ETV Bharat / state

'ಮೃದು ಸ್ವಭಾವ ನನ್ನ ದೌರ್ಬಲ್ಯವಲ್ಲ, ಕನಕಪುರ ಬಂಡೆ ವಿರುದ್ಧ ಜಯ ನಿಶ್ಚಿತ': ಈಟಿವಿ ಭಾರತ ಸಂದರ್ಶನದಲ್ಲಿ ಡಾ.ಮಂಜುನಾಥ್ ವಿಶ್ವಾಸ - Dr Manjunath Interview

author img

By ETV Bharat Karnataka Team

Published : Apr 7, 2024, 8:22 AM IST

Updated : Apr 7, 2024, 11:38 AM IST

'ಸಂಪತ್ತಿಗೆ ಬೆಲೆ ಕಟ್ಟಬಹುದು, ಆದರೆ ಸರಳತೆಗೆ ಬೆಲೆ ಕಟ್ಟೋಕ್ಕಾಗಲ್ಲ' ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್​.ಮಂಜುನಾಥ್ ಹೇಳಿದ್ದಾರೆ.

dr-manjunath-confident-of-victory-in-lok-sabha-election-talks-in-etv-bharat-interview
'ಮೃದು ಸ್ವಭಾವ ನನ್ನ ದೌರ್ಬಲ್ಯವಲ್ಲ, ಕನಕಪುರ ಬಂಡೆ ವಿರುದ್ಧ ಜಯ ನಿಶ್ಚಿತ': ಈಟಿವಿ ಭಾರತ ಸಂದರ್ಶನದಲ್ಲಿ ಡಾ.ಮಂಜುನಾಥ್ ವಿಶ್ವಾಸ

ಡಾ.ಮಂಜುನಾಥ್

ಬೆಂಗಳೂರು: ''ಮೃದು ಸ್ವಭಾವ ನನ್ನ ದೌರ್ಬಲ್ಯವಲ್ಲ, ರಾಜಕೀಯ ಪ್ರವೇಶಿಸಿದರೂ ನಾನು ರಾಜಕಾರಣ ಮಾಡಲ್ಲ. ನನ್ನ ಸ್ಪರ್ಧೆಯಿಂದ ಬಿಜೆಪಿ ಮತ್ತು ಜೆಡಿಎಸ್ ಹೃದಯಗಳು ಬೆಸೆದಿವೆ. ಕನಕಪುರ ಬಂಡೆ ವಿರುದ್ಧ ನನ್ನ ಜಯ ನಿಶ್ಚಿತ. ಜನಶಕ್ತಿ ಮುಂದೆ ಡಿ. ಕೆ ಸಹೋದರರ ಯಾವ ಚುನಾವಣೆ ತಂತ್ರಗಾರಿಕೆಗಳೂ ನಡೆಯುವುದಿಲ್ಲ''.. ಇವು ದೇಶದ ಗಮನ ಸೆಳೆದಿರುವ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಪ್ರಧಾನಿ ದೇವೇಗೌಡರ ಅಳಿಯರಾದ ಖ್ಯಾತ ಹೃದಯರೋಗ ತಜ್ಞ ಡಾ.ಸಿ.ಎನ್​.ಮಂಜುನಾಥ್ ಅವರ ಆತ್ಮವಿಶ್ವಾಸ ಹಾಗೂ ಅಂತರಾಳದ ಮಾತುಗಳು.

ಲೋಕಸಭೆ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸ್ಪರ್ಧೆ ಮಾಡಿರುವ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಮಂಜುನಾಥ್, ಚುನಾವಣೆ ಅಖಾಡಕ್ಕಿಳಿದಿರುವ ಕುರಿತು ಹಾಗೂ ಪ್ರಚಾರದ ಬಗ್ಗೆ 'ಈಟಿವಿ ಭಾರತ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂದರ್ಶನದ ಪ್ರಶ್ನೋತ್ತರಗಳು ಈ ಕೆಳಗಿನಂತಿವೆ.

ಪ್ರಶ್ನೆ: ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಹೇಗೆನಿಸುತ್ತಿದೆ. ಘಟಾನುಘಟಿ ಅಭ್ಯರ್ಥಿಯ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೀರಾ?

