ETV Bharat / state

ನೇಹಾ ಕೊಲೆ ಪ್ರಕರಣ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳಬೇಡಿ: ಮಠಾಧೀಶರ ಆಗ್ರಹ - Neha murder case

author img

By ETV Bharat Karnataka Team

Published : Apr 20, 2024, 2:35 PM IST

ನೇಹಾ ಕೊಲೆ ಪ್ರಕರಣವನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳದೇ ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಮಠಾಧೀಶರು ಆಗ್ರಹಿಸಿದರು.

Fakira Dingaleshwar Shri  Dharwad  political weapon
ಫಕೀರ್ ದಿಂಗಾಲೇಶ್ವರ ಶ್ರೀ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿಕೆಗಳು

ಫಕೀರ್ ದಿಂಗಾಲೇಶ್ವರ ಶ್ರೀ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿಕೆಗಳು

ಹುಬ್ಬಳ್ಳಿ: ನೇಹಾ ಹಿರೇಮಠ ಸಾವು ದೇಶವನ್ನು ದುಃಖಕ್ಕೀಡು ಮಾಡುವಂತಾಗಿದ್ದು, ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳದೇ ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಫಕೀರ ದಿಂಗಾಲೇಶ್ವರ ಶ್ರೀಗಳು ಆಗ್ರಹಿಸಿದರು.

ನಗರದ ಚೆನ್ನಮ್ಮ ವೃತ್ತದಲ್ಲಿ ಶನಿವಾರ ನೇಹಾ ಹಿರೇಮಠ ಕೊಲೆ ಖಂಡಿಸಿ ಫಕೀರ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶ ನಡೆಯಿತು. ಈ ವೇಳೆ ಮಾತನಾಡಿದ ಅವರು, ನೇಹಾಳಗೆ ನ್ಯಾಯ ಸಿಗಬೇಕಿದೆ. ಮಹಿಳೆಯರಿಗೆ ರಕ್ಷಣೆ ಹಾಗೂ ಸ್ವಾತಂತ್ರ್ಯ ಸಿಗಬೇಕು. ಬಿಜೆಪಿ ಪಕ್ಷದವರು ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳುವ ನೀಚ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಮಾನವೀಯತೆ ಇಲ್ಲದಂತಹ ಪರಿಸ್ಥಿತಿ ಉದ್ಭವಿಸಿದ್ದು, ಈ ಸಾವನ್ನು ಬಹು ಸಂಖ್ಯಾತ ರಾಜಕಾರಣಿಗಳು ಬಳಕ ಮಾಡಿಕೊಳ್ಳುತ್ತಾರೆ ಎಂದು ನಾಡಿನ ಜನ ಅಂದುಕೊಂಡಿರಲಿಲ್ಲ ಎಂದರು.

ಯಾವುದೇ ಸರ್ಕಾರ ಇರಲಿ ಇಂತಹ ಘಟನೆ ಹಾಗೂ ಕೊಲೆಯನ್ನು ಸಾಮಾನ್ಯವಾಗಿ ತೆಗೆದುಕೊಳ್ಳಬಾರದು. ಏಕಕಾಲಕ್ಕೆ ಬೆಂಗಳೂರು, ತುಮಕೂರು, ಹುಬ್ಬಳ್ಳಿಯಲ್ಲಿ ಕೊಲೆಗಳು ಆಗುತ್ತಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಏನು ಮಾಡುತ್ತಿವೆ ಎಂಬ ಪ್ರಶ್ನೆ ಮೂಡಿದೆ ಎಂದರು.

ಒಂದು ಪಕ್ಷ ಲವ್ ಜಿಹಾದ್ ಎಂದು ಹೇಳುತ್ತಾ ಬಂದಿದ್ದೇವೆ, ಆದರೇ ಇಂತಹ ಕ್ರೂರಿಗಳಿಗೆ ಉಗ್ರ ಶಿಕ್ಷೆ ಏಕೆ ಆಗುತ್ತಿಲ್ಲ. ಎರಡೂ ಪಕ್ಷಗಳಿಗೆ ಮಾನ ಮರ್ಯಾದೆ ಇದ್ದರೆ ಆರೋಪಿಗೆ ತಕ್ಷಣವೇ ಉಗ್ರ ಶಿಕ್ಷೆ ಆಗಬೇಕು. ಎಲ್ಲ ವಿದ್ಯಾರ್ಥಿಗಳು ನೋವಿನಲ್ಲಿ ಇರುವವರು ಕೂಡಲೇ ಪಾಲಕರು ಹಾಗೂ ನಾಡಿನ ಮುಖಂಡರ ಗಮನಕ್ಕೆ ತಂದು ರಕ್ಷಣೆ ಪಡೆಯಬೇಕು ಎಂದು ಸಲಹೆ ನೀಡಿದರು.

