊರೆ ಹೋಗಿದ್ದನು.

ವಿಚಾರಣೆ ವೇಳೆ ಎನ್​ಐಎ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ನಿಷೇಧಿತ ಭಯೋತ್ಪಾದಕ ಸಂಘಟನೆ ಸದಸ್ಯರಾಗಿದ್ದು, ಇತರೆ ಸಹ ಆರೋಪಿಗಳ ಜತೆ ಸೇರಿಕೊಂಡು ಮಂಗಳೂರನ್ನು ಗುರಿಯಾಗಿಟ್ಟು ಹಲವು ವಿಧ್ವಂಸಕ ಕೃತ್ಯಗಳನ್ನು ನಡೆಸುವುದಕ್ಕಾಗಿ ಸಿದ್ದತೆ ನಡೆಸಿದ್ದರು. ಅವರ ಉದ್ದೇಶ ಭಾರತದ ವಿರುದ್ಧ ಯುದ್ಧ ಸಾರುವುದಾಗಿತ್ತು. ಆತನ ವಿರುದ್ಧ ಐಪಿಸಿ 120ಬಿ, 121, 121ಎ ಮತ್ತು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಸೆಕ್ಷನ್ 18, 20 ಮತ್ತು 38ರಡಿ ಪ್ರಕರಣ ಹೂಡಲಾಗಿದೆ. ಆದ ಕಾರಣ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದರು.

ಇದನ್ನೂ ಓದಿ: ಜಾತಿ ಗಣತಿ ವರದಿಯನ್ನು ಸ್ವೀಕರಿಸಿರುವ ಬಗ್ಗೆ ಮಾಹಿತಿ ನೀಡಿ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.