ಉತ್ತರ: ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ, ರಾಜಕೀಯಕ್ಕೆ ಬಂದಿರೋದು ನಿಜವಾಗಿಯೂ ರಾಜಕೀಯ ಮಾಡಲು ಅಲ್ಲ. ಇದನ್ನು ಎಲ್ಲಿ ಬೇಕಾದರೂ ಹೇಳುತ್ತೇನೆ. ನಾನು ಸೇವೆ ಮಾಡುವ ಉದ್ದೇಶದಿಂದಲೇ ರಾಜಕೀಯಕ್ಕೆ ಬಂದಿರುವುದು, ಜಯದೇವ ಆಸ್ಪತ್ರೆಯಲ್ಲಿ ರೋಗಿಗಳ ಸೇವೆ ಮಾಡಿದಂತೆ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರ ಸೇವೆ ಮಾಡಬಹುದು ಅಂತ ಬಹಳ ಜನರು ನನ್ನ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದ್ದಾರೆ. ಚುನಾವಣೆ ಅಂದರೆ ಅದು ಸ್ಪರ್ಧೆಯೇ, ಅದರಲ್ಲಿ ಎರಡನೇ ಮಾತಿಲ್ಲ. ಅದನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ನಾನು ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದೇನೆ. ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಕಾರ್ಯಕರ್ತರ ಹೃದಯಗಳು ಒಂದಾಗಿವೆ. ಎಲ್ಲರೂ ತುಂಬಾ ಉತ್ಸುಕರಾಗಿದ್ದಾರೆ. ನನ್ನ ಸ್ಪರ್ಧೆಯಿಂದ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬಂದಿದೆ. ಚುನಾವಣೆ ಗೆಲುವಿನ ಬಗ್ಗೆ ನಾನೂ ಸಹ ಸಕಾರಾತ್ಮಕವಾಗಿದ್ದೇನೆ.

ಪ್ರಶ್ನೆ: ಮಾಜಿ ಪ್ರಧಾನಿ ದೇವೇಗೌಡರ ಅಳಿಯರಾಗಿ ನಿಮ್ಮದೇ ಆದ ಜೆಡಿಎಸ್ ಪಕ್ಷ ಇರುವಾಗ, ಬಿಜೆಪಿಯಿಂದ ಸ್ಪರ್ಧೆ ಯಾಕೆ?

ಉತ್ತರ: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಚುನಾವಣಾ ಮೈತ್ರಿ ಮಾಡಿಕೊಂಡಿವೆ. ನನ್ನ ಸ್ಪರ್ಧೆಯ ಪಕ್ಷ ಮತ್ತು ಚಿಹ್ನೆಯನ್ನು ಪಕ್ಷದ ವರಿಷ್ಠರು ನಿರ್ಧಾರ ಮಾಡಿದ್ದಾರೆ. ಕ್ಷೇತ್ರ ಮತ್ತು ಚಿಹ್ನೆಯು ವರಿಷ್ಠರ ತೀರ್ಮಾನ, ಇದರಲ್ಲಿ ನನ್ನ ಆಯ್ಕೆ ಇರಲಿಲ್ಲ. ಎರಡೂ ಪಕ್ಷಗಳ ಮುಖಂಡರು ಯಾವ ರೀತಿ ಲೆಕ್ಕಾಚಾರ ಮಾಡಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಇದೊಂದು ತರಹ ಸಿಂಬಾಲಿಕ್ ಎಕ್ಸ್​ಚೇಂಜ್ ಇದ್ದ ಹಾಗೆ.

ಪ್ರಶ್ನೆ: ನಿಮ್ಮ ಸೇವೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಗಮನ ಸೆಳೆದಿದ್ದು ಹೇಗೆ?

ಉತ್ತರ: ಅವರಿಗೆ ನನ್ನ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ನಾನು ಮಾಡಿರುವ ಸುಧಾರಣೆ, ನನ್ನ ಸೇವೆ, ಸಾಧನೆ, ನಮ್ಮ ಮನೋಭಾವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ತಜ್ಞರು, ಸಾಧಕರು, ಪರಿಣತರಿಗೆ ಹೆಚ್ಚು ಮಹತ್ವ ಕೊಟ್ಟಿದೆ. ಆ ಹಿನ್ನೆಲೆಯಲ್ಲಿ ನನ್ನ ಆಯ್ಕೆ ಮಾಡಿದ್ದಾರೆ.