ಇನ್ನೂ ಪ್ರಧಾನಿಯವರ ಬೇಟಿ ಬಚಾವೋ, ಬೇಟಿ ಪಢಾವೋ ಎಂಬುದು ಅಕ್ಷರಶಃ ಅನುಷ್ಠಾನಕ್ಕೆ ಬರಬೇಕು.‌ ಸರಕಾರವೇ ಮಹಿಳೆಯರ ರಕ್ಷಣೆಗೆ ಪರವಾನಿಗೆಯ ಆಯುಧ ನೀಡುವಂತಹ ವ್ಯವಸ್ಥೆ ಜಾರಿಗೆ ಬರಬೇಕು. ನೇಹಾ ಘಟನೆಯನ್ನು ಎಲ್ಲರೂ ನಿಂತು ನೋಡಿದ್ದಾರೆ. ಆದರೆ ಆಕೆಯ ರಕ್ಷಣೆಗೆ ಯಾರು ಬರಲಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರ ರಕ್ಷಣೆಗೆ ಆಯುಧ ಇಟ್ಟು ಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಹೊಸಪೇಟೆಯ ಅಮ್ಮನವರು ಮಾತನಾಡಿ, ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಿ ಎಂದು ಸೆರಗು ಒಡ್ಡಿ ಬೇಡಿಕೊಳ್ಳುತ್ತೇವೆ. ಹೆಣ್ಣಿಗೆ ಬೆಂಬಲ, ರಕ್ಷಣೆ ನೀಡುವ ಕೆಲಸ ಆಗಬೇಕಿದೆ. ದೇಶಕ್ಕೆ ಯೋಗಿ ಆದಿತ್ಯನಾಥ್​ ಅವರಂತಹ ನಾಯಕ ಬೇಕಿದೆ. ಇಂತಹ ಕೊಲೆಗಾರನಿಗೆ ಸ್ಪಾಟ್​ನಲ್ಲಿಯೇ ಎನ್​ಕೌಂಟರ್​ ಮಾಡಬೇಕಿದೆ‌. ಅವನಿಗೆ ಉಗ್ರ ಶಿಕ್ಷೆ ಆಗೋವರೆಗೂ ಪ್ರತಿಭಟನೆ ನಿಲ್ಲದು. ಹಿಂದೂ ಸಮಾಜದಲ್ಲಿ ಒಗ್ಗಟ್ಟು ಏಕತೆ ಇಲ್ಲದ ಕಾರಣಕ್ಕೆ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇನ್ನಾದರೂ ಹಿಂದೂಗಳು ಒಗ್ಗಟ್ಟಿನಿಂದ ಪ್ರದರ್ಶನ ತೋರುವ ಮೂಲಕ ದೇಶ,‌ ಮಹಿಳೆಯರ ರಕ್ಷಣೆಗೆ ಮುಂದಾಗಬೇಕು. ಮಹಿಳೆಯರ ಮೇಲೆ ಇಂತಹ ಘಟನೆ ಮಾಡಿದವರ ತಕ್ಷಣವೇ ಎನ್​ಕೌಂಟರ್​ ಆಗುವ ಕಾನೂನು ತರಬೇಕು. ಮಠಾಧೀಶರು ಮಠ ಬಿಟ್ಟು ಹೋರಾಟಕ್ಕೆ ಬರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸಮಾವೇಶದಲ್ಲಿ ಶಿಗ್ಗಾಂವಿ ಸಂಗನಬಸವ ಸ್ವಾಮೀಜಿ, ಬೊಮ್ಮನಹಳ್ಳಿ ಶಿವಯೋಗಿ ಮಹಾಸ್ವಾಮಿಜಿ, ಬಸವಧರ್ಮ ಪೀಠದ ಶ್ರೀ, ಮುರಘಾಮಠದ ಮಲ್ಲಿಕಾರ್ಜುನ ಶ್ರೀ, ಸವಣೂರಿನ ದೊಡ್ಡ ಕಲ್ಮಠದ ಶ್ರೀ ಸೇರಿದಂತೆ ಮೊದಲಾದವರು ಆರೋಪಿಗೆ ಕಾನೂನಿನಲ್ಲಿರುವ ಕ್ರೂರ ಶಿಕ್ಷೆ ನೀಡಿ, ನೇಹಾಳ ಸಾವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.

ಕಾಲಕ್ಕೆ ತಕ್ಕಂತೆ ಕಾನೂನು ಬದಲಾಗಬೇಕು: ನೇಹಾ ಹಿರೇಮಠ ಅವರ ಸಾವು ಖಂಡನೀಯ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು. ಈ ತರಹ ಮರುಕಳಿಸದಂತೆ ಕಾಲಕ್ಕೆ ತಕ್ಕಂತೆ ಬದಲಾವಣೆ ಆದರೆ ಒಳ್ಳೆಯದು ಎಂದು ಶಿರಹಟ್ಟಿಯ ಫಕೀರ್ ಸಿದ್ದಾರಮೇಶ್ವರ ಶಿವಯೋಗಿಗಳು ಹೇಳಿದರು. ಇಂದು ಮೃತ ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ಶಿಕ್ಷೆ ಆಗದೇ ಹೋದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಹೀಗಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ಸಮೂದಾಯವನ್ನು ಸರಿಯಾದ ದಾರಿಯಲ್ಲಿ ತರುವ ಕೆಲಸವನ್ನು ಸಾಮಾಜಕ ಧುರೀಣರು ಮಾಡಬೇಕಿದೆ. ರೋಗ ಬಂದರೇ ಔಷಧಿ ಬದಲಾವಣೆ ಆಗುವಂತೆ ಸಮಸ್ಯೆ ಪರಿಹಾರಕ್ಕೆ ಕಾನೂನು ಬದಲಾವಣೆ ಆಗಬೇಕು. ಇದೀಗ ಸಮಾಜದಲ್ಲಿ ದುರಾಸೆ ಹೆಚ್ಚಾಗಿದೆ. ಆಸ್ತಿ, ವೈಯಕ್ತಿಕ ಆಚಾರ, ವಿಚಾರದಿಂದ ಮಕ್ಕಳು ಹಿರಿಯರ ಮಾತು ಕೇಳದ ಕಾರಣಕ್ಕೆ ಈ ತರಹದ ದುರ್ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು.

ನೇಹಾಳ ಸಾವಿಗೆ ಸೂಕ್ತ ನ್ಯಾಯ ಒದಗಿಸಲಾಗುವುದು: ಮೃತ ನೇಹಾಳ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇದೊಂದು ಹೇಯ ಕೃತ್ಯವಾಗಿದೆ. ಇದನ್ನು ಎಲ್ಲ ಸಮಾಜಗಳು ತೀವ್ರವಾಗಿ ಖಂಡಿಸಲೇಬೇಕು. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ ಎಂದರು.

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಹಾಗೂ ಇಂತಹ ಘಟನೆಗಳು ಪದೇ ಪದೇ ಮರುಕಳಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದು ಸೂಕ್ಷ್ಮ ಸಂದರ್ಭ. ಹೀಗಾಗಿ ಜವಾಬ್ದಾರಿ ಸ್ಥಾನದಲ್ಲಿದ್ದು, ಅವರೊಂದಿಗೆ ನಾನು ಕೂಡಾ ಇದ್ದೇನೆ. ಕುಟುಂಬಕ್ಕೆ ಸಾಂತ್ವನ, ಸಮಾಧಾನ ಹೇಳಿದ್ದೇನೆ. ಆದರೂ ತೀರದಂತಹ ದುಃಖ ಕುಟುಂಬಕ್ಕಿದೆ. ಸಮೂದಾಯ ದೊಡ್ಡದಾಗಿದ್ದು, ಇಡೀ ಸಮಾಜ ಅವರೊಂದಿಗೆ ಇದೆ. ಬೇರೆ ಕಡೆಗಳಲ್ಲಿ ಆಗಿರುವ ಘಟನೆಗಳನ್ನು ಈ ಘಟನೆಗೆ ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ ಎಂದರು.

ನೇಹಾ ಹತ್ಯೆ ಘಟನೆಯನ್ನು ರಾಜಕಾರಣ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಘಟನೆಗಳಲ್ಲಿ ರಾಜಕಾರಣ ಬದಿಗಿಟ್ಟು, ಓರ್ವ ತಾಯಿಯಾಗಿ ಆ ಜೀವಕ್ಕೆ ನ್ಯಾಯ ಒದಗಿಸುವುದು ನನ್ನ ಆದ್ಯವಾದ ಕರ್ತವ್ಯವಾಗಿದೆ. ಇಂತಹ ಘಟನೆಗಳಲ್ಲಿ ರಾಜಕೀಯ ಕುರಿತು ಚರ್ಚೆ ಮಾಡಿದರೇ ತನಿಖೆಯ ಹಾದಿ ಬೇರೆ ಸ್ವರೂಪ ಪಡೆಯಲಿದೆ. ಹೀಗಾಗಿ ಹೆಚ್ಚು ಮಾತನಾಡುವುದಿಲ್ಲ ಎಂದರು.

ಓದಿ: ನೇಹಾ ಹತ್ಯೆ ಪ್ರಕರಣ: ಮಗ ಮಾಡಿದ ತಪ್ಪಿಗೆ ಕ್ಷಮೆ ಕೋರಿದ ಆರೋಪಿ ತಾಯಿ - Faiyaz Mother Apologized

ETV Bharat Logo

Copyright © 2024 Ushodaya Enterprises Pvt. Ltd., All Rights Reserved.