ಪ್ರಶ್ನೆ: ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ?

ಉತ್ತರ: ಕ್ಷೇತ್ರವನ್ನು ನಾನೇನು ಕೇಳಿಕೊಂಡು ಹೋಗಿರಲಿಲ್ಲ. ಅವರಾಗಿಯೇ ಕ್ಷೇತ್ರ ಆಯ್ಕೆ ಮಾಡಿದ್ದಾರೆ.

ಪ್ರಶ್ನೆ: ಒಬ್ಬ ಪ್ರಬಲ ಅಭ್ಯರ್ಥಿ ವಿರುದ್ಧ ಮತ್ತೊಬ್ಬ ಪ್ರಬಲ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆಯೇ?

ಉತ್ತರ: ಬಹುಶಃ ಇರಬಹುದು ಅಂತ ಅನಿಸುತ್ತಿದೆ.

ಪ್ರಶ್ನೆ: ಚುನಾವಣೆ ಪ್ರಚಾರ ಹೇಗೆ ನಡೆಯುತ್ತಿದೆ?

ಉತ್ತರ: ತುಂಬಾ ಚೆನ್ನಾಗಿ ನಡೆಯುತ್ತಿದೆ. 8 ಕ್ಷೇತ್ರಗಳಲ್ಲೂ ಪ್ರಚಾರ ನಡೆಸುತ್ತಿದ್ದೇನೆ. ಪ್ರಾಥಮಿಕ ಹಂತದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಭೆ ಜಂಟಿಯಾಗಿ ನಡೆಯುತ್ತಿದೆ. ಕಾರ್ಯಕರ್ತರು ಮತ್ತು ಮತದಾರರನ್ನು ಭೇಟಿ ಮಾಡಿದಾಗ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇದರಿಂದ ನನ್ನ ಆತ್ಮವಿಶ್ವಾಸ ಸಹ ದಿನೇ ದಿನೇ ಜಾಸ್ತಿಯಾಗುತ್ತಿದೆ.

ಡಾ.ಮಂಜುನಾಥ್

ಪ್ರಶ್ನೆ: ಕ್ಷೇತ್ರದಲ್ಲಿ ಬಿಜೆಪಿ - ಜೆಡಿಎಸ್ ನಡುವೆ ಗೊಂದಲ ಇಲ್ಲವೇ?

ಉತ್ತರ: ಎರಡೂ ಪಕ್ಷಗಳ ನಡುವೆ ಯಾವುದೇ ಗೊಂದಲಗಳಿಲ್ಲ. ಈ ಸಾರಿ ಅಣ್ಣ-ತಮ್ಮಂದಿರ ತರಹ ಕೆಲಸ ಮಾಡೋಣ ಅಂತ ಅವರವರೇ ಮಾತಾಡಿಕೊಳ್ಳುತ್ತಿದ್ದಾರೆ. ಹಿಂದೆ ಇದ್ದ ವೈಮನಸ್ಸು, ಈಗೆಲ್ಲಾ ಹೋಗಿಬಿಟ್ಟಿದೆ.

ಪ್ರಶ್ನೆ: ಬಿಜೆಪಿ ಅಂದರೆ ಧರ್ಮಾಧಾರಿತ ಪಕ್ಷವೆನ್ನುವ ಅಭಿಪ್ರಾಯವಿದೆ. ಈ ಪಕ್ಷ ನಿಮ್ಮ ಸ್ವಭಾವಕ್ಕೆ ಸೂಕ್ತ ಅನಿಸುತ್ತಿದೆಯಾ?

ಉತ್ತರ: ಹಾಗೇನಿಲ್ಲ.. ಜನರು ನನ್ನನ್ನು ನೋಡುತ್ತಿರುವ ದೃಷ್ಟಿ ಬೇರೆ ಇದೆ. ನನ್ನ ಸರಳತೆ ಮೆಚ್ಚಿಕೊಂಡಿದ್ದಾರೆ. ಬಹಳ ಪ್ರೀತಿಸುತ್ತಾರೆ. ಸಂಪತ್ತಿಗೆ ಬೆಲೆ ಕಟ್ಟಬಹುದು, ಆದರೆ ಸರಳತೆಗೆ ಬೆಲೆ ಕಟ್ಟೋಕಾಗಲ್ಲ. ನನಗೆ ಸಂಪೂರ್ಣ ನಂಬಿಕೆ ಇದೆ. ಲೋಕಸಭೆ ಚುನಾವಣೆಯಲ್ಲಿ ಜನರು ನನಗೆ ಆಶೀರ್ವಾದ ಮಾಡುತ್ತಾರೆ.

ಪ್ರಶ್ನೆ: ನಿಮ್ಮ ಗೆಲುವಿಗೆ ಚುನಾವಣೆ ತಂತ್ರಗಾರಿಕೆ ಏನು?

ಉತ್ತರ: ಪ್ರಧಾನಿ ವರ್ಚಸ್ಸು ಇದೆ, ನಮ್ಮ ಕಾರ್ಯಕರ್ತರು ಹಾಗೂ ನಾಯಕರಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಯಡಿಯೂರಪ್ಪನವರು, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮುಂತಾದವರು ಇದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಮ್ಮ ಶಕ್ತಿ ಹೆಚ್ಚಾಗಿದೆ. ಬಹಳ ಮುಖ್ಯವಾಗಿ ಕಾರ್ಯಕರ್ತರಲ್ಲಿ ಹೊಸ ಹುರುಪು, ಹುಮ್ಮಸ್ಸು ಬಂದಿದೆ.

ಪ್ರಶ್ನೆ: ಡಿಕೆ ಬ್ರದರ್ಸ್ ರಾಜಕಾರಣದ ತಂತ್ರಗಾರಿಕೆಯಲ್ಲಿ ಪಳಗಿದವರು, ಅವರನ್ನು ನೀವು ಹೇಗೆ ಎದುರಿಸುತ್ತೀರಿ?

ಉತ್ತರ: ಜನಶಕ್ತಿ ಮುಂದೆ ಯಾವ ತಂತ್ರಗಾರಿಕೆಯೂ ನಡೆಯುವುದಿಲ್ಲ. ಜನರ ಅಭಿಪ್ರಾಯ ಒಟ್ಟಾಗಿ ಮೂಡಿಬಂದಾಗ ಜನತೆಗೇ ಹೆಚ್ಚು ಶಕ್ತಿ ಇರುತ್ತದೆ. ಯಾವುದೇ ತಂತ್ರಗಾರಿಕೆ ಆಟ ನಡೆಯುವುದಿಲ್ಲ. ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಗೆ ಅಜಗಜಾಂತರ ವ್ಯತ್ಯಾಸ ಇರುತ್ತದೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೂ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅದಕ್ಕೆ ವಿರುದ್ಧ ಫಲಿತಾಂಶ ಒಂದೇ ಕ್ಷೇತ್ರದಲ್ಲಿ ಬಂದಿದೆ. ಈ ತರಹದ ಫಲಿತಾಂಶ ಲೋಕಸಭೆ ಚುನಾವಣೆಯಲ್ಲಿ ವ್ಯಕ್ತವಾಗುವ ಎಲ್ಲಾ ಸೂಚನೆಗಳು ನನಗೆ ಕಾಣುತ್ತಿವೆ.

ಡಾ.ಮಂಜುನಾಥ್

ಪ್ರಶ್ನೆ: ಎಷ್ಟು ಮತಗಳ ಅಂತರದಿಂದ ನೀವು ಗೆಲ್ಲುತ್ತೀರಿ?

ಉತ್ತರ: ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಇನ್ನೂ ಸ್ವಲ್ಪ ದಿನ ಬೇಕು. 5 - 10 ದಿನಗಳಾದ ಮೇಲೆ ಗೆಲುವಿನ ಅಂತರದ ಬಗ್ಗೆ ಸ್ಪಷ್ಪತೆ ಸಿಗಲಿದೆ.

ಪ್ರಶ್ನೆ: ನಿಮಗೆ ಗೆಲುವಿನ ಬಗ್ಗೆ ವಿಶ್ವಾಸವಿದೆಯಾ?

ಉತ್ತರ: ಜನರ ಆಶೀರ್ವಾದ ಹಾಗೂ ಮತದಾರರ ಸಕಾರಾತ್ಮಕ ಪ್ರತಿಕ್ರಿಯೆಗಳಿಂದ ನನಗೆ ಗೆಲುವು ಸಿಗಲಿದೆ ಎನ್ನುವ ವಿಶ್ವಾಸವಿದೆ.

ಪ್ರಶ್ನೆ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಗ್ಗೆ ನಿಮ್ಮ ಆದ್ಯತೆ ಏನು?

ಉತ್ತರ: ಕುಡಿಯುವ ನೀರಿನ ಸಮಸ್ಯೆ ಇದೆ. ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಯೋಚನೆಯಿದೆ. ರೇಷ್ಮೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು. ಹೆದ್ದಾರಿಯಲ್ಲಿ ಅಪಘಾತದಲ್ಲಿ ಗಾಯಗೊಂಡವರಿಗೆ ಟ್ರಾಮಾ ಸೆಂಟರ್ ಆರಂಭಿಸುವುದು ಸೇರಿದಂತೆ ಆರೋಗ್ಯ, ಶಿಕ್ಷಣ, ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ.

ಪ್ರಶ್ನೆ: ರಾಜಕಾರಣಿಯಾಗಿ ನೀವು ಟಫ್ ಫೈಟ್ ನೀವು ಕೊಡುತ್ತೀರಾ?

ಉತ್ತರ: ಹೌದು, ಅದರಲ್ಲಿ ಎರಡು ಮಾತಿಲ್ಲ.. ನಿಜವಾಗಿಯೂ ಫೈಟ್ ಕೊಡುತ್ತೇನೆ. ಮೃದು ಸ್ವಭಾವ, ಅದು ದೌರ್ಬಲ್ಯ ಅಂತ ಭಾವಿಸಬಾರದು. ಎಷ್ಟೋ ಸಾರಿ ಮೃದು ಸ್ವಭಾವ ಅಂದರೆ ನಾವು ಬೇರೆಯವರಿಗೆ ನೀಡುವ ಗೌರವ, ಸಂಸ್ಕಾರ ಆಗಿದೆ. ಬಹಳಷ್ಟು ಸಾಧಕರು ಮೃದು ಸ್ವಭಾವದವರಿದ್ದಾರೆ. ಅವರು ಕಡಿಮೆ ಮಾತನಾಡುತ್ತಾರೆ. ಮಾತನಾಡುವುದು ಕಡಿಮೆಯಾದರೂ ಸಾಧನೆ ಮಾಡುವುದು ಜಾಸ್ತಿ ಇರುತ್ತದೆ.

ಪ್ರಶ್ನೆ: ಚುನಾವಣೆಯಲ್ಲಿ ಗೆದ್ದರೆ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗುತ್ತೀರಾ?

ಉತ್ತರ: ಹೃದಯರೋಗ ತಜ್ಞನಾಗಿ ಕೆಲಸ ಮಾಡಿದ್ದರಿಂದ ಜನರು ಮಂತ್ರಿಯಾಗುವ ಬಗ್ಗೆ ಅವರವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬರುವುದು ನಿಶ್ಚಿತ. ನಾನು ಮೊದಲು ಚುನಾವಣೆಯಲ್ಲಿ ಗೆದ್ದು ಸಂಸದನಾಗಬೇಕು. ಈಗಲೇ ಮಂತ್ರಿಯಾಗುವ ಬಗ್ಗೆ ಮಾತನಾಡುವುದು ಸೂಕ್ತವಲ್ಲ.

ಇದನ್ನೂ ಓದಿ: ಕುಟುಂಬದ ಬೆಂಬಲ, ಜನರ ಆಶೀರ್ವಾದ ನನಗಿದೆ: ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ವಿಶ್ವಾಸ - Priyanka Jarakiholi Interview

Last Updated : Apr 7, 2024, 11:